ಮಲೇಬೆನ್ನೂರು, ಸೆ.13- ಇಲ್ಲಿನ ಭದ್ರಾ ನಾಲಾ ನಂ. 3 ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಕಚೇರಿ ವ್ಯಾಪ್ತಿಯ ಹೊರಗುತ್ತಿಗೆ ನೌಕರರು ಬಾಕಿ ವೇತನ ಪಾವತಿಗೆ ಆಗ್ರಹಿಸಿ, ಮಂಗಳವಾರದಿಂದ ಮತ್ತೆ ಪ್ರತಿಭಟನೆ ಆರಂಭಿಸಿದ್ದಾರೆ.
ಆ. 22 ರಂದು ಅಧಿಕಾರಿಗಳು ಸೆ. 11 ರೊಳಗೆ ಹೊರಗುತ್ತಿಗೆ ನೌಕರರ 5 ತಿಂಗಳ ಬಾಕಿ ವೇತನ ಪಾವತಿ ಮಾಡುವುದಾಗಿ ಭರವಸೆ ನೀಡಿ ದ್ದರು. ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಭರವಸೆ ನಂಬಿ ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ನೌಕರರು ಪ್ರತಿಭಟನೆ ಹಿಂದಕ್ಕೆ ಪಡೆದಿದ್ದರು.
ಆದರೆ ಈಗ ಟೆಂಡರ್ ಪ್ರಕ್ರಿಯೆ ನೆನೆಗುದಿಗೆ ಬಿದ್ದಿದ್ದು ಇಎಸ್ಐ ಭವಿಷ್ಯನಿಧಿ ಸಮಸ್ಯೆ ಉದ್ಭವಿಸಿದೆ ಎಂದು ಮಾಹಿತಿ ನೀಡಿದ ದಿನಗೂಲಿ ನೌಕರರ ಅಧ್ಯಕ್ಷ ಎ.ಕೆ. ಆಂಜನೇಯ ಅವರು, ಹಿರಿಯ ಅಧಿಕಾರಿಗಳು ಕೂಡಲೇ ನಮ್ಮ ಸಮಸ್ಯೆ ಪರಿಹರಿಸಿ ವೇತನ ಪಾವತಿ ಮಾಡುವಂತೆ ಪಟ್ಟುಹಿಡಿದರು.
ವೇತನ ಇಲ್ಲದೆ ಹೊರಗುತ್ತಿಗೆ ನೌಕರರು ಬೀದಿಗೆ ಬಿದ್ದಿದ್ದಾರೆ. ನೌಕರರು ಸತ್ತರೂ ಯಾರೂ ಕೇಳುತ್ತಿಲ್ಲ ಎಂದು ಹರಿಹಾಯ್ದರು.
ಪ್ರಭಾರಿ ಕಾರ್ಯಪಾಲಕ ಎಂಜಿನಿಯರ್ ಮಂಜುನಾಥ್ ಆಗಮಿಸಿ ಸಮಸ್ಯೆ ಆಲಿಸಿ, ಗುತ್ತಿಗೆದಾರ ಪ್ರಕಾಶ್ ಎಂಬುವವರ ಜೊತೆ ದೂರವಾಣಿ ಮೂಲಕ ಚರ್ಚೆ ನಡೆಸಿದರೂ ಫಲ ನೀಡಲಿಲ್ಲ.
ಕೊನೆಗೆ ರೈತ ಮುಖಂಡ ಮಲ್ಲನಾಯ್ಕನಹಳ್ಳಿ ಬಿ.ಎಂ. ಶೇಖರಪ್ಪ ಮಧ್ಯ ಪ್ರವೇಶಿಸಿ ನಿಮ್ಮ ಇಲಾಖೆ ಹಾಗೂ ಹೊರ ಗುತ್ತಿಗೆ ನೌಕರರ ನಡುವೆ ರೈತರು ಸಾಯುತ್ತಿದ್ದಾರೆ. ತೋಟಕ್ಕೂ ನೀರು ಹಾಯಿಸಲು ಆಗುತ್ತಿಲ್ಲ. ಸೌಡಿಗಳು ಇಲ್ಲದೆ ನೀರು ಹರಿಸುವುದು ಅಸಾಧ್ಯ ಎಂದು ಇಂಜಿನಿಯರ್ ಜೊತೆ ವಾಗ್ವಾದ ನಡೆಸಿದರು.
ರೈತ ಮುಖಂಡ ಹೊಳೆಸಿರಿಗೆರೆ ತಿಪ್ಪೇರುದ್ರಪ್ಪ ಮಾತನಾಡಿ, ಅನಧಿಕೃತ ಪಂಪ್ಸೆಟ್ ತೆರವಿನ ಬಗ್ಗೆ ಅಧಿಕಾರಿಗಳು ನಾಟಕ ಮಾಡುತ್ತಿದ್ದಾರೆ. ನಾಲೆಯಲ್ಲಿ ನೀರು ಹರಿದು ಬರುತ್ತಿಲ್ಲ ಎಂದು ನ್ಯಾಯಾಂಗ ನಿಂದನಾ ಅರ್ಜಿ ಸಲ್ಲಿಸುವುದಾಗಿ ತಿಳಿಸಿದರು.
ಕಾರ್ಯಪಾಲಕ ಎಂಜಿನಿಯರ್ ಮಂಜುನಾಥ್ ಅವರು ವೇತನ ಸಮಸ್ಯೆ ಪರಿಹರಿಸಲು ಸೆ. 20 ರ ತನಕ ಕಾಲಾವಕಾಶ ನೀಡಿ ಎಂದು ನೌಕರರಿಗೆ ಭರವಸೆ ನೀಡಿದರು. ಈ ಭರವಸೆಯನ್ನು ಒಪ್ಪದ ದಿನಗೂಲಿ ನೌಕರರು ಬುಧವಾರವೂ ಧರಣಿ ಮುಂದುವರೆಸಿದ್ದಾರೆ.
ಮಲೇಬೆನ್ನೂರು, ಬಸವಾಪಟ್ಟಣ, ಸಾಸ್ವೇಹಳ್ಳಿ ಉಪವಿಭಾಗಗಳ ವ್ಯಾಪ್ತಿಯ 300ಕ್ಕೂ ಹೆಚ್ಚು ಹೊರಗುತ್ತಿಗೆ ನೌಕರರ ಜೊತೆಗೆ ಭದ್ರಾ ಅಚ್ಚುಕಟ್ಟಿನ ಕೊನೆ ಭಾಗದ ರೈತರೂ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.