ಚಿತದುರ್ಗದ ಶರಣ ಸಂಸ್ಕೃತಿ ಉತ್ಸವದಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಡಾ. ಅಕ್ಕೈ ಪದ್ಮಶಾಲಿ ಕಿಡಿನುಡಿ
ಚಿತ್ರದುರ್ಗ, ಅ.26- ಮಹಿಳೆಯರನ್ನು ಶೋಷಿತ ರೂಪದಲ್ಲಿ ನೋಡುವ ಸಮಾಜಕ್ಕೆ ನನ್ನದೊಂದು ಧಿಕ್ಕಾರವಿದೆ ಎಂದು ಲೈಂಗಿಕ ಅಲ್ಪಸಂಖ್ಯಾತರ ಪರ ಹಕ್ಕುಗಳ ಹೋರಾಟ ಗಾರ್ತಿ ಡಾ.ಅಕ್ಕೈ ಪದ್ಮಶಾಲಿ ಹೇಳಿದರು.
ಇಲ್ಲಿನ ಮುರುಘಾ ಮಠದಲ್ಲಿ ಶರಣ ಸಂಸ್ಕೃತಿ ಉತ್ಸವ-2023ರ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ `ವಚನಕಾರ್ತಿಯರ ಅರಿವಿನ ನೆಲೆಗಳು’ ವಿಷಯ ಕುರಿತಾದ ಮಹಿಳಾ ಸಮಾವೇಶದಲ್ಲಿ ಅವರು ಮಾತನಾಡಿದರು.
ಲಿಂಗತ್ವದ ಆಧಾರದ ಮೇಲೆ ಈ ಸಮಾಜದಲ್ಲಿ ಶೋಷಣೆ ಅನುಭವಿಸುತ್ತಿರುವ ನಮ್ಮಂತವರನ್ನು ಗುರುತಿಸಿ, ಸನ್ಮಾನಿಸುತ್ತಿರುವುದು ನಮ್ಮಗಳಿಗೆ ಸಂದ ಗೌರವವಾಗಿದೆ. ನಮ್ಮಗಳದು ನಿಷ್ಕಲ್ಮಷವಾದ ಮನಸ್ಸು. ನಾವುಗಳು ಶೋಷಿತ ಸಮಾಜಕ್ಕೆ ಸೇರಿದವರು. ಮಹಿಳೆಯರನ್ನು ಶೋಷಿತ ರೂಪದಲ್ಲಿ ನೋಡುವ ಸಮಾಜಕ್ಕೆ ನನ್ನದೊಂದು ಧಿಕ್ಕಾರವಿದೆ. ಸಮಾಜದಲ್ಲಿ ಶೋಷಿತರ ಸುಧಾರಣೆ ತರುವಲ್ಲಿ ಶ್ರಮಿಸುತ್ತೇವೆ ಎಂದು ಅವರು ನುಡಿದರು.
ಮಹಿಳೆಯರಿಗೆ 12ನೇ ಶತಮಾನದ ಬಸವಾದಿ ಶಿವ ಶರಣರ ಕಾಲದಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿತ್ತು ಎಂದು ಪ್ರಧಾನ ಸತ್ರ ಮತ್ತು ಜಿಲ್ಲಾ ನ್ಯಾಯಾಧೀಶರು ಹಾಗು ಮುರುಘಾಮಠದ ಆಡಳಿತಾಧಿಕಾರಿ ಶ್ರೀ ಮತಿ ಬಿ.ಎಸ್.ರೇಖಾ ಅಭಿಪ್ರಾಯಿಸಿದರು.
ಚಿಂತಕರಾದ ಡಾ.ಶುಭಾ ಮರವಂತೆ ವಿಷಯಾವಲೋಕನ ಮಾಡಿ ಮಾತನಾಡಿ, ಎಲ್ಲಿ ಸ್ತ್ರೀ ಶಕ್ತಿ ತುಂಬಿರುತ್ತದೆಯೋ ಅಲ್ಲೆಲ್ಲಾ ನವರಾತ್ರಿ ಇದ್ದಂತೆ. ಹನ್ನೆರಡನೇ ಶತಮಾನದಲ್ಲಿ ಬಸವಾದಿ ಶಿವಶರಣರ ಕಾಲದಲ್ಲಿ ಸ್ತ್ರೀಯರಿಗೆ ಮುಕ್ತ ಸ್ವಾತಂತ್ರ್ಯವನ್ನು ನೀಡಲಾಗಿತ್ತು. ಅದನ್ನು ಅಂಬೇಡ್ಕರ್ರವರು ಇಂದಿನ ಸಮಾಜದಲ್ಲಿ ಮುಂದುವರೆಸಿದವರಾಗಿದ್ದಾರೆ. `ನಾನು ಮುಕ್ತಳಲ್ಲ, ಅಮುಕ್ತಳಲ್ಲ ಹರುಷ ಉಳ್ಳಂತ ಹೆಣ್ಣು’ ಎಂದು ಮುಕ್ತಾಯಕ್ಕ ಆ ದಿನಮಾನದಲ್ಲಿಯೇ ಹೇಳಿದ್ದಾರೆ. ವೈಚಾರಿಕ, ಆರ್ಥಿಕವಾಗಿಯೂ ಬದುಕನ್ನು ಇಂದಿನ ಯುಗದಲ್ಲಿ ಮಹಿಳೆಯರು ಕಟ್ಟಿಕೊಳ್ಳಬೇಕಿದೆ ಎಂದು ತಿಳಿಸಿದರು.
ಮಾಜಿ ಸಚಿವ ಹೆಚ್. ಆಂಜನೇಯ ಮಾತನಾಡಿ, ಬಸವಾದಿ ಶರಣರು ನಮ್ಮ ಸಮಾಜದ ಕಲ್ಪನೆ ಕಟ್ಟಿಕೊಟ್ಟರು. ಸತಿಪತಿಯರು ಅನ್ಯೋನ್ಯ ವಾಗಿದ್ದಾಗ ಮಾತ್ರ ಸಂಸಾರ ಸರಿಯಾಗಿ ನಡೆಯುತ್ತದೆ. ಮಹಿಳೆಗೆ ವಾತ್ಸಲ್ಯ ತೋರಿಸುವುದು ಅತ್ಯಗತ್ಯ. ಈಗಿನ ಮಾಧ್ಯಮಗಳು ಹೆಚ್ಚಾಗಿ ಜನರ ಜೀವನವನ್ನು ಪರಿವರ್ತನೆ ಮಾಡುತ್ತಿವೆ. ನ್ಯಾಯಾಲಯಗಳು ಹೆಚ್ಚಿನ ಜವಾಬ್ದಾರಿಯನ್ನು ಹೊಂದಿವೆ. ಮಹಿಳಾ ನ್ಯಾಯವಾದಿಗಳು ಹೆಚ್ಚಾಗಿ ಇರುವುದರಿಂದ ಮಹಿಳೆಯರ ಸಬಲೀಕರಣ ಸಾಧ್ಯ ಎಂದು ತಿಳಿಸಿದರು.
ಹೆಸರಾಂತ ವೈದ್ಯರಾದ ಡಾ. ಜಿ.ಬಿ. ಶಿಲ್ಪ ಮಾತನಾಡಿ, ಪುರುಷ-ಮಹಿಳೆ ಎಂಬ ಭೇದಭಾವ ಹೆಚ್ಚಾಗಿದೆ. ಹೆಣ್ಣು ಮತ್ತು ಗಂಡು ಎಂಬ ಲಿಂಗಭೇದ ಹೆಚ್ಚಾಗಿರುವುದರಿಂದ ಸಮಾಜದಲ್ಲಿ ಅಸಮಾನತೆ ಹೆಚ್ಚಾಗಿದೆ. ಲಿಂಗ ತಾರತಮ್ಯವನ್ನು ಹೋಗಲಾಡಿಸಿದರೆ ಮಾತ್ರ ಅಭಿವೃದ್ದಿಯನ್ನು ಕಾಣಲು ಸಾದ್ಯ ಎಂದು ತಿಳಿಸಿದರು.
ಅ.ಭಾ.ವಿ.ಮ.ಮಹಿಳಾ ಉದ್ಯಮಿಗಳ ಘಟಕದ ಅಧ್ಯಕ್ಷರಾದ ಶ್ರೀಮತಿ ಕೆ.ಸಿ. ವೀಣಾ ಸುರೇಶ್ಬಾಬು ಮಾತನಾಡಿದರು.
ಕಾರ್ಯಕ್ರಮದಲ್ಲಿ ಶರಣ ಸಂಸ್ಕೃತಿ ಉತ್ಸವ ಸಮಿತಿ ಗೌರವಾಧ್ಯಕ್ಷರಾದ ಅಥಣಿ ಗಚ್ಚಿನಮಠದ ಶ್ರೀ ಶಿವಬಸವ ಮಹಾಸ್ವಾಮಿಗಳು, ಉಸ್ತುವಾರಿ ಶ್ರೀಗಳಾದ ಶ್ರೀ ಬಸವಪ್ರಭು ಸ್ವಾಮೀಜಿ, ಬಸವ ತತ್ವ ಪ್ರಸಾರಕರಾದ ಬೀದರ್ನ ಶರಣೆ ಸತ್ಯಕ್ಕ, ಎಸ್.ಜೆ.ಎಂ.ವಿದ್ಯಾಪೀಠದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಭರತ್ಕುಮಾರ್, ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಕೆ.ಸಿ.ನಾಗರಾಜ್, ರೇಷ್ಮೆ ಮಾರಾಟ ಮಂಡಳಿ ಮಾಜಿ ಅಧ್ಯಕ್ಷರಾದ ಶ್ರೀಮತಿ ಸವಿತಾ ಅಮರಶೆಟ್ಟಿ, ಮಾಯಾ ಎಸ್ ನಾಯಕ್, ಅಜೀದಾ ಬೇಗಂ ಉಪಸ್ಥಿತರಿದ್ದರು.
ಸಮಾಜ ಸೇವಕಿ ಕು. ಕೆ.ಅರ್ಪಿತಾ ಹಾಗೂ ಗಾನಶ್ರೀ ಸಿ. ಪಿ ಇವರುಗಳನ್ನು ಸನ್ಮಾನಿಸಲಾಯಿತು.
ಪಿಳ್ಳೆಕೇರನಹಳ್ಳಿ ಬಾಪೂಜಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು, ಎಸ್.ಜೆ.ಎಂ.ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು, ದೊಡ್ಡಸಿದ್ದವ್ವನಹಳ್ಳಿ ಜ್ಞಾನಪೂರ್ಣ ಸಂಸ್ಥೆಯ ವಿದ್ಯಾರ್ಥಿಗಳು, ಎಸ್.ಜೆ.ಎಂ.ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು ನೃತ್ಯ ಪ್ರದರ್ಶನ, ಸಾಂಸ್ಕೃತಿಕ ಸಂಭ್ರಮದಲ್ಲಿ ಮಜಾ ಟಾಕೀಸ್ನ ಕಲಾವಿದೆ ರೆಮೋ ಮತ್ತು ತಂಡದವರು ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಜಮುರಾ ಕಲಾವಿದರು ಹಾಗೂ ಗಾನಯೋಗಿ ಕಲಾವಿದರು ಪ್ರಾರ್ಥಿಸಿದರು. ಶ್ರೀಮತಿ ರುದ್ರಾಣಿ ಗಂಗಾಧರ್ ಸ್ವಾಗತಿಸಿದರೆ, ಶ್ರೀಮತಿ ಅನು ಲಿಂಗರಾಜ್ ನಿರೂಪಿಸಿ, ವಂದಿಸಿದರು.