ಲಿಂ. ಮಲ್ಲಿಕಾರ್ಜುನ ಶ್ರೀಗಳ 16ನೇ ಶ್ರದ್ಧಾಂಜಲಿ ಸಮಾರಂಭದಲ್ಲಿ ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ಸ್ಮರಣೆ
ಸಾಣೇಹಳ್ಳಿ, ಫೆ. 15- ಸಮಾಜವನ್ನು ಸನ್ಮಾರ್ಗದಲ್ಲಿ ಕರೆದುಕೊಂಡು ಹೋಗಲಿಕ್ಕೆ ಬೇಕಾದ ಶಕ್ತಿಯನ್ನು ತುಂಬಿದಂಥವರು ಮಲ್ಲಿಕಾರ್ಜುನ ಶ್ರೀಗಳು ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಇಲ್ಲಿನ ಶ್ರೀ ಶಿವಕುಮಾರ ರಂಗಮಂದಿರ ದಲ್ಲಿ ಜರುಗಿದ ಲಿಂಗೈಕ್ಯ ಶ್ರೀ ತರಳಬಾಳು ಜಗದ್ಗುರು ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಯವರ 16ನೇ ಶ್ರದ್ಧಾಂಜಲಿ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಶ್ರೀಗಳು ಮಠದಲ್ಲಿದ್ದದ್ದು ತುಂಬಾ ಕಡಿಮೆ. ಯಾವಾಗಲೂ ಊರೂರುಗಳಿಗೆ ಹೋಗಿ ಮಠಕ್ಕೆ ಬೇಕಾದ ದವಸ, ಹಣ ಇತ್ಯಾದಿ ಸಂಗ್ರಹ ಮಾಡುತ್ತಿದ್ದರು. ಅವರ ಕಾಲದಲ್ಲಿ ಶಿಷ್ಯರ ಆರ್ಥಿಕ ಸ್ಥಿತಿ ಇವತ್ತಿನ ಹಾಗೆ ಅಷ್ಟೇನು ಸುಧಾರಣೆ ಆಗಿರಲಿಲ್ಲ. ಯಾವುದೇ ಗ್ರಾಮಗಳಿಗೆ ಹೋದರೂ ಅಲ್ಲಿಯ ಸಮಸ್ಯೆಗಳನ್ನು ಕೇಳಿ ಪರಿಹಾರ ಮಾಡುವ ಗುಣ ಅವರಲ್ಲಿತ್ತು ಎಂದು ಸ್ಮರಿಸಿದರು.
ಮಲ್ಲಿಕಾರ್ಜುನ ಶ್ರೀಗಳು ಸಾಕಷ್ಟು ಓದುವ ಪದ್ಧತಿ ರೂಢಿಸಿಕೊಂಡಿದ್ದರು. ನೀತಿವಂತರಾಗ ಬೇಕು, ಸತ್ಯವಂತರಾಗ ಬೇಕು, ಪ್ರಾಮಾಣಿಕ ರಾಗಬೇಕು, ಚೆನ್ನಾಗಿ ದುಡಿಯಬೇಕು, ಮಠ ನಿಮ್ಮದು ಎಂದು ಭಾವಿಸಿಕೊಳ್ಳಬೇಕು, ಮಠದ ಶಕ್ತಿಯೇ ಭಕ್ತರು ಅಂತ ಹೇಳ್ತಾ ಇದ್ದರು. ಪ್ರತಿ ಊರು ಗಳಲ್ಲೂ ಆಗ ನ್ಯಾಯಪೀಠ ನಡೆಯುತ್ತಿತ್ತು.
ಸಾವಿಗೆ ಅವರು ಎಂದೂ ಹೆದರಿದಂಥ ವರಲ್ಲ. `ಮರಣವೇ ಮಹಾನವಮಿ’ ಎಂದು ಹೇಳಿ ಆ ಮರಣವನ್ನು ಅತ್ಯಂತ ಪ್ರೀತಿಯಿಂದ ಸ್ವಾಗತಿಸಿದ ವರು. ಅವರಿಗೆ ತುಂಬಾ ಖುಷಿ ಆಗ್ತಾ ಇದ್ದದ್ದು ಹೊಲ, ತೋಟ, ಗದ್ದೆಗಳಲ್ಲಿ ವ್ಯವಸಾಯ ಮಾಡ್ತಾ ಇದ್ದಾಗ. ಸಿರಿಗೆರೆಯಲ್ಲಿರುವ ಅನೇಕ ಗಿಡಮರಗಳು ಮಲ್ಲಿಕಾರ್ಜುನ ಗುರುಗಳು ಇಲ್ಲ ಅಂತ ವ್ಯಥೆಪಡ್ತಾವೇನೋ ಅಂತ ಅನೇಕ ಜನ ಈಗಲೂ ಹೇಳುತ್ತಿರುವುದನ್ನು ಕೇಳಿದ್ದೇವೆ.
ಸಿರಿಗೆರೆಯಲ್ಲೇ ಹುಟ್ಟಿದರೂ ಮಠದ ಸಂಪರ್ಕ ಹೆಚ್ಚಿತ್ತೇ ಹೊರತು ಮನೆಯ ಸಂಪರ್ಕ ಇರಲಿಲ್ಲ. ಬಸವತತ್ವದ ಬಗ್ಗೆ ಅಪಾರ ಪ್ರೀತಿ, ಪ್ರೇಮ ಹೊಂದಿದ್ದರು. ಬಸವ ತತ್ವದ ಬಗ್ಗೆ ಸದಾ ಚಿಂತನೆ ಮಾಡ್ತಾ ಇದ್ದರು. ಯಾವುದೇ ಸಭೆ ಸಮಾರಂಭಗಳಲ್ಲಿ ವ್ಯಾವಹಾರಿಕ ಮಾತುಗಳಿಗಿಂತ ತತ್ವ, ಧರ್ಮ, ಆಚಾರಗಳ ಬಗ್ಗೆ ಮಾತನಾಡುತ್ತಿದ್ದರು. ಅವರಂತೆ ಕಾಯಕಶೀಲರಾಗಿ, ಶಿವಯೋಗಿಗಳಾಗಿ ಜನಪರವಾದ ಕೆಲಸ ಕಾರ್ಯಗಳನ್ನು ಮಾಡುವುದು. ಅಂಥವರ ನೆನಪು ನಿಮಗೆ ಆಗಬೇಕು ಎನ್ನುವ ಕಾರಣಕ್ಕಾಗಿ ಪ್ರತಿವರ್ಷ ಅವರನ್ನು ನೆನಪು ಮಾಡಿಕೊಳ್ಳುತ್ತೇವೆ ಎಂದರು.
ನಿವೃತ್ತ ಪ್ರಾಚಾರ್ಯ ಐ. ಜಿ. ಚಂದ್ರಶೇಖರಯ್ಯ ಮಾತನಾಡಿ, ತರಳಬಾಳು ಗುರು ಪರಂಪರೆ ವಿಶ್ವಬಂಧು ಮರುಳಸಿದ್ಧನಿಂದ ಪ್ರಾರಂಭವಾಯಿತು. ತರಳಬಾಳು ಮಠಕ್ಕೆ ಪಟ್ಟಾಧ್ಯಕ್ಷರು, ವಿರಕ್ತರು, ಚರಪಟ್ಟಾಧ್ಯಕ್ಷರು ಎನ್ನುವ ಮೂರು ವಿಧದ ಸ್ವಾಮಿಗಳಿದ್ದರು. ಚರಪಟ್ಟಾಧ್ಯಕ್ಷರಾದವರು ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು. ಸಿರಿಗೆರೆಯಲ್ಲಿ ಜನಿಸಿ ಸಿರಿಗೆರೆ, ಬೀರೂರು, ಕಾಶಿಯಲ್ಲಿ ವಿದ್ಯಾಭ್ಯಾಸ ಮಾಡಿದರು. ಅರಿವು ಆಚಾರ ಹೊಂದಿದವ ಗುರು. ಕ್ರಿಯೆಯಂತೆ ಆಚರಣೆಯಲ್ಲಿ ತರುವವನೇ ಆಚಾರ್ಯ. ಅಂತಹ ಅರಿವು, ಆಚಾರವನ್ನು ಮಲ್ಲಿಕಾರ್ಜುನ ಶ್ರೀಗಳು ಹೊಂದಿದ್ದರು.
ನೂರಾರು ಎಕರೆ ತೆಂಗಿನ ತೋಟವನ್ನು ಮಾಡಿದರು. ಬೆಳಗಿನಿಂದ ಸಂಜೆಯವರೆಗೂ ತೋಟದಲ್ಲಿ ದುಡಿಯುತ್ತಿದ್ದರು. ಮಠದ ಶಿಷ್ಯರನ್ನು ಸಮಾಜದ ಆಸ್ತಿಯನ್ನಾಗಿ ಮಾಡಿದರು. ಶಿಷ್ಯರ ಮನೆಯ ಕತ್ತಲೆಯನ್ನು ಕಳೆದವರು. 60 ವರ್ಷಗಳ ಕಾಲ ಸನ್ಯಾಸಿ ಜೀವನವನ್ನು ಸಮಾಜಕ್ಕಾಗಿ ಸಮರ್ಪಣಾ ಭಾವದಿಂದ ಸವೆಸಿದರು ಎಂದರು.
ವೇದಿಕೆಯ ಮೇಲೆ ಮುಖ್ಯಶಿಕ್ಷಕ ಬಸವರಾಜ್, ಹೊನ್ನೇಶಪ್ಪ, ಶಿವಕುಮಾರ್, ಶಿಲ್ಪ ಇದ್ದರು. ಆರಂಭದಲ್ಲಿ ಶಿವಸಂಚಾರದ ಕಲಾವಿದ ನಾಗರಾಜ್ ಹೆಚ್. ಎಸ್. ಹಾಗೂ ತಬಲಾ ಸಾಥಿ ಶರಣ ವಚನಗೀತೆಗಳನ್ನು ಹಾಡಿದರು. ಅಧ್ಯಾಪಕ ಬಸನಗೌಡ ಪೊಲೀಸ್ ಪಾಟೀಲ್ ಸ್ವಾಗತಿಸಿದರು. ಮಲ್ಲಿಕಾರ್ಜುನ್ ವಂದಿಸಿದರು.