ಬಾಲ್ಯ ವಿವಾಹ ಪ್ರಕರಣಗಳ ತಡೆಗೆ ನ್ಯಾ. ರಾಜೇಶ್ವರಿ ಶ್ಲ್ಯಾಘನೆ

ಬಾಲ್ಯ ವಿವಾಹ ಪ್ರಕರಣಗಳ ತಡೆಗೆ ನ್ಯಾ. ರಾಜೇಶ್ವರಿ ಶ್ಲ್ಯಾಘನೆ

ದಾವಣಗೆರೆ, ಏ.3- ಕಳೆದ 2 ತಿಂಗಳಲ್ಲಿ 25 ಬಾಲ್ಯ ವಿವಾಹ ಪ್ರಕರಣಗಳಲ್ಲಿ, 22 ಬಾಲ್ಯ ವಿವಾಹಗಳು ನಡೆಯುವುದನ್ನು ತಡೆದಿರುವುದಕ್ಕೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ  ರಾಜೇಶ್ವರಿ ಎನ್. ಹೆಗಡೆ ಶ್ಲ್ಯಾಘಿಸಿದರು.

ನಗರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸಭಾಂಗಣದಲ್ಲಿ ಬುಧವಾರ ನಡೆದ ಮಾಸಿಕ ಸಭೆಯಲ್ಲಿ ಅವರು ಮಾತನಾಡಿದರು.

ಬಾಲ್ಯ ವಿವಾಹ ತಡೆಯಲು ಎಲ್ಲ ಅಧಿಕಾರಿಗಳಿಗೂ ಹಕ್ಕು ಇದೆ. ಇಂತಹ ಪ್ರಕರಣಗಳು ಕಂಡುಬಂದಲ್ಲಿ ನ್ಯಾಯಾಲಯಕ್ಕೆ ಮಾಹಿತಿ ನೀಡಿ, ಇಂಜಕ್ಷನ್ ಆರ್ಡರ್‌ ಪಡೆದು ಬಾಲ್ಯ ವಿವಾಹ ನಿಲ್ಲಿಸಬಹುದು ಎಂದು ಹೇಳಿದರು.

ಬಾಲ್ಯ ವಿವಾಹ ಪತ್ತೆಹಚ್ಚಲು ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಪಾತ್ರ ಬಹಳ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ  ಬಾಲ್ಯ ವಿವಾಹ ವಿಚಾರ ಗೊತ್ತಿದ್ದರೂ ತಿಳಿಸದೇ ಇದ್ದಲ್ಲಿ ಆಶಾ ಕಾರ್ಯಕರ್ತೆಯರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ತಿಳಿಸಿದರು.

18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆ ಗರ್ಭ ಧರಿಸಿದ ವಿಚಾರ ಕಂಡು ಬಂದ ಕೂಡಲೇ ಸಂಬಂಧಿಸಿದ ಎಲ್ಲ ಅಧಿಕಾರಿಗಳಿಗೆ ಮೇಲ್ ಕಳಿಸುವಂತೆೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

16 ವರ್ಷದ ಬಾಲ್ಯ ವಿವಾಹಿತ ಮಹಿಳೆ ಮಗುವಿಗೆ ಜನ್ಮ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ತಾಯಿ ಮಗುವನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸಿ, ತದ ನಂತರ ಪೋಕ್ಸೋ ಪ್ರಕರಣ ದಾಖಲಿಸುವಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆೆ  ರಾಜೇಶ್ವರಿ ಎನ್. ಹೆಗಡೆ ಅವರು ಅಧಿಕಾರಿಗಳಿಗೆ ಸಲಹೆ ನೀಡಿದರು.

ಇದೇ ವೇಳೆ ವೇಶ್ಯಾವಾಟಿಕೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯಿಂದ ಜನವರಿ-24 ರಿಂದ ಮಾರ್ಚ್ ವರೆಗೆ 3 ಪ್ರಕರಣಗಳು ದಾಖಲಾಗಿವೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ್ ಎಂ. ಸಂತೋಷ್ ತಿಳಿಸಿದರು.

ಹೆಗಡೆ ನಗರದಲ್ಲಿನ ಮಕ್ಕಳ ವಿದ್ಯಾಭ್ಯಾಸ ಕ್ಕಾಗಿ ಶಾಲಾ ಕಟ್ಟಡವನ್ನು ನಿರ್ಮಿಸುವಂತೆ ತಿಳಿಸಿದಾಗ ಅದಕ್ಕೆ ಜಿ.ಪಂ. ಸಿಇಓ ಸುರೇಶ್ ಬಿ.ಇಟ್ನಾಳ್ ಪ್ರತಿಕ್ರಿಯಿಸಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೊಸ ಶಾಲಾ ಕಟ್ಟಡವನ್ನು ನಿರ್ಮಿಸಲಾಗುತ್ತದೆ ಎಂದು ಹೇಳಿದರು.

ಪೋಕ್ಸೋ ಕಾಯಿದೆ: ಪೋಕ್ಸೋ ಪ್ರಕರಣದಲ್ಲಿ ಸಂತ್ರಸ್ಥರಾಗುವವರಿಗೆ ತಕ್ಷಣವೇ ಸೂಕ್ತ ಕ್ರಮ ಕೈಗೊಂಡು  ಪುನರ್ವಸತಿ ಕಲ್ಪಿಸುವ ಕೆಲಸ ಮಾಡಬೇಕು ಮತ್ತು ಈ ಕಾಯಿದೆಯಡಿ ಪ್ರಕರಣ ದಾಖಲಿಸುವಾಗ ಸಂತ್ರಸ್ಥರು ಇದ್ದ ಕಡೆಯೇ ಹೋಗಿ ಮಾಹಿತಿ ಹಾಗೂ ಹೇಳಿಕೆ ಪಡೆಯಬೇಕು.  ಆದರೆ ಅವರನ್ನು ಬಾಲಮಂದಿರದಲ್ಲಿ ಇಟ್ಟುಕೊಳ್ಳಬಾರದು ಎಂದು ಸೂಚಿಸಿದರು.

ನಿರ್ಗತಿಕ ಕುಟೀರದ ಬದಲಾಗಿ ಬಾಲ ಮಂದಿರಕ್ಕೆ ದಾಖಲಿಸಿ: ಭಿಕ್ಷಾಟನೆಯಲ್ಲಿ ತೊಡಗಿದ ಮಕ್ಕಳನ್ನು ಖಾಸಗಿ ಅನುದಾನಿತ ಕುಟೀರಕ್ಕೆ ಸೇರಿಸುವ ಬದಲು ಸರ್ಕಾರಿ ಬಾಲಕರ ಬಾಲ ಮಂದಿರದಲ್ಲಿ ದಾಖಲಿಸುವ ಮೂಲಕ ಅವರ ಮುಂದಿನ ಭವಿಷ್ಯ ಹಾಗೂ  ಶೈಕ್ಷಣಿಕ ವ್ಯವಸ್ಥೆಗೆ ಪೂರಕ ವಾತಾವರಣ ಕಲ್ಪಿಸುವಂತೆ ತಿಳಿಸಿದರು ಮತ್ತು ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‍ನಲ್ಲಿ ಊಟದ ಗುಣಮಟ್ಟದ ಬಗ್ಗೆ ಪರಿಶೀಲಿಸುವಂತೆ ಸಮಾಜ ಕಲ್ಯಾಣಾಧಿಕಾರಿಗೆ ಹೇಳಿದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ .ಮ. ಕರೆಣ್ಣನವರ್ ಮಾತನಾಡಿ, ಕಂದಾಯ ಇಲಾಖೆಯಲ್ಲಿ ಮರಣ ಪ್ರಮಾಣ ಪತ್ರ ಇಲ್ಲವೆಂಬ ಕಾರಣಕ್ಕಾಗಿ ಪೌತಿ ಖಾತೆ ಬದಾಲಾವಣೆ ಮಾಡುತ್ತಿಲ್ಲ. ಅದನ್ನು ಪರಿಶೀಲಿಸಿ ಮಾಹಿತಿ ನೀಡಲು ತಿಳಿಸಿದರು.

ಸರ್ಕಾರಿ ಸೌಲಭ್ಯಗಳನ್ನು ಜನರಿಗೆ ಪರಿಚಯಿಸುವ ದೃಷ್ಟಿಯಿಂದ ಎಲ್ಲ ಇಲಾಖೆಯವರು ಸರ್ಕಾರಿ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.

ಜಿ.ಪಂ. ಸಿಇಒ ಸುರೇಶ್.ಬಿ. ಇಟ್ನಾಳ್, ಅಪರ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಭಾನು.ಎಸ್.ಬಳ್ಳಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ವಾಸಂತಿ ಉಪ್ಪಾರ್, ಡಿಹೆಚ್‍ಓ ಡಾ. ಷಣ್ಮುಖಪ್ಪ, ಆರ್‍ಸಿಹೆಚ್ ಅಧಿಕಾರಿ ರೇಣುಕಾರಾಧ್ಯ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್. ಎಚ್.ಅರುಣ ಕುಮಾರ್ ಹಾಗೂ ಇತರರಿದ್ದರು.

error: Content is protected !!