ಹೋಂ ಐಸೋಲೇಷನ್‌ ನಿಲ್ಲಿಸಿ

ದಾವಣಗೆರೆ, ಮೇ 21 – ಸೋಂಕಿತರನ್ನು ಕೋವಿಡ್ ಕಾಳಜಿ ಕೇಂದ್ರಗಳಲ್ಲಿ ಇರಿಸದೇ ಇರುವುದೇ ಸೋಂಕು ಹರಡಲು ಕಾರಣವಾಗುತ್ತಿದೆ ಎಂದು ಹೇಳಿರುವ ಆರೋಗ್ಯ ಸಚಿವ ಡಾ. ಸುಧಾಕರ್‌, ಜಿಲ್ಲೆಯಲ್ಲಿರುವ ಎಲ್ಲಾ ಸೋಂಕಿತರನ್ನು ಕಾಳಜಿ ಕೇಂದ್ರಗಳಿಗೆ ರವಾನಿಸುವಂತೆ ಸೂಚಿಸಿದ್ದಾರೆ.

ಜಿಲ್ಲೆಯಲ್ಲಿನ ಕೋವಿಡ್ ಸ್ಥಿತಿಗತಿ ಕುರಿತಂತೆ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರತಿಯೊಂದು ಪ್ರಾಥಮಿಕ ಆರೋಗ್ಯ ಕೇಂದ್ರದ ಹಂತದಲ್ಲಿ ವಸತಿ ಶಾಲೆಯೊಂದನ್ನು ಕೋವಿಡ್ ಕಾಳಜಿ ಕೇಂದ್ರವಾಗಿ ಪರಿವರ್ತಿಸಬೇಕು. ಸೋಂಕಿತರನ್ನು ಇಲ್ಲಿಗೆ ದಾಖಲಿಸಿ, ಐದು ಗಂಟೆ ಒಳಗೆ ವೈದ್ಯಕೀಯ ಕಿಟ್ ಕೊಡಬೇಕು ಎಂದು ತಿಳಿಸಿದರು.

ಮನೆಯಲ್ಲಿ ಪ್ರತ್ಯೇಕವಾಗಿರುವವರ ಆಕ್ಸಿಜನ್ ಸ್ಯಾಚುರೇಷನ್ ದಾಖಲೆ ಸಮರ್ಪಕವಾಗಿ ಆಗುತ್ತಿಲ್ಲ. ಇದು ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತಿದೆ ಎಂದ ಅವರು, ಎಲ್ಲಾ ರೋಗಿಗಳನ್ನು ತ್ವರಿತವಾಗಿ ಕೇಂದ್ರಗಳಿಗೆ ಕಳಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು.

ಈ ಬಗ್ಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್, ಕೋವಿಡ್ ಕಾಳಜಿ ಕೇಂದ್ರಗಳಲ್ಲಿ ದಾಖಲಿಸುವುದನ್ನು ಕಡ್ಡಾಯಗೊಳಿಸ ಬೇಕು. ಇಲ್ಲದಿದ್ದರೆ ಸೋಂಕು ತಡೆಯಲು ಸಾಧ್ಯವಾಗುವುದಿಲ್ಲ. ಇದಕ್ಕೆ ಅಗತ್ಯವಾದರೆ ಪೊಲೀಸರ ನೆರವು ಪಡೆಯಬೇಕು ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪರಿಷತ್ ಸದಸ್ಯ ಭೋಜೇಗೌಡ, ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಕಳೆದ ಬಾರಿಯಂತೆ ಗುರುತಿಸದೇ ಇರುವುದೇ ಸಮಸ್ಯೆ ಉಲ್ಬಣಿಸಲು ಕಾರಣವಾಗಿದೆ ಎಂದರು.

ಸಭೆಗೆ ಮಾಹಿತಿ ನೀಡಿದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್, ಜಿಲ್ಲೆಯಲ್ಲಿ 3 ಸಾವಿರಕ್ಕೂ ಹೆಚ್ಚು ಜನರು ಹೋಂ ಐಸೊಲೇಷನ್‌ನಲ್ಲಿದ್ದಾರೆ. ದಾವಣಗೆರೆ ತಾಲ್ಲೂಕು ಒಂದರಲ್ಲೇ 2 ಸಾವಿರದಷ್ಟು ಜನ ಹೋಂ ಐಸೊಲೇಷನ್‌ನಲ್ಲಿದ್ದಾರೆ. ಜಿಲ್ಲೆಯಲ್ಲಿ 12 ಕೊರೊನಾ ಕಾಳಜಿ ಕೇಂದ್ರಗಳಿದ್ದು, ಇಲ್ಲಿ 760 ಜನ ಇದ್ದಾರೆ ಎಂದರು.

ಹರಿಹರ ಶಾಸಕ ಎಸ್. ರಾಮಪ್ಪ ಮಾತನಾಡಿ, ಹರಿಹರ ತಾಲ್ಲೂಕು ಆಸ್ಪತ್ರೆಯಲ್ಲಿ 50 ಹೆಚ್ಚುವರಿ ಆಕ್ಸಿಜನ್ ಬೆಡ್ ಹಾಗೂ ಮಲೇಬೆನ್ನೂರು ಆರೋಗ್ಯ ಕೇಂದ್ರದಲ್ಲಿ 25 ಹೆಚ್ಚುವರಿ ಆಕ್ಸಿಜನ್‌ ಬೆಡ್‌ಗಳನ್ನು ಕಲ್ಪಿಸಬೇಕು. ತಾಲ್ಲೂಕು ಆಸ್ಪತ್ರೆಗೆ ಫಿಸಿಷಿಯನ್ ವೈದ್ಯರನ್ನು ನೇಮಿಸಿ ವೆಂಟಿಲೇಟರ್ ಸೇವೆ ಆರಂಭಿಸಬೇಕು ಎಂದು ಒತ್ತಾಯಿಸಿದರು.

ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮಾತನಾಡಿ, ಚನ್ನಗಿರಿ ತಾಲ್ಲೂಕು ಆಸ್ಪತ್ರೆಯಲ್ಲಿ ನಾನು ಸ್ವಂತ ಖರ್ಚಿನಿಂದ 30 ಬೆಡ್ ಕಲ್ಪಿಸಿದ್ದೇನೆ. ಒಟ್ಟು 80 ಬೆಡ್‌ಗಳಿಗೆ ಹೆಚ್ಚಿನ ಸಿಬ್ಬಂದಿ ಬೇಕು. ವಂಟಿಲೇಟರ್‌ ಸೇವೆಯನ್ನು ಆರಂಭಿಸಬೇಕು ಎಂದು ಹೇಳಿದರು.

ಜಗಳೂರು ತಾಲ್ಲೂಕಿನಲ್ಲಿ ಐದು ವೆಂಟಿಲೇಟರ್‌ಗಳಿದ್ದು, ಬಿಡಿ ಭಾಗಗಳ ಕೊರತೆಯಿಂದಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದಾಗ ಅಸಮಾಧಾನಗೊಂಡ ಸಚಿವ ಸುಧಾಕರ್, ಎಂಟು ತಿಂಗಳ ಹಿಂದೆ ವೆಂಟಿಲೇಟರ್‌ ಕಳಿಸಲಾಗಿದೆ. ಇನ್ನೂ ಸಮಸ್ಯೆ ಬಗೆಹರಿಸಿಕೊಂಡಿಲ್ಲ. ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಸಹ ಗಮನ ಹರಿಸಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಬಿ.ಪಿ.ಎಲ್. ಕಾರ್ಡ್ ಹೊಂದಿರುವ ಬಡವರು ಸರ್ಕಾರಿ ಆಸ್ಪತ್ರೆಯಿಂದ ರೆಫರೆನ್ಸ್ ತಂದರೆ ಮಾತ್ರ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆ ಉಚಿತವಾಗಿದೆ. ರೆಫರೆನ್ಸ್ ಇಲ್ಲದೇ ಹೋದರೆ ಖಾಸಗಿ ಆಸ್ಪತ್ರೆಯಲ್ಲಿ ಮಾಡಲಾದ ವೆಚ್ಚವನ್ನು ಭರಿಸಬೇಕಿದೆ. ಇದರ ಬದಲು, ಖಾಸಗಿ ಆಸ್ಪತ್ರೆಗೆ ದಾಖಲಾದ ನಂತರವೂ ರೆಫರೆನ್ಸ್ ತರಲು ಅನುಮತಿ ನೀಡಬೇಕು ಎಂದು ಹೇಳಿದರು.

ಸಭೆಯಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕರುಗಳಾದ ಮಾಡಾಳ್ ವಿರುಪಾಕ್ಷಪ್ಪ, ಎಸ್.ಎ. ರವೀಂದ್ರನಾಥ್, ಪ್ರೊ. ಲಿಂಗಣ್ಣ, ಪಾಲಿಕೆ ಮೇಯರ್‌ ಎಸ್.ಟಿ. ವೀರೇಶ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಎಸ್ಪಿ ಹನುಮಂತರಾಯ, ಜಿಲ್ಲಾ ಪಂಚಾಯ್ತಿ ಸಿಇಒ ಡಾ. ವಿಜಯ ಮಹಾಂತೇಶ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!