ಹರಪನಹಳ್ಳಿ, ಸೆ. 15 – ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತಹ ಗಣೇಶ ಮೂರ್ತಿ ಪ್ರತಿಷ್ಟಾಪನೆ ಮಾಡಿದ ಸುತ್ತ ಮುತ್ತ ಇಸ್ಪೀಟ್ ಸೇರಿದಂತೆ ಯಾವುದೇ ಅಕ್ರಮ ಚಟುವಟಿಕೆಗಳು ಮತ್ತು ಜೂಜಾಟಗಳಿಗೆ ಅವಕಾಶವಿಲ್ಲ ಎಂದು ಪೊಲೀಸ್ ವೃತ್ತ ನಿರೀಕ್ಷಕ ನಾಗರಾಜ ಎಂ. ಕಮ್ಮಾರ ಎಚ್ಚರಿಸಿದ್ದಾರೆ.
ಪಟ್ಟಣದ ಪೋಲೀಸ್ ಠಾಣಾ ಆವರಣದಲ್ಲಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳ ಶಾಂತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಡಿಜಿ ಸೌಂಡ್ ಸಿಸ್ಟಮ್‌ಗೆ ಸಹ ಅವಕಾಶ ವಿಲ್ಲ, ಎರಡು ಸೌಂಡ್ ಬಾಕ್ಸ್ ಗಳನ್ನು ಮಾತ್ರ ಅಳವಡಿಸಿಕೊಳ್ಳಬೇಕು, ಹೆಚ್ಚಾದರೆ ಪ್ರಕರಣ ದಾಖಲಿಸುತ್ತೇವೆ ಎಂದು ಅವರು ಹೇಳಿದರು.
ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಚಾಪನೆಗೆ ಪರವಾನಿಗೆ ಕಡ್ಡಾಯವಾಗಿದೆ, ಅನುಮತಿ ಇಲ್ಲದ ಬೆಂಟಿಂಗ್ಸ್, ಬ್ಯಾನರ್ ಕಟ್ಟುವ ಹಾಗಿಲ್ಲ ಹಾಗೂ ಸಿಸಿ ಕ್ಯಾಮರ ಅಳವಡಿಸಬೇಕು ಎಂದ ಅವರು ಬೆಳಿಗ್ಗೆ 6 ರಿಂದ 10 ಗಂಟೆವರೆಗೆ ಮಾತ್ರ ಸೌಂಡ್ ವ್ಯವಸ್ಥೆ ಇರಬೇಕು.
ಪಿಎಸ್‌ಐ ಶಂಭುಲಿಂಗ ಹಿರೇಮಠ್ ಮಾತನಾಡಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಡಿವೈಎಸ್ಪಿ ಮಾಲತೇಶ ಕೂನುಬೇವು ಮಾತನಾಡಿ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಗಣೇಶ ಹಬ್ಬ ಆಚರಿಸಿ, ವಿದ್ಯುತ್ ಸಂಪರ್ಕಕ್ಕೆ ಬೆಸ್ಕಾಂ ಅನುಮತಿ ಕಡ್ಡಾಯ ಎಂದು ಅವರು ಹೇಳಿದರು.
ಪುರಸಭಾ ಹಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ ಮಾತನಾಡಿ, ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಕೆರೆ ಕಟ್ಟೆಗಳಲ್ಲಿ ವಿಸರ್ಜಿಸು ವಂತಿಲ್ಲ, ಅದಕ್ಕಾಗಿ ಹರಿಹರ ರಸ್ತೆ ಹಾಗೂ ನಾಯಕನಕೆರೆ ಬಳಿ ಹೊಂಡ ತೆಗೆದು ವಿಸರ್ಜನೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಗ್ರೇಡ್ 2 ತಹಶೀಲ್ದಾರ ನಟರಾಜ, ಅಗ್ನಿ ಶಾಮಕ ದಳದ ಮುಖ್ಯಸ್ಥ ರಾಮಪ್ಪ, ಬೆಸ್ಕಾಂನ ಮಾರುತೇಶ, ಕಾಂಗ್ರೆಸ್ ಮುಖಂಡ ಬೇಲೂರು ಅಂಜಪ್ಪ, ಪುರಸಭಾ ಮಾಜಿ ಉಪಾಧ್ಯಕ್ಷ ವಸಂತಪ್ಪ ಇತರರು ಸಭೆಯಲ್ಲಿ ಪಾಲ್ಗೊಂಡಿದ್ದರು.