ವಿಠ್ಠಲನ ಪಾದ ಸ್ಪರ್ಶಕ್ಕೆ ಮೇ ತಿಂಗಳು 5 ರವರೆಗೆ ಅವಕಾಶವಿಲ್ಲ

ವಿಠ್ಠಲನ ಪಾದ ಸ್ಪರ್ಶಕ್ಕೆ ಮೇ ತಿಂಗಳು 5 ರವರೆಗೆ ಅವಕಾಶವಿಲ್ಲ

ದಾವಣಗೆರೆ, ಏ. 2 – ಪಂಡರಾಪುರದಲ್ಲಿ ಶ್ರೀ ಪಾಂಡುರಂಗ ಸ್ವಾಮಿಯ ಪಾದ ಸ್ಪರ್ಶ ದರ್ಶನವನ್ನು ತಾತ್ಕಾಲಿಕವಾಗಿ ಬರುವ ಮೇ 5ರವರೆಗೆ ನಿಲ್ಲಿಸಲಾಗಿದೆ. 

ಪ್ರತಿದಿನ ಮಂದಿರದ ಜೀರ್ಣೋದ್ಧಾರ ಕಾರ್ಯಕ್ರಮ ಭರದಿಂದ ಸಾಗಿದ್ದು, ಇದರ ಅಂಗವಾಗಿ ಶ್ರೀ ಪಾಂಡುರಂಗ ವಿಠ್ಠಲ ಮೂರ್ತಿಯ ಸಂರಕ್ಷಣೆಗಾಗಿ ಗರ್ಭ ಗುಡಿಯಲ್ಲಿ ಗುಂಡು ನಿರೋ ಧಕ ಗಾಜನ್ನು ಅಳವಾಡಿಸಲಾಗುತ್ತಿದೆ. ಅಲ್ಲಿದ್ದ ಬೆಳ್ಳಿಯ ಮಂಟಪದ ಅಲಂಕಾರವನ್ನು ತೆರವುಗೊಳಿ ಸಲಾಗಿದೆ. ಗ್ರಾನೈಟ್‌ ಅಳವಡಿಸುವ ಕಾಮಗಾರಿ ಮತ್ತು ಇತರೇ ಕಾಮಗಾರಿಗಳು ನಡೆಯುತ್ತಿವೆ. 

ಇದೇ ರೀತಿ ಶ್ರೀ ರುಕ್ಮಿಣಿದೇವಿ ಮಂದಿರದ ಕಾಮಗಾರಿಗಳು ಸಾಗಿದ್ದು, ಇವೆಲ್ಲವು ಪುರಾತತ್ವ ಇಲಾಖೆಯ ಮಾರ್ಗದರ್ಶನದಲ್ಲಿ ನಡೆಯುತ್ತಿವೆ. ಕಾರಣ, ಬೆಳಿಗ್ಗೆ 8 ರಿಂದ 10ರವರೆಗೆ ದೂರದ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಮಂದಿರವು 700 ವರ್ಷಗಳ ಹಿಂದೆ ಇದ್ದ ರೀತಿಯಲ್ಲಿ ಕಾಣಸಿಗುವಂತೆ ಮಾಡಲಾಗುತ್ತಿದೆ. ಅಂದರೆ ಶ್ರೀ ಪಾಂಡುರಂಗನು ತನ್ನ ಲೀಲಾವಿನೋದವನ್ನು ತೋರಿಸಿದ ಸಂತ ಮಣಿಗಳಾದ ಶ್ರೀ ಸಂತ ಶಿರೋಮಣಿ ನಾಮದೇವ ಮಹಾರಾಜರು, ಶ್ರೀ ಸಂತ ಏಕನಾಥರು, ಶ್ರೀ ಜ್ಞಾನೇಶ್ವರು, ಶ್ರೀ ನಿವೃತ್ತಿನಾಥರು, ಶ್ರೀ ಸಂತ ತುಕಾರಾಮರು ಇನ್ನೂ ಅನೇಕ ಸಂತ ಮಣಿಗಳು ಅವರಿದ್ದ ಕಾಲದಲ್ಲಿ ಇದ್ದ ರೀತಿಯಲ್ಲಿ ಕಾಣಸಿಗುವಂತೆ ಮಾಡಲಾಗುತ್ತದೆ. 

ದೇವಲಾಯದ ಎಲ್ಲಾ ಕಂಬಗಳನ್ನು ಶುಚಿ ಗೊಳಿಸಿ ಹಿಂದಿನ ವೈಭವಗಳೊಂದಿಗೆ ಸಜ್ಜುಗೊಳಿಸ ಲಾಗುತ್ತಿದೆ ಎಂದು ಮಂದಿರದ ಕಾರ್ಯಧಿಕಾರಿ ರಾಜೇಂದ್ರ ಶೇಳಿಕೆ ಮಾಹಿತಿ ನೀಡಿದರು. 

ಈ ಹಿನ್ನೆಲೆಯಲ್ಲಿ ಪಂಡರಾಪುರಕ್ಕೆ ತೆರಳುವ ಭಕ್ತರು ಮೇ 5ರ ನಂತರ ತೆರಳಿ ಶ್ರೀ ಪಾಂಡುರಂಗ ಪಾದಸ್ಪರ್ಶ ದರ್ಶನ ಭಾಗ್ಯವನ್ನು ಪಡೆಯಬಹುದು ಎಂದು ಅವರು ವಿವರಿಸಿದ್ದಾರೆ.

error: Content is protected !!