`ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ’ ಸಾಣೇಹಳ್ಳಿಯಲ್ಲಿ ನಾಳೆ ಸಂವಾದ

`ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ’  ಸಾಣೇಹಳ್ಳಿಯಲ್ಲಿ ನಾಳೆ ಸಂವಾದ

ಸಾಣೇಹಳ್ಳಿ, ಫೆ.15- ಸಮಾಜದಲ್ಲಿ ಧಾರ್ಮಿಕ, ನೈತಿಕ, ಸಾಮಾಜಿಕ ಜಾಗೃತಿಯನ್ನು ನೆಲೆಗೊಳಿಸಿ  ಬದಲಾವಣೆಗೆ ಕಾರಣರಾದ ಬಸವಣ್ಣನವರನ್ನು ಕರ್ನಾಟಕ ಸರ್ಕಾರ `ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ’ ಎಂದು ಘೋಷಣೆ ಮಾಡಿರುವುದು ಅಭಿನಂದನಾರ್ಹ ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ  ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು. 

ಬಸವಣ್ಣನವರ ಭಾವಚಿತ್ರದ ಕೆಳಗೆ `ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ’ ಎಂದು ಬರೆಸಿ ಫೆಬ್ರವರಿ 17ರಂದು ಸರ್ಕಾರದ ಎಲ್ಲ ಕಚೇರಿಗಳಲ್ಲಿ ಮತ್ತು ಶಾಲಾ- ಕಾಲೇಜುಗಳಲ್ಲಿ ಹಾಕಲು ಸರ್ಕಾರ ಆದೇಶ ಮಾಡಿರುವುದು ಸ್ವಾಗತಾರ್ಹ.  ಅದಕ್ಕಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಅವರ ಸಚಿವರನ್ನು ಅಭಿನಂದಿಸುವುದಾಗಿ ತಿಳಿಸಿದರು.

ನಾಡಿದ್ದು ದಿನಾಂಕ 17ರಂದು ಬಸವ ಜಯಂತಿ ಆಚರಿಸಿದಂತೆ ಮನೆ ಮನೆಯಲ್ಲೂ ಬಸವಣ್ಣನವರ ಭಾವಚಿತ್ರ ಹಾಕಿ ವಚನಗಳ ಪಠಣ ಮಾಡುವ ಸಂಕಲ್ಪವನ್ನು ಬಸವ ತತ್ವ ಪ್ರೇಮಿಗಳೆಲ್ಲರೂ ಮಾಡಬೇಕು. ನಾವು ನಮ್ಮ ಮಠದಲ್ಲಿ, ವಿದ್ಯಾರ್ಥಿ ನಿಲಯಗಳಲ್ಲಿ 17ರಂದು ಮತ್ತೊಂದು ಬಸವ ಭಾವಚಿತ್ರವನ್ನು ಹಾಕಿ ಬಸವಣ್ಣನವರ ಸಂದೇಶಗಳ ಬಗ್ಗೆ ಚಿಂತನ ಮಂಥನ ಕಾರ್ಯಕ್ರಮ ಮಾಡಲಿದ್ದೇವೆ ಎಂದು ಹೇಳಿದರು.

ಅಷ್ಟೇ ಅಲ್ಲ `ಮಾನವೀಯ ಸಮಾಜ ನಿರ್ಮಾಣದಲ್ಲಿ ಬಸವಣ್ಣನವರ ವಚನಗಳ ಪಾತ್ರ’ ವಿಷಯದ ಮೇಲೆ ಓ. ಎಲ್. ನಾಗಭೂಷಣ್‌,  ಬಸವರಾಜ ಸಾದರ, ಎಸ್. ಜಿ. ಸಿದ್ಧರಾಮಯ್ಯ, ಬಸವಲಿಂಗಪ್ಪ, ಚಂದ್ರಶೇಖರಯ್ಯ, ಚಂದ್ರಶೇಖರ ತಾಳ್ಯ ಮತ್ತಿತರರು 17-18 ರಂದು ಸಂವಾದ ನಡೆಸಲಿದ್ದಾರೆ ಎಂದು ಸ್ವಾಮೀಜಿ  ತಿಳಿಸಿದರು.

error: Content is protected !!