ಹೊನ್ನಾಳಿ, ಮಾ. 27- ಕಾಣದ ಕೈಗಳಿಂದ ಟಿಕೆಟ್ ಪಡೆಯುವಲ್ಲಿ ವಂಚಿತನಾಗಿದ್ದು, ಅವಕಾಶಗಳನ್ನು ನಾವೇ ಸೃಷ್ಠಿಸಿಕೊಳ್ಳಬೇಕಾಗಿದೆ ಎಂದು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಅಹಿಂದ ಯುವ ನಾಯಕ ಜಿ.ಬಿ. ವಿನಯ್ ಕುಮಾರ್ ಹೇಳಿದರು.
ಹೊನ್ನಾಳಿ ತಾಲ್ಲೂಕಿನ ಸುಮಾರು 26 ಹಳ್ಳಿಗಳಿಗೆ ಭೇಟಿ ನೀಡಿ ಹೊಳೆ ಹರಳಹಳ್ಳಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಹೋರಾಟಗಾರರ ಅವಶ್ಯಕತೆ ಬೇಡವಾಗಿದೆ ಎಂದರು.
ನನ್ನದೇ ಒಂದು ವಿಷನ್ ಇಟ್ಟುಕೊಂಡು, ಚಿಂತನೆಯಿಂದ ಹೋರಾಟ ಮಾಡಿದ್ದೇನೆ. ಪ್ರಾಮಾಣಿಕವಾಗಿ ತಳಮಟ್ಟದಿಂದ ಹೋರಾಟ ಮಾಡಿದಂತಹ ನನಗೆ ಅನ್ಯಾಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪರಿಶ್ರಮದಿಂದ ಸಂಘಟನೆ ಮಾಡಿದ ನನ್ನ ಹೆಸರು ಮುಂಚೂಣಿಯಲ್ಲಿತ್ತು, ಆದರೆ, ಕೆಲ ಕಾಣದ ಕೈಗಳಿಂದ ಅವಕಾಶ ವಂಚಿತನಾಗಿದ್ದೇನೆ. ಅವಕಾಶ ಸಿಗದಿದ್ದರೂ ಅವ ಕಾಶ ಸೃಷ್ಟಿ ಮಾಡಬೇಕಾಗಿದೆ. ಜನರ ಅಭಿಪ್ರಾಯದ ಮೇರೆಗೆ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದರು.
ದಾವಣಗೆರೆಗೆ ಈಶ್ವರ ಖಂಡ್ರೆ ಅವರು ಆಗಮಿಸಿದಾಗ ನನ್ನ ಪರ ಶೇ. 90 ರಷ್ಟು ಹೆಸರು ಮುನ್ನೆಲೆಗೆ ಬಂದಿತ್ತು. ಆದರೆ ಶಿಫಾರಸ್ಸು ಮಾಡುವಲ್ಲಿ ನನ್ನ ಹೆಸರು ಇರಲಿಲ್ಲ. ಜಾತಿವಾದ ಎಷ್ಟರಮಟ್ಟಿಗೆ ಕೆಲಸ ಮಾಡಿದೆ ಎಂಬುದು ಅಂದು ನನಗೆ ಸಾಕಷ್ಟು ಬೇಸರವಾಯಿತು ಎಂದರು.
ಈ ಸಮಾರಂಭದಲ್ಲಿ ಗ್ರಾಮದ ಮುಖಂ ಡರುಗಳು ಮಾತನಾಡಿ, ಪಕ್ಷ ನೋಡುವುದಕ್ಕಿಂತ ವ್ಯಕ್ತಿ ನೋಡಿ ಈ ಬಾರಿ ನಾವು ಮತ ಹಾಕೋಣ ಎಂದು ಅಚಲವಾಗಿ ಸಭೆಯಲ್ಲಿ ಘೋಷಿಸಿದರು.
ಚೆನ್ನಯ್ಯ ಒಡೆಯರ್ ತದ ನಂತರ ಮಾವ- ಅಳಿಯಂದಿರ ಒಪ್ಪಂದದ ರಾಜಕೀಯ ಹಿಂದುಳಿದ ವರ್ಗದವರನ್ನು ಇಂತಹ ಹೀನ ಸ್ಥಿತಿಗೆ ತಳ್ಳಿದೆ ಎಂದು ಗ್ರಾಮದ ಮುಖಂಡರು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಎಲ್ಲೆಡೆ ಪಕ್ಷೇತರರಾಗಿ ಸ್ಪರ್ಧಿಸಬೇಕೆಂದು ಕೂಗು ಕೇಳಿಬರುತ್ತಿದೆ. ಯಾವುದೇ ಕಾರಣಕ್ಕೂ ಹಿಂದೆ ಸರಿಯದೇ ಹಿಂದುಳಿದ, ದಲಿತರ, ಶೋಷಿತರ, ಧ್ವನಿ ಇಲ್ಲದವರ ಪರವಾಗಿ ನಿಲ್ಲಬೇಕಾಗಿದೆ. ಯಾವುದೇ ಕಾರಣಕ್ಕೂ ಚುನಾವಣೆಯಿಂದ ಹಿಂದೆ ಸರಿಯಬಾರದು ಎಂದು ಒತ್ತಡ ಹೇರಿದರು.
ಕಳೆದ ಬಾರಿ ಕೂಡ ಮಂಜಪ್ಪನವರನ್ನು ಅವರು ಚುನಾವಣೆಗೆ ನಿಲ್ಲಿಸಿದಾಗ ಕಾಲಾವಕಾಶವಿಲ್ಲದೇ, ಅವರನ್ನು ಕ್ಷೇತ್ರದ ಅಹಿಂದ ವರ್ಗದ ಹರಕೆಯ ಕುರಿಯನ್ನಾಗಿ ಮಾಡಿದ್ದು ನಮ್ಮ ಕಣ್ಣ ಮುಂದೆ ಇದೆ. ಈ ಚುನಾವಣೆಯಲ್ಲಿ ವಿನಯ್ ಕುಮಾರ್ ಅವರನ್ನು ಬೆಂಬಲಿಸಿ ನಮ್ಮ ಸ್ವಾಭಿಮಾನವನ್ನು ಎತ್ತಿ ತೋರಿಸೋಣ ಎಂದು ಜನಾಭಿಪ್ರಾಯ ಮೂಡಿಬಂತು.
ನಂತರ ವಿನಯ್ ಕುಮಾರ್ ಅವರು, ಹೊನ್ನಾಳಿ ತಾಲ್ಲೂಕಿನ ಕೋಣನಾಯಕನಹಳ್ಳಿ, ಹನುಮಸಾಗರ ತಾಂಡಾ, ಬಳ್ಳೇಶ್ವರ, ಹೊಳೆ ಅರಳಹಳ್ಳಿ. ಬಲಮುರಿ, ಗೋಪಗೊಂಡನಹಳ್ಳಿ, ಹೊಸಕಟ್ಟೆ ಎಸ್. ಮಲ್ಲಾಪುರ, ಚಿಕ್ಕೇರಳ್ಳಿ, ಹತ್ತೂರು, ಮಾದೇನಹಳ್ಳಿ, ಕತ್ತಿಗೆ, ಜೀನಹಳ್ಳಿ, ಗುಡ್ಡಹಳ್ಳಿ, ಬೆಳಗುತ್ತಿ, ರಾಮೇಶ್ವರ, ಯರಗನಾಳು, ಕುದುರೆಕೊಂಡ, ಸೊರೆಹೊನ್ನೇ. ಆರುಂಡಿ, ಕೆಂಚಿಕೊಪ್ಪ, ತೊಗಲಹಳ್ಳಿ. ಸೊರಟೂರು. ಎಚ್ ಕಡದ ಕಟ್ಟೆ. ಮಾರಿಕೊಪ್ಪ ಗ್ರಾಮಗಳಿಗೆ ಭೇಟಿ ನೀಡಿ ಜನ ಅಭಿಪ್ರಾಯ ಪಡೆದರು.