ಮಲೇಬೆನ್ನೂರಿನಲ್ಲಿ ನಾಲ್ವರನ್ನು ಕಚ್ಚಿ ಗಾಯಗೊಳಿಸಿರುವ ಈ ಮುಷ್ಯವು ಪುರಸಭೆ ಹಾಗೂ ಅರಣ್ಯ ಇಲಾಖೆಯವರ ಸೆರೆಗೆ ಸಿಗದೆ ಗಿಡಗಳ ಮಧ್ಯದಲ್ಲಿ ಕುಳಿತು ಕಿಚಾಯಿಸಿತು.
ಮಲೇಬೆನ್ನೂರು, ಡಿ.5- ಪಟ್ಟಣದಲ್ಲಿ ಸಾರ್ವಜನಿಕರ ಮೇಲೆ ದಾಳಿ ಮಾಡಿ ಗಾಯಗೊಳಿಸುತ್ತಿರುವ ಮುಷ್ಯನನ್ನು ಸೆರೆ ಹಿಡಿಯಲು ಮಂಗಳವಾರ ಪುರಸಭೆ ಮತ್ತು ಅರಣ್ಯ ಇಲಾಖೆಯವರು ನಡೆಸಿದ ಕಾರ್ಯಾಚರಣೆ ಸಫಲವಾಗಲಿಲ್ಲ.
ಸೋಮವಾರ ನಾಲ್ವರ ಮೇಲೆ ದಾಳಿ ಮಾಡಿ, ಗಾಯಗೊಳಿಸಿದ್ದ ಮುಷ್ಯವು ಈ ದಿನ ಯಾರ ಮೇಲೂ ದಾಳಿ ಮಾಡಿಲ್ಲ. ಬೆಳಿಗ್ಗೆಯಿಂದಲೇ ಕಾರ್ಯಾಚರಣೆ ಆರಂಭಿಸಿದ ಪುರಸಭೆ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಮುಷ್ಯ ಇದ್ದ ಸ್ಥಳದಲ್ಲಿ ಬೋನು ಇಟ್ಟು ಮತ್ತು ಅದಕ್ಕೆ ಬೇಕಾದ ಆಹಾರ ಪದಾರ್ಥಗಳನ್ನು ಇಟ್ಟು ಕಾದರೂ ಆ ಮುಷ್ಯ ಬೋನಿನ ಹತ್ತಿರ ಬರದೇ ಎಲ್ಲರನ್ನೂ ಸತಾಯಿಸಿತು.
ನಂತರ ಮುಷ್ಯ ಸ್ಥಳ ಬದಲಾವಣೆ ಮಾಡಿದಂತೆ ಬೋನ್ ಅನ್ನು ತೆಗೆದುಕೊಂಡು ಹೋಗಿ ಮುಷ್ಯ ಇರುವ ಸ್ಥಳದಲ್ಲಿಯೇ ಇಟ್ಟು ತಾಸುಗಟ್ಟಲೇ ಕಾದು ಏನೆಲ್ಲಾ ಪ್ರಯತ್ನ ಮಾಡಿದರೂ ಮುಷ್ಯ ಸೆರೆಗೆ ಸಿಗಲಿಲ್ಲ. ಬುಧವಾರ ಕಾರ್ಯಾಚರಣೆ ಮುಂದುವರೆ ಯಲಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಎ.ಸುರೇಶ್ ಸಂಜೆ `ಜನತಾವಾಣಿ’ಗೆ ತಿಳಿಸಿದರು. ಅರಣ್ಯ ಇಲಾಖೆಯ ಸದಾನಂದ್, ಸತೀಶ್ ಹಾಗೂ ಸಿಬ್ಬಂದಿಗಳು ಈ ವೇಳೆ ಹಾಜರಿದ್ದರು.