ಸಮಾಜ ಸೇವೆ ಮುಂದಿನ ಪೀಳಿಗೆಗೆ ಮಾದರಿ

ಸಮಾಜ ಸೇವೆ ಮುಂದಿನ ಪೀಳಿಗೆಗೆ ಮಾದರಿ

ನೇತ್ರದಾನ ಪ್ರೇರಣಾ ಪಕ್ಷಾಚರಣೆ ಉದ್ಘಾಟಿಸಿದ ನ್ಯಾ.ರಾಜೇಶ್ವರಿ ಎನ್. ಹೆಗಡೆ

ದಾವಣಗೆರೆ, ಸೆ.9- ಸಂಘ, ಸಂಸ್ಥೆಗಳು ನಡೆಸುವ ಸಾಮಾಜಿಕ ಕಾರ್ಯಕ್ರಮಗಳು ಮುಂದಿನ ಪೀಳಿಗೆಗೆ ಮಾದರಿ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ರಾಜೇಶ್ವರಿ ಎನ್. ಹೆಗಡೆ ಹೇಳಿದರು.

ಶ್ರೀ ಅಕ್ಕಮಹಾದೇವಿ ಸಮಾಜ, ಶ್ರೀ ಅಕ್ಕ ಮಹಾದೇವಿ ನೇತ್ರದಾನ ಪ್ರೇರಣಾ ಸಮಿತಿ, ಜಿಲ್ಲಾ ಅಂಧತ್ವ ನಿಯಂತ್ರಣ ಸಮಿತಿ ಸಂಯುಕ್ತಾಶ್ರಯ ದಲ್ಲಿ ಶ್ರೀಮತಿ ಮೋತಿ ಚನ್ನಬಸಮ್ಮ ವೀರಪ್ಪ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಹಮ್ಮಿಕೊಳ್ಳ ಲಾಗಿದ್ದ ನೇತ್ರದಾನ ಪ್ರೇರಣಾ ಪಕ್ಷಾಚರಣೆ ದಿನಾ ಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಕೃತಿಯಿಂದ ನೀರು, ಗಾಳಿ, ಬೆಳಕು ಹಾಗೂ ಸಮಾಜದ ಸಹಕಾರ ಪಡೆಯುತ್ತಾ ದೊಡ್ಡವರಾಗುವ ನಾವು, ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು. ಈ ನಿಟ್ಟಿನಲ್ಲಿ ಸಂಘ-ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಹೇಳಿದರು.

ಬೇರೆಲ್ಲಾ ದಾನಗಳಿಗಿಂತ ನೇತ್ರದಾನ ಬಹುಮುಖ್ಯವಾದದ್ದು. ಈ ಹಿಂದೆ ನೇತ್ರದಾನ ಮಾಡಲು ಹಿಂದೇಟು ಹಾಕುತ್ತಿದ್ದರು. ಆದರೆ ಇಂದು ಸ್ವಯಂ ಪ್ರೇರಿತವಾಗಿ ನೇತ್ರದಾನಕ್ಕೆ ಜನರು ಮುಂದಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.

ನೌಕರಿಯಲ್ಲಿರುವವರು ನಿವೃತ್ತಿ ಬಯಸುವಂತಹ ವೇಳೆಯಲ್ಲಿ ಅಕ್ಕಮಹಾದೇವಿ ಸಮಾಜದ ಪದಾಧಿಕಾರಿಗಳು ಅತಿ ಉತ್ಸಾಹದಿಂದ ಸೇವಾ ಚಟುವಟಿಕೆಗಳಲ್ಲಿ  ಪಾಲ್ಗೊಳ್ಳುತ್ತಿರುವುದು ನಮಗೆಲ್ಲಾ ಪ್ರೇರಣೆಯಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನೇತ್ರ ತಜ್ಞ ಡಾ.ಎಸ್.ಎನ್. ಕೋಲಕೂರ್ ಮಾತನಾಡಿ, ಪ್ರತಿ ವರ್ಷ ಆಗಸ್ಟ್ 25ರಿಂದ ಸೆಪ್ಟೆಂಬರ್ 8ರವರೆಗೆ ರಾಷ್ಟ್ರದಾದ್ಯಂತ ನೇತ್ರದಾನ ಪ್ರೇರಣಾ ಪಕ್ಷಾಚರಣೆ ಆಚರಿಸಲಾಗುತ್ತಿದೆ ಎಂದರು.

ದೇಶದಲ್ಲಿ ಪ್ರತಿ ವರ್ಷ 1.25 ಲಕ್ಷ ಜನರು ಪಾರದರ್ಶಕ ಪಟಲ ದೋಷದಿಂದ ಬಳಲುತ್ತಿದ್ದಾರೆ. ಬೇರೆ ಯಾವುದೇ ಅಂಗವನ್ನು ಕಳೆದುಕೊಂಡರೂ ಜೀವಿಸಬಹುದು. ಆದರೆ ಕಣ್ಣುಗಳಿರದಿದ್ದರೆ ಜೀವನ ಕಷ್ಟವಾಗುತ್ತದೆ. ಆದ್ದರಿಂದ ಕಣ್ಣುಗಳ ಸಂರಕ್ಷಣೆಗೆ ಪ್ರಮುಖ ಆದ್ಯತೆ ನೀಡಬೇಕು ಎಂದು ಹೇಳಿದರು.

ರಾಜ್ಯದಲ್ಲಿ 37 ನೇತ್ರ ಭಂಡಾರಗಳಿವೆ. ಆದರೆ 9 ಮಾತ್ರ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಾಗಿವೆ. ದಾವಣಗೆರೆಯಲ್ಲೂ ಒಂದು ನೇತ್ರ ಭಂಡಾರವಿದೆ. ನೀವು ಮೃತಪಟ್ಟ ನಂತರವೂ ನಿಮ್ಮ ಕಣ್ಣುಗಳು ಜೀವಂತವಾಗಿರಬೇಕಾದರೆ ನೇತ್ರದಾನ ಮಾಡಿ ಎಂದು ಕರೆ ನೀಡಿದರು.

ಶ್ರೀ ಅಕ್ಕಮಹಾದೇವಿ ಸಮಾಜದ ಅಧ್ಯಕ್ಷರಾದ ಕೆ.ಕೆ. ಸುಶೀಲಮ್ಮ, ಗೌರವ ಅಧ್ಯಕ್ಷರಾದ ನೀಲಗುಂದ ಜಯಮ್ಮ, ಶ್ರೀ ಅಕ್ಕಮಹಾದೇವಿ ನೇತ್ರದಾನ ಪ್ರೇರಣಾ ಸಮಿತಿ ಅಧ್ಯಕ್ಷ ವಿಜಯ ಬಸವರಾಜ್, ಕಾರ್ಯದರ್ಶಿ ಮಂಜುಳ ಕಾಯಿ, ಡಾ.ಮಂಜುನಾಥ ಪಾಟೀಲ್, ನೇತ್ರಾಧಿಕಾರಿ ಡಾ.ಎಸ್.ಕೆ ರಂಗನಾಥ್ ಉಪಸ್ಥಿತರಿದ್ದರು.  ಉಮಾ ಪ್ರಾರ್ಥಿಸಿದರು. ಸಮಾಜದ ಸದಸ್ಯರು ಹಾಜರಿದ್ದರು.

error: Content is protected !!