ಅಂಬಿಗರ ಚೌಡಯ್ಯ, ಮಡಿವಾಳ ಮಾಚಿದೇವ ಜಯಂತಿ ಆಚರಣೆಯಲ್ಲಿ ಕೆ.ಹೆಚ್.ಮಂಜುನಾಥ್
ದಾವಣಗೆರೆ, ಫೆ.26- ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ದಾವಣಗೆರೆ ತಾಲ್ಲೂಕು ಘಟಕ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜು ಅರಸಾಪುರ ಇವರುಗಳ ಸಂಯುಕ್ತಾಶ್ರಯದಲ್ಲಿ ಅಂಬಿಗರ ಚೌಡಯ್ಯ ಮತ್ತು ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮವನ್ನು ಇತ್ತೀಚಿಗೆ ಆಯೋಜಿಸಲಾಗಿತ್ತು.
ಕಾಲೇಜಿನ ಪ್ರಾಚಾರ್ಯ ಕೆ. ಎಚ್. ಮಂಜುನಾಥ ರೆಡ್ಡಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶರಣ ಸಾಹಿತ್ಯ ಕಂದಾಚಾರ, ಮೂರ್ತಿ ಪೂಜೆ ಇವುಗಳನ್ನು ಒಪ್ಪುವುದಿಲ್ಲ, ಕನ್ನಡ ಸಾಹಿತ್ಯದಲ್ಲಿಯೇ ವಚನ ಸಾಹಿತ್ಯ ಶ್ರೇಷ್ಠ ಸಾಹಿತ್ಯವಾಗಿದೆ ಎಂದು ಹೇಳುವ ಮೂಲಕ, ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಶರಣರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ನಂತರ `ವಚನ ಸಾಹಿತ್ಯದಲ್ಲಿ ವೈಚಾರಿಕತೆ’ ಎಂಬ ವಿಷಯ ಕುರಿತು ಶಿಕ್ಷಣಾಧಿಕಾರಿ ಭರಮಪ್ಪ ಮೈಸೂರ್ ಅವರು ಉಪನ್ಯಾಸ ನೀಡಿದರು. ಆಧುನಿಕ ಯುಗದಲ್ಲಿ ಯುವ ಸಮುದಾಯ ಎದುರಿಸುತ್ತಿರುವ ಮನೋಭಾವಗಳಿಗೆ ವಚನ ಸಾಹಿತ್ಯದ ಅರಿವು ಸಂಜೀವಿನಿಯಾಗಬಲ್ಲದು, ಜಾತಿ ಮತ್ತು ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಕೆಲ ಬೆಳವಣಿಗೆಗಳು ಯುವ ಜನರನ್ನು ವೈದಿಕತೆಯ ವಿಷದ ಕುಣಿಕೆಗೆ ಆಹಾರವಾಗಿ ಪರಿಣಮಿಸಿದೆ ಎಂದು ಹೇಳಿದರು.
ಕಾರ್ಯಕ್ರಮದ ಕಂಠಪಾಠ ಸ್ಪರ್ಧೆಯಲ್ಲಿ ಅಶ್ವಿನಿ, ಪ್ರಿಯಾಂಕ ಮತ್ತು ಸೃಷ್ಟಿ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದರು. ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್. ಬಿ. ರುದ್ರಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಜಿಲ್ಲಾ ಕದಳಿ ವೇದಿಕೆಯ ಅಧ್ಯಕ್ಷರಾದ ಗಾಯತ್ರಿ ವಸ್ತ್ರದ್, ನಗರ ಘಟಕದ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿರಿಗೆರೆ ಎಂ.ಪರಮೇಶ್ವರಪ್ಪ, ಆರ್.ಸಿದ್ದೇಶಪ್ಪ, ಬಿ.ಟಿ. ಪ್ರಕಾಶ್, ಬಿ. ಎಂ. ವಿಶ್ವೇಶ್ವರಯ್ಯ, ಕಲಿವೀರ ಕಳ್ಳಿಮನಿ, ಕೆ. ಸಿ. ನಾಗರಾಜ್, ಪ್ರಕಾಶ್ ಕಡ್ಲೆಬಾಳು ಉಪಸ್ಥಿತರಿದ್ದರು.
ಶಿಕ್ಷಕಿ ಪಾಟೀಲ್ ವನಜಾಕ್ಷಿ ಪ್ರಾರ್ಥಿಸಿದರು. ಜ್ಞಾನೇಶ್ವರಿ ಸ್ವಾಗತಿಸಿದರು. ಶಿಕ್ಷಕರಾದ ಎಂ. ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು.