ಮಲೇಬೆನ್ನೂರು, ಡಿ. 28 – ಭದ್ರಾ ಕಾಡಾ ಸಭೆ ಕರೆಯದೇ ಭದ್ರಾ ಮೇಲ್ದಂಡೆ ಕಾಲುವೆಗೆ ನಾಳೆ ದಿನಾಂಕ 29ರಿಂದ ನೀರು ಹರಿಸುವ ಏಕಪಕ್ಷೀಯ ನಿರ್ಧಾರವನ್ನು ಖಂಡಿಸುವುದಾಗಿ ಭದ್ರಾ ಯೋಜನಾ ವ್ಯಾಪ್ತಿಯ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳದ ಅಧ್ಯಕ್ಷ ವೈ. ದ್ಯಾವಪ್ಪರೆಡ್ಡಿ ಹೇಳಿದರು.
ಅವರು ಗುರುವಾರ ಮಲೇಬೆನ್ನೂರಿನಲ್ಲಿರುವ ಭದ್ರಾ ನಾಲಾ ನಂ.3 ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಕಛೇರಿ ಆವರಣದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತಾನಾಡಿದರು.
ಭದ್ರಾ ಅಚ್ಚುಕಟ್ಟಿನ ತೋಟದ ಬೆಳೆಗಳಿಗೆ ನೀರು ಹರಿಸುವ ಸಂಬಂಧ ಚರ್ಚಿಸಲು ಜನವರಿ ಮೊದಲ ವಾರದಲ್ಲಿ ಭದ್ರಾ ಕಾಡಾ ಸಭೆ ಕರೆಯಬೇಕೆಂದು ಒತ್ತಾಯಿಸಿದ ದ್ಯಾವಪ್ಪ ರೆಡ್ಡಿ ಅವರು, ಜನವರಿ 10ರಿಂದ ಸತತವಾಗಿ 20 ದಿವಸ ನಾಲೆಯಲ್ಲಿ ನೀರು ಹರಿಸಬೇಕು.
ಆನ್ ಪದ್ಧತಿಯಲ್ಲಿ 20 ದಿವಸ ನೀರು ಹರಿಸಿ, 20 ದಿವಸ ಬಂದ್ ಮಾಡಿ, ಮತ್ತೆ 20 ದಿವಸ ನೀರು ಹರಿಸಬೇಕೆಂಬ ಇಚ್ಛೆಯನ್ನು ಅಚ್ಚುಕಟ್ಟಿನ ರೈತರು ವ್ಯಕ್ತಪಡಿಸಿದ್ದಾರೆಂದು ದ್ಯಾವಪ್ಪರೆಡ್ಡಿ ಹೇಳಿದರು.
ರೈತ ಮುಖಂಡ ತೇಜಸ್ವಿ ಪಟೇಲ್ ಮಾತನಾಡಿ, ಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ಕರೆಯದೇ ನಾಲೆಗೆ ನೀರು ಹರಿ ಸುವ ತೀರ್ಮಾನ ಕೆಟ್ಟ ಸಂಪ್ರದಾಯವಾಗಿದೆ.
ಭದ್ರಾ ಮೇಲ್ದಂಡೆ ಕಾಲುವೆಗೆ ಕುಡಿ ಯುವ ನೀರು ಹರಿಸುಲು ನಮ್ಮ ವಿರೋಧ ವಿಲ್ಲ. ಆದರೆ ಭದ್ರಾ ಕಾಡಾ ಸಭೆ ಕರೆಯದೇ ನೀರು ಹರಿಸಲು ಮುಂದಾಗಿರುವುದಕ್ಕೆ ನಮ್ಮ ವಿರೋಧವಿದೆ. ತುಂಗಾ ಜಲಾಶಯದಿಂದ ನೀರು ಲಿಫ್ಟ್ ಮಾಡಿದ ನಂತರವೇ ಭದ್ರಾ ಮೇಲ್ದಂಡೆ ಕಾಲುವೆಗೆ ನೀರು ಹರಿಸಬೇಕೆಂಬ ನಿಯಮವಿದ್ದರೂ ರಾಜಕೀಯ ಒತ್ತಡದಿಂದಾಗಿ ಈ ರೀತಿ ಏಕಾಏಕಿ ನೀರು ಹರಿಸುವುದು ಸರಿಯಲ್ಲ ಎಂದು ತೇಜಸ್ವಿ ಪಟೇಲ್ ಅವರು ತತ್ಕ್ಷಣ ಕಾಡಾ ಸಭೆಕರೆಯುವಂತೆ ಒತ್ತಾಯಸಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಜಿ. ಮಂಜುನಾಥ್ ಪಟೇಲ್, ರೈತ ಮುಖಂಡರಾದ ನಂದಿತಾವರೆ ಶಂಭುಲಿಂಗಪ್ಪ ಕುಂಬಳೂರಿನ ಕೆ.ಆಂಜನೇಯ, ದೊಡ್ಡಬಾತಿ ವಿಶ್ವಾಂಬರ, ಕೆಂಗಲಹಳ್ಳಿ ದೇವೇಂದ್ರಪ್ಪ, ಕುಕ್ಕುವಾಡದ ಡಿ.ಬಿ. ಶಂಕರ್, ಕಾರಿಗನೂರಿನ ಭ್ರಮಾನಂದ, ನಂದಿತಾವರೆಯ ಎನ್.ಪಿ. ರವಿರಾಜ್, ಡಿ.ಬಿ. ನಂದೀಶ್, ಜಿ.ಕೆ. ರಾಘವೇಂದ್ರ, ಚಂದ್ರಪ್ಪ, ಜನತಾ ಬಜಾರ್ ನಿರ್ದೇಶಕ ಪಿ.ಹೆಚ್. ಶಿವಕುಮಾರ್ ಈ ವೇಳೆ ಹಾಜರಿದ್ದರು.
February 4, 2025