ದಾವಣಗೆರೆ, ಮಾ.22- ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ಬಂಧನವನ್ನು ಖಂಡಿಸಿ ಆಮ್ ಆದ್ಮಿ ಪಾರ್ಟಿ ಮತ್ತು ಕಾಂಗ್ರೆಸ್ ಪಕ್ಷ ನಗರದ ಜಯದೇವ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿತು.
ಈ ವೇಳೆ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಶಿವಕುಮಾರಪ್ಪ ಮಾತನಾಡಿ, ಚುನಾವಣೆಯ ಸಂದರ್ಭದಲ್ಲಿ ನರೇಂದ್ರ ಮೋದಿ ಅವರು ಸರ್ವಾಧಿಕಾರಿ ಧೋರಣೆ ಮೂಲಕ ವಿಪಕ್ಷಗಳಿಗೆ ತೊಂದರೆ ನೀಡುತ್ತಿದ್ದಾರೆ ಎಂದು ದೂರಿದರು.
ಮೋದಿ ಸರ್ಕಾರ ಸಮಾಜದಲ್ಲಿ ಶಾಂತಿ ಕದಡುವ ಜತೆಗೆ ಅಧಿಕಾರದ ದರ್ಪದಿಂದ ಅಮಾಯಕರ ಮೇಲೆ ದಬ್ಬಾಳಿಕೆ ಮಾಡುತ್ತಿದೆ. ಇಂತಹ ಸರ್ವಾಧಿಕಾರ ಆಡಳಿತಕ್ಕೆ ಆಮ್ ಆದ್ಮಿ ಪಾರ್ಟಿ ಬಗ್ಗುವುದಿಲ್ಲ ಎಂದು ಗುಡುಗಿದರು.
ಕಾಂಗ್ರೆಸ್‌ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಮಾತನಾಡಿ, ವಿರೋಧ ಪಕ್ಷಗಳನ್ನು ದಮನ ಮಾಡಬೇಕೆಂಬ ದೃಷ್ಟಿಯಿಂದ ವಿರೋಧ ಪಕ್ಷಗಳ ನಾಯಕರನ್ನು ಸುಖಾಸುಮ್ಮನೆ ಬಂಧಿಸಲಾಗುತ್ತಿದೆ ಎಂದು ಕಿಡಿ ಕಾರಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್, ಪಾಲಿಕೆ ಸದಸ್ಯ ಎ.ನಾಗರಾಜ್, ಚಮನ್ ಸಾಬ್, ಅಬ್ದುಲ್ ಲತೀಫ್, ಇಟ್ಟಿಗುಡಿ ಮಂಜುನಾಥ್, ಶುಭಮಂಗಳ, ಮೈನುದ್ದೀನ್, ಡೋಲಿ ಚಂದ್ರು, ಮೊಟ್ಟೆ ದಾದಾಪೀರ್, ಹರೀಶ್, ಆಮ್‌ಆದ್ಮಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್, ಸಂಘಟನಾ ಕಾರ್ಯದರ್ಶಿ ಆದಿಲ್‌ಖಾನ್, ಚಂದ್ರು, ಕಾರ್ಯದರ್ಶಿ ಕೆ. ರವೀಂದ್ರ, ಸುರೇಶ್ ಸಿಡ್ಲಪ್ಪ, ಶಬ್ಬೀರ್ ಅಹಮದ್, ಮೊಹಮದ್ ಗೌಸ್, ಧರ್ಮನಾಯ್ಕ್, ವಕ್ತಾರ ಚಂದ್ರು, ಬಸವಂತಪ್ಪ, ಹರಿಹರ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಮೊಹಮದ್ ಯೂಸಫ್ ಇದ್ದರು.