ಮುನ್ನೆಚ್ಚರಿಕಾ ಕಿಮೋಥೆರಪಿ ಎಷ್ಟರ ಮಟ್ಟಿಗೆ ಪರಿಣಾಮಕಾರಿ ?

ಮುನ್ನೆಚ್ಚರಿಕಾ ಕಿಮೋಥೆರಪಿ ಎಷ್ಟರ ಮಟ್ಟಿಗೆ ಪರಿಣಾಮಕಾರಿ ?

ನವದೆಹಲಿ, ಮಾ. 25 – ಬ್ರಿಟನ್ ರಾಜಮನೆತನದ ಕೇಟ್ ಮಿಡ್ಲಟನ್‌ ಅವರು ಕ್ಯಾನ್ಸರ್ ರೋಗಕ್ಕೆ ಸಂಬಂಧಿಸಿದಂತೆ ಮುನ್ನೆಚ್ಚರಿಕಾ ಕಿಮೋಥೆರಪಿಗೆ ಮುಂದಾಗಿರುವುದು ಸಾಕಷ್ಟು ಸುದ್ದಿ ಮಾಡುತ್ತಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ಕಿಮೋಥೆರಪಿ ತೆಗೆದುಕೊಳ್ಳುವುದು ಎಂದರೆ ಏನು ಎಂಬ ಚರ್ಚೆಯೂ ನಡೆದಿದೆ. ಇದು ಎಷ್ಟರ ಮಟ್ಟಿಗೆ ಪರಿಣಾಮಕಾರಿ ಎಂಬ ಪ್ರಶ್ನೆಯೂ ಉದ್ಭವಿಸಿದೆ.

ಇದು ಕ್ಯಾನ್ಸರ್ ತಡೆಯ ಚಿಕಿತ್ಸೆಯೂ ಅಲ್ಲ. ಜೀವನ ಶೈಲಿಯಲ್ಲಿ ಬದಲಾವಣೆ, ಕಸರತ್ತು ಇತ್ಯಾದಿಗಳು ಕ್ಯಾನ್ಸರ್ ತಡೆಯಲು ನೆರವಾಗುತ್ತವೆ ಎಂದು ಅಡಿಲೇಡ್ ವಿಶ್ವವಿದ್ಯಾಲಯದ ಉಪನ್ಯಾಸಕ ಅಯಾನ್ ಆಲ್ವರ್ ಅಭಿಪ್ರಾಯ ಪಟ್ಟಿದ್ದಾರೆ. ಸ್ತನ ಕ್ಯಾನ್ಸರ್ ರೀತಿಯ ಅಪಾಯ ತಡೆಯಲು ಟ್ಯಾಮೊಕ್ಸಿಫೆನ್ ಎಂಬ ಹಾರ್ಮೋನ್ ಚಿಕಿತ್ಸೆ ಸಹ ನೆರವಾಗುತ್ತದೆ.

ಆದರೆ, ಮುನ್ನೆಚ್ಚರಿಕೆಯ ಕಿಮೋಥೆರಪಿ ಬೇರೆ ರೀತಿಯಲ್ಲಿ ಕೆಲಸ ಮಾಡುತ್ತದೆ. ಕ್ಯಾನ್ಸರ್‌ಗೆ ಸಿಲುಕಿದ ಅಂಗಾಂಶಗಳನ್ನು ಹೊರ ತೆಗೆದ ನಂತರ, ಮತ್ತೆ ಕ್ಯಾನ್ಸರ್ ಬರುವುದನ್ನು ತಡೆಯಲು ಮುನ್ನೆಚ್ಚರಿಕೆಯ ಕಿಮೋಥೆರಪಿ ನೀಡಲಾಗುತ್ತದೆ.

ಕ್ಯಾನ್ಸರ್ ಸ್ಥಳೀಯವಾಗಿದ್ದು, ಬೇರೆಡೆ ಹರಡಿಲ್ಲ ಎಂಬುದು ಖಚಿತವಾದ ನಂತರ ಶಸ್ತ್ರಚಿಕಿತ್ಸೆ ಇಲ್ಲವೇ ರೇಡಿಯೋಥೆರಪಿ ಬಳಸಲಾಗುತ್ತದೆ.

ಆದರೆ, ಕ್ಯಾನ್ಸರ್ ದೇಹದ ಬೇರೆ ಭಾಗಗಳಿಗೆ ಹರಡಿದ್ದರೆ ಕಿಮೋಥೆರಪಿ (ಕ್ಯಾನ್ಸರ್ ನಿಗ್ರಹ ಔಷಧಿ), ಹಾರ್ಮೋನ್ ಇಲ್ಲವೇ ಇಮ್ಯುನೋಥೆರಪಿ ಬಳಸಲಾಗುತ್ತದೆ.

ಶಸ್ತ್ರಚಿಕಿತ್ಸೆಯ ನಂತರವೂ ಕಿಮೋಥೆರಪಿ ಬಳಸಿ ಕ್ಯಾನ್ಸರ್ ಮತ್ತೆ ಬರದಂತೆ ತಡೆಯಲಾಗುತ್ತದೆ. ಶಸ್ತ್ರಚಿಕಿತ್ಸೆಯಿಂದ ಕ್ಯಾನ್ಸರ್‌ಗೆ ಚಿಕಿತ್ಸೆ ಕೆಲವೊಮ್ಮೆ ಸಾಧ್ಯವಾಗುತ್ತದೆ. 

ಆದರೆ, ಕೆಲ ಪ್ರಕರಣಗಳಲ್ಲಿ ಕ್ಯಾನ್ಸರ್‌ ಬೇರೆಡೆ ಸೂಕ್ಷ್ಮ ಪ್ರಮಾಣದಲ್ಲಿದ್ದು, ನಂತರ ಮತ್ತೆ ಕಂಡು ಬರುವ ಸಾಧ್ಯತೆ ಇದೆ. ಕೆಲವು ತಿಂಗಳು ಹಾಗೂ ವರ್ಷಗಳ ನಂತರ ಮತ್ತೆ ಕ್ಯಾನ್ಸರ್ ಕಂಡು ಬರಬಹುದು.

ಹೀಗಾಗಿ ಕ್ಯಾನ್ಸರ್ ಶಸ್ತ್ರಚಿಕಿತ್ಸೆಯ ನಂತರ, ಮುನ್ನೆಚ್ಚರಿಕೆಯ ಕ್ರಮವಾಗಿ ಕಿಮೋಥೆರಪಿ ನೀಡಲಾಗುತ್ತದೆ. ನಾವು ಕ್ಯಾನ್ಸರ್‌ಗೆ ಸಿಲುಕಿದ ಜೀವಕೋಶಗಳನ್ನು ಕಾಣಲು ಸಾಧ್ಯವಾಗುವುದಿಲ್ಲ. ಆದರೆ, ಈ ಹಿಂದಿನ ಪ್ರಕರಣಗಳನ್ನು ಪರಿಗಣಿಸಿ, ಮುನ್ನೆಚ್ಚರಿಕೆಯ ಚಿಕಿತ್ಸೆ ನೀಡಲಾಗುತ್ತದೆ.

ಯಾವ ರೀತಿಯ ಕ್ಯಾನ್ಸರ್‌ ಹಾಗೂ ಯಾವ ರೀತಿಯ ಕಿಮೋಥೆರಪಿ ಬಳಸಲಾಗುತ್ತದೆ ಎಂಬುದರ ಆಧಾರದ ಮೇಲೆ ಮುನ್ನೆಚ್ಚರಿಕೆಯ ಚಿಕಿತ್ಸೆಯ ಪರಿಣಾಮ ನಿರ್ಧಾರವಾಗುತ್ತದೆ.

ಸಾಮಾನ್ಯ ರೀತಿಯ ಕರುಳು ಕ್ಯಾನ್ಸರ್‌ನಲ್ಲಿ, ಶಸ್ತ್ರಚಿಕಿತ್ಸೆಯ ನಂತರ ರೋಗ ಮತ್ತೆ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇಂತಹ ಪ್ರಕರಣಗಳಲ್ಲಿ ಮೂರರಿಂದ ಆರು ತಿಂಗಳ ನಂತರ ಮುನ್ನೆಚ್ಚರಿಕೆಯ ಕಿಮೋಥೆರಪಿ ನೀಡಲಾಗುತ್ತದೆ.

ಈ ರೀತಿಯ ಚಿಕಿತ್ಸೆಯ ಅಡ್ಡ ಪರಿಣಾಮಗಳೂ ಇಲ್ಲದಿಲ್ಲ. ಆದರೆ, ಈ ಅಡ್ಡ ಪರಿಣಾಮಗಳನ್ನು ನಿಯಂತ್ರಿಸುವಷ್ಟು ವಿಜ್ಞಾನ ಬೆಳೆದಿದೆ.

ಕೆಲವೊಮ್ಮೆ ಚಿಕಿತ್ಸೆಯ ವೇಳೆ ಬಿಳಿ ರಕ್ತಕಣಗಳ ಉತ್ಪಾದನೆ ತಾತ್ಕಾಲಿಕವಾಗಿ ಕಡಿಮೆಯಾಗುತ್ತದೆ. ಈ ಸಂದರ್ಭದಲ್ಲಿ ಸೋಂಕು ಬರುವ ಅಪಾಯ ಹೆಚ್ಚಾಗಿರುತ್ತದೆ. ಇದಲ್ಲದೇ ವಾಂತಿ, ವಾಕರಿಕೆ, ಬಾಯಿ ಹುಣ್ಣು ಸೇರಿದಂತೆ ಹಲವು ಅಡ್ಡ ಪರಿಣಾಮಗಳು ಕಾಣಿಸಿಕೊಳ್ಳಬಹುದು. 

ಕಿಮೋಥೆರಪಿ ವೇಳೆ ನೀಡಲಾಗುವ ಚಿಕಿತ್ಸೆ, ಇತರೆ ಅಂಗಗಳ ಮೇಲೆ ದಾಳಿಗೂ ಕಾರಣವಾಗಬಹುದು. ಇದರಿಂದ ಬಳಲಿಕೆಯೂ ಕಾಣಿಸಿಕೊಳ್ಳುತ್ತದೆ.

ಮುನ್ನೆಚ್ಚರಿಕೆಯ ಕಿಮೋಥೆರಪಿಯನ್ನು ಶಸ್ತ್ರಚಿಕಿತ್ಸೆಯ ನಂತರ ನೀಡಲಾಗುತ್ತದೆ. ರೋಗಿಗಳು ಕೆಲ ವಾರಗಳ ನಂತರ ಸಾಮಾನ್ಯ ಚಟುವಟಿಕೆಯಲ್ಲಿ ತೊಡಗಬಹುದು.

error: Content is protected !!