ಅಸಾಧ್ಯವನ್ನು ಸಾಧಿಸುವುದೇ ಯಶಸ್ಸು : ಜಗನ್ನಾಥ ನಾಡಿಗೇರ್‌

ಅಸಾಧ್ಯವನ್ನು ಸಾಧಿಸುವುದೇ ಯಶಸ್ಸು : ಜಗನ್ನಾಥ ನಾಡಿಗೇರ್‌

ದಾವಣಗೆರೆ ಮಾ.29- ನಂಬಿಕೆ ಮತ್ತು ಆತ್ಮವಿಶ್ವಾಸದಿಂದ ಯಶಸ್ಸು ಸಾಧ್ಯ. ಆದ್ದರಿಂದ ಅಸಾಧ್ಯವನ್ನು ಸಾಧಿಸುವುದೇ ಯಶಸ್ಸು ಎಂದು ಸತ್ಯಸಾಯಿ ವಿದ್ಯಾಸಂಸ್ಥೆಯ ಶೈಕ್ಷಣಿಕ ಸಲಹೆಗಾರ ಜಗನ್ನಾಥ ನಾಡಿಗೇರ್ ಹೇಳಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಸಹಯೋಗದಿಂದ ವಿದ್ಯಾಚೇತನ ಪಿ.ಯು ಕಾಲೇಜಿನಲ್ಲಿ ನಿನ್ನೆ ನಡೆದ ಶಾಲಾ-ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವದ ಅಂಗವಾಗಿ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ `ವಿದ್ಯಾರ್ಥಿ ಜೀವನದ ಯಶಸ್ಸು’ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.

ಜಗತ್ತಿನಲ್ಲಿ ಯಾವುದೂ ಉಚಿತವಾಗಿ ಸಿಗುವುದಿಲ್ಲ. ಉಚಿತವಾಗಿ ಸಿಗುವುದೆಲ್ಲವೂ ಖಚಿತವಲ್ಲ. ಹಾಗೆಯೇ ಪರಿಶ್ರಮವಿಲ್ಲದ ಯಶಸ್ಸು ಖಚಿತವಾಗಿರುವುದಿಲ್ಲ ಎಂದು ಹೇಳಿದರು.

ಗುರಿ ಮತ್ತು  ಕಠಿಣ ಶ್ರಮದ ಸಾಮರ್ಥ್ಯ ಹೊಂದಿದ ವಿದ್ಯಾರ್ಥಿಯು ಯಶಸ್ಸನ್ನು ಸಾಧಿಸುತ್ತಾನೆ. ಆದ್ದರಿಂದ ವಿದ್ಯಾರ್ಥಿಗಳು ಜೀವನದಲ್ಲಿ ಆರೋಗ್ಯಕರ ಹವ್ಯಾಸ ರೂಢಿಸಿಕೊಳ್ಳುವಂತೆ ಕಿವಿಮಾತು ಹೇಳಿದರು.

ಬಿಐಇಟಿ ಕಾಲೇಜಿನ ನಿರ್ದೇಶಕ ಡಾ.ವೈ ವೃಷಭೇಂದ್ರಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಶ ಮತ್ತು ರಾಜ್ಯದ ಇತಿಹಾಸದಲ್ಲಿ ದತ್ತಿಗಳು ಪ್ರಮುಖ ಪಾತ್ರ ವಹಿಸಿವೆ ಮತ್ತು ಕೆಲವರು ಶಿಕ್ಷಣ ಕ್ಷೇತ್ರದಲ್ಲೂ ದತ್ತಿಗಳನ್ನು ಸ್ಥಾಪಿಸಿ ನೆರವಾಗಿದ್ದಾರೆ. ಹಾಗೆಯೇ ಕನ್ನಡ ಸಾಹಿತ್ಯ ಪರಿಷತ್‌ನಲ್ಲೂ ಕಾರ್ಯಕ್ರಮ ಆಯೋಜಿಸುವಲ್ಲಿ ಈ ದತ್ತಿಗಳು ನೆರವಾಗಿವೆ ಎಂದು ಹೇಳಿದರು.

ತಾಲ್ಲೂಕು ಕಸಾಪ ನಿರ್ದೇಶಕರಾದ ಬಿ.ವಿ. ಪರಿಮಳ ಜಗದೀಶ್ ಅವರು ದತ್ತಿ ದಾನಿಗಳನ್ನು ಪರಿಚಯಿಸಿದರು. ಅಭಿಜ್ಞಾ ಸ್ವಾಗತಿಸಿದರು. ವಿದ್ಯಾರ್ಥಿ ರಿಷಿತ್ ಕುಮಾರ್ ನಿರೂಪಿಸಿದರು. ಎಂ.ಎನ್ ಇಂಚರಾ ವಂದಿಸಿದರು.

ಕಾಲೇಜಿನ ಪ್ರಾಚಾರ್ಯ ಎಚ್.ಎನ್ ಪ್ರದೀಪ್, ತಾಲ್ಲೂಕು ಕಸಾಪ ಅಧ್ಯಕ್ಷೆ ಸುಮತಿ ಜಯಪ್ಪ, ದತ್ತಿದಾನಿ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ನಿರ್ದೇಶಕ  ಸಿ.ಜಿ. ಜಗದೀಶ್ ಕೂಲಂಬಿ, ತಾಲ್ಲೂಕು ಕಸಾಪ ನಿರ್ದೇಶಕ ಷಡಕ್ಷರಪ್ಪ ಎಂ.ಬೇತೂರು, ಮಮತಾ ರುದ್ರಮುನಿ ಮತ್ತು ಕಾಲೇಜಿನ  ಸಿಬ್ಬಂದಿ ಇದ್ದರು.

error: Content is protected !!