ಹರಿಹರ ನಗರಸಭೆ ಬಜೆಟ್‌ ಪೂರ್ವಭಾವಿ ಸಭೆ : ಚರ್ಚೆ

ಹರಿಹರ ನಗರಸಭೆ ಬಜೆಟ್‌ ಪೂರ್ವಭಾವಿ ಸಭೆ : ಚರ್ಚೆ

ಹರಿಹರ, ಡಿ.28- ನಗರದಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ತಡೆಯಲು ಮುಂಜಾಗ್ರತಾ ಕ್ರಮ ವಹಿಸುವಂತೆ ಮತ್ತು ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವುದರಿಂದ ನಗರದಲ್ಲಿ ಸ್ವಚ್ಛತೆ ಕಾರ್ಯಕ್ಕೆ ಮೊದಲ ಆದ್ಯತೆ ನೀಡಬೇಕು ಮತ್ತು ರಂಗ ಮಂದಿರ ನಿರ್ಮಾಣ, ಹಲವಾರು ಬಡಾವಣೆಗಳ ರಸ್ತೆಗಳು ಹಾಳಾಗಿರುವುದರಿಂದ ಆದಷ್ಟು ಬೇಗನೇ ದುರಸ್ತಿ ಪಡಿಸುವುದೂ ಸೇರಿದಂತೆ ಹಲವಾರು ವಿಚಾರಗಳ ಬಗ್ಗೆ ನಗರಸಭೆಯ ಸಭಾಂಗಣದಲ್ಲಿ ನಿನ್ನೆ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಲಾಯಿತು.
ನಗರಸಭೆ ಸಭಾಂಗಣದಲ್ಲಿ ಪೌರಾಯುಕ್ತ ಐಗೂರು ಬಸವರಾಜ್ ಅವರ ಅಧ್ಯಕ್ಷತೆಯಲ್ಲಿ ನಡೆದ ಬಜೆಟ್ ಪೂರ್ವಭಾವಿ ಎರಡನೇ ಸಭೆಯಲ್ಲಿ ನಗರಸಭೆ ಸದಸ್ಯರಾದ ನಾಗರತ್ನ ಮಾತನಾಡಿ, ನಗರಸಭೆಯ ಹಲವಾರು ಬಜೆಟ್ ಸಭೆಗಳಲ್ಲಿ ಚರ್ಚೆ ಆಗಿರುವ ವಿಚಾರಗಳಿಗೆ ಮನ್ನಣೆ ಸಿಗದೇ ಇರುವುದರಿಂದ ಇಂದಿನ ಬಜೆಟ್ ಪೂರ್ವಭಾವಿ ಸಭೆಗೆ ಬಹಳಷ್ಟು ನಗರಸಭೆ ಸದಸ್ಯರು ಗೈರಾಗಿದ್ದರು.
ಜೆಡಿಎಸ್ ಮುಖಂಡ ಮಾರುತಿ ಬೇಡರ್ ಮಾತನಾಡಿ, ಇಂದ್ರಾ ನಗರದ ಪಾರ್ಕ್ ಆವರಣದಲ್ಲಿ ಇರುವಂತಹ ನೀರಿನ ಟ್ಯಾಂಕ್ ಶಿಥಿಲವಾಗಿದ್ದು, ಅದು ಬಿದ್ದು ಅವಘಡ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ. ಸಾರ್ವಜನಿಕ ಆಸ್ಪತ್ರೆಗೆ ಹೋಗುವ ರಸ್ತೆ ಹದಗೆಟ್ಟು ಗುಂಡಿಗಳು ಬಿದ್ದಿರುವುದರಿಂದ ಗರ್ಭಿಣಿಯರು ರಸ್ತೆಯಲ್ಲಿ ಹೋಗುವಾಗಲೇ ಮಗುವಿಗೆ ಜನನವಾಗುವಂತಹ ಪರಿಸ್ಥಿತಿ ಹೆಚ್ಚಾಗಿದ್ದು, ಆದಷ್ಟು ಬೇಗ ರಸ್ತೆ ದುರಸ್ತಿ ಪಡಿಸುವಂತೆ ಒತ್ತಾಯಿಸಿದರು.
ಕಾಂಗ್ರೆಸ್ ಮುಖಂಡ ದಾದಾಪೀರ್ ಭಾನುವಳ್ಳಿ ಮಾತನಾಡಿ, ನಗರದಲ್ಲಿ ಸ್ವಚ್ಛತೆ ಇಲ್ಲದೇ ಗಬ್ಬೆದ್ದು ನಾರುವಂತಾಗಿದೆ. ನಗರಸಭೆಗೆ ಸಿಬ್ಬಂದಿಗಳನ್ನು ನೇಮಕಾತಿ ಮಾಡಿ ಎಂದು ಹೇಳಿದರು.
ಪತ್ರಕರ್ತ ಎಂ.ಚಿದಾನಂದ ಕಂಚಿಕೇರಿ ಮಾತನಾಡಿ, ಈಗಾಗಲೇ ಕೊರೊನಾ ಹಾವಳಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುವ ಲಕ್ಷಣಗಳು ಇರುವುದರಿಂದ ಸ್ವಚ್ಛತೆ ಕಡೆಗೆ ಗಮನ ಹರಿಸಬೇಕು. ಬೇಸಿಗೆಯಲ್ಲಿ ಕುಡಿಯುವ ನೀರಿನ ಸರಬರಾಜು ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇರುವ ಕಡೆಯಲ್ಲಿ ಕುಡಿಯುವ ನೀರಿಗಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದರು.
ಬಜೆಟ್ ಮಂಡನೆ ಸಂದರ್ಭದಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಹಣ ಮೀಸಲಿಡಬೇಕು. ಸಾಕಷ್ಟು ರಸ್ತೆಗಳು ಹಾಳಾಗಿವೆ. ದುರಸ್ತಿಪಡಿಸಲು ಕಳೆದ ಕೆಲವು ತಿಂಗಳ ಹಿಂದೆ ಗುದ್ದಲಿ ಪೂಜೆ ಆಗಿದ್ದರೂ ಸಹಿತ ಇದುವರೆಗೂ ಕಾಮಗಾರಿ ಆರಂಭಿಸಿಲ್ಲ, ಹಾಗಾಗಿ ಕಾಮಗಾರಿಯನ್ನು ಆದಷ್ಟು ಬೇಗನೆ ಪ್ರಾರಂಭಿಸುವಂತೆ ಸಭೆಯಲ್ಲಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ವಿರೂಪಾಕ್ಷಪ್ಪ, ಉಷಾ ಮಂಜುನಾಥ್, ಸುಮಿತ್ರಾ, ನಗರಸಭೆ ಲೆಕ್ಕಾಧಿಕಾರಿ ನಾಗರಾಜ್, ಆರೋಗ್ಯ ಅಧಿಕಾರಿ ರವಿಪ್ರಕಾಶ್, ಸಂತೋಷ್, ಪತ್ರಕರ್ತ ಶೇಖರಗೌಡ ಪಾಟೀಲ್, ಇಂಜಿನಿಯರ್ ಮಂಜುಳಾ, ಮ್ಯಾನೇಜರ್ ಶಿವಕುಮಾರ್, ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.

error: Content is protected !!