ಮಲೇಬೆನ್ನೂರು, ಮಾ.22- ಪಟ್ಟಣದಲ್ಲಿ ಕಳೆದ ಶನಿವಾರದಿಂದ ನಡೆದುಕೊಂಡು ಗ್ರಾಮದೇವತೆ ಏಕನಾಥೇಶ್ವರಿ, ಕೋಡಿ ಮಾರೇಶ್ವರಿ, ಹಟ್ಟಿ ದುರ್ಗಾಬಿಂಕೆ ಅಮ್ಮನವರ ಹಬ್ಬದ ಶುಕ್ರವಾರ ಹುಲುಸು ಒಡೆದು ಗ್ರಾಮಸ್ಥರಿಗೆ ಹಂಚುವ ಮೂಲಕ ಉತ್ಸವಕ್ಕೆ ತೆರೆ ಬಿದ್ದಿತು.
ಊರ ಹೊರಗಿರುವ ದೇವಸ್ಥಾನದಲ್ಲಿ ಏಕನಾಥೇಶ್ವರಿ ದೇವಿಗೆ ದುರ್ಗಾಸೂಕ್ತದೊಂದಿಗೆ ವಿಶೇಷ ಪೂಜೆ, ನೈವೇದ್ಯ, ಧೂಪಾರತಿ, ಮಂಗಳಾರತಿ ನೆರವೇರಿಸಿದ ನಂತರ ಜನರ ಉದೋ ಉಧೋ…. ಉದ್ಘೋಷದೊಂದಿಗೆ ಹುಲುಸಿನ ರಾಶಿಗೂ ಪೂಜೆ ಸಲ್ಲಿಸಿದ ಅರ್ಚಕರು, ಕಂಕಣ ವಿಸರ್ಜನೆ ಮಾಡಿದರು.
ಹುಲುಸನ್ನು ಹೊಲದಲ್ಲಿ ಬೀಜದೊಂದಿಗೆ ಮಿಶ್ರಣ ಮಾಡಿ ಹಾಕಿದರೆ ಬೆಳೆ ಹುಲುಸಾಗಿ ಬರುತ್ತದೆ ಎಂಬ ನಂಬಿಕೆ ಮೊದಲಿನಿಂದಲೂ ಜನರಲ್ಲಿರುವುದರಿಂದ ಹುಲುಸಿಗೆ ಹೆಚ್ಚು ಮಹತ್ವ ಇದೆ. ಮಹಿಳೆಯರು ಅರಿಸಿಣ – ಕುಂಕುಮ ಹಚ್ಚಿ ಬಳೆ ಬಿಚ್ಚೋಲೆ ನೀಡಿ ದೇವಿಗೆ ಉಡಿತುಂಬಿದರು.
ನಂತರ ಏಕನಾಥೇಶ್ವರಿ, ಕೋಡಿ ಮಾರೇಶ್ವರಿ ಉತ್ಸವ ಮೂರ್ತಿಯನ್ನು ಊರ ಒಳಗಿನ ದೇವಸ್ಥಾನಕ್ಕೆ ಮೆರವಣಿಗೆ ಮೂಲಕ ಮಂಗಳವಾದ್ಯೊಂದಿಗೆ ಕರೆತಂದು ಪ್ರತಿಷ್ಠಾಪಿಸಿದರು.
ಗ್ರಾಮದೇವತೆ ಹಬ್ಬದ ಸಮಿತಿ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಈ ವೇಳೆ ಹಾಜರಿದ್ದರು.