ದಾವಣಗೆರೆ, ಸೆ.13- ರಾಜ್ಯದಾದ್ಯಂತ `ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ವಿಜಯೋತ್ಸವ ಯಾತ್ರೆ ಕೈಗೊಂಡಿರುವ ನಟ ರಕ್ಷಿತ್ ಶೆಟ್ಟಿ ಅವರು ನಗರದ ಗೀತಾಂಜಲಿ ಚಿತ್ರಮಂದಿರಕ್ಕೆ ನಿನ್ನೆ ಭೇಟಿ ನೀಡಿದ್ದರು.
ತೆರೆದ ವಾಹನದಲ್ಲಿ ಚಿತ್ರಮಂದಿರದ ಆವರಣದಲ್ಲಿ ನಿಂತು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ನಟ ರಕ್ಷಿತ್ ಶೆಟ್ಟಿ ಅವರು, `ಸಪ್ತ ಸಾಗರದಾಚೆ ಎಲ್ಲೋ’ ಕನ್ನಡ ಸಿನಿಮಾ ತೆರೆ ಕಂಡು ರಾಜ್ಯದಾದ್ಯಂತ ಸಿನೆಮಾ ಪ್ರಿಯರ ಮನಸ್ಸನ್ನು ಗೆದ್ದಿರುವುದು ಸಂತಸ ತಂದಿದೆ. ಸಿನಿಮಾದ ಭಾಗ 2 ಅಕ್ಟೋಬರ್ 28 ಕ್ಕೆ ತೆರೆ ಕಾಣಲಿದೆ ಎಂದರು.
ಪ್ರೇಕ್ಷಕರೆಲ್ಲರು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ, ಚಿತ್ರ ನಿಮಗೆ ಇಷ್ಟ ಆದರೆ ಬೇರೆಯವರನ್ನು ಸಿನಿಮಾ ನೋಡಲು ಕಳುಹಿಸಿ ಎಂದು ಮನವಿ ಮಾಡಿದ ಅವರು, ನಾವು 2 ರಿಂದ 3 ವರ್ಷ ಸಿನಿಮಾ ಮೇಲೆ ಕೆಲಸ ಮಾಡೋದು ಕೊನೆಯದಾಗಿ ನಿಮ್ಮ ಪ್ರತಿಕ್ರಿಯೆ ನೋಡುವುದಕ್ಕೆ, ನಿಮ್ಮ ಮುಖದಲ್ಲಿ ನಗು ನೋಡಿದಾಗ ನಾವು ಮಾಡಿದ ಕೆಲಸಕ್ಕೆ ಪ್ರತಿಫಲ ಸಿಕ್ಕಿದಂತೆ ಎಂದರು. ಈ ವೇಳೆ ತಮ್ಮ ನೆಚ್ಚಿನ ನಟನ ಜೊತೆ ಅಭಿಮಾನಿಗಳು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.