ಕೊರೊನಾ ಸಾವುಗಳಿಗಿದೆ ಮೂರು ಪಟ್ಟಿ!

ಜಿಲ್ಲಾಡಳಿತ ಪ್ರತಿದಿನ ಪ್ರಕಟಿಸುತ್ತಿರುವುದು ಒಂದೇ ಪಟ್ಟಿ

ದಾವಣಗೆರೆ, ಮೇ 21 – ನಮ್ಮ ಸುತ್ತ ಮುತ್ತ ಸಾವುಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಜಿಲ್ಲಾಡಳಿತ ಪ್ರಕಟಿಸುವ  ಪಟ್ಟಿಯಲ್ಲಿ ಕೊರೊನಾ ಸಾವಿನ ಸಂಖ್ಯೆ ಒಂದೋ – ಎರಡೋ ಇರುತ್ತದೆ. ಏಕೆ ಹೀಗೆ? ಎಂಬ ಪ್ರಶ್ನೆ ಸಾರ್ವಜನಿಕರಲ್ಲಿರುವುದು ಸಹಜ. ಆದರೆ, ಇದೇ ಪ್ರಶ್ನೆ ಶಾಸಕರಿಗೂ ಕಾಡುತ್ತಿದೆ. ಈ ಬಗ್ಗೆ ಅವರು ಜಿಲ್ಲಾಡಳಿತ ಭವನದಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಸ್ಪಷ್ಟನೆ ಕೇಳಿದ್ದಾರೆ.

ಇದಕ್ಕೆ ಉತ್ತರಿಸಿರುವ ಅಧಿಕಾರಿಗಳು, ಕೊರೊನಾ ಸಾವುಗಳನ್ನು ಮೂರು ಪಟ್ಟಿಯಲ್ಲಿ ವಿಂಗಡಿಸಲಾಗುತ್ತಿದೆ. ಇದರಲ್ಲಿ ಒಂದು ಪಟ್ಟಿಯನ್ನು ಬುಲೆಟಿನ್‌ನಲ್ಲಿ ಪ್ರತಿದಿನ ಪ್ರಕಟಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಸಭೆಯಲ್ಲಿ ಮಾತನಾಡಿದ ಹರಿಹರ ಶಾಸಕ ಎಸ್. ರಾಮಪ್ಪ ಹಾಗೂ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಸಾವುಗಳ ಸಂಖ್ಯೆ ಕಡಿಮೆ ತೋರಿಸಲಾಗುತ್ತಿದೆ ಎಂದು ಹೇಳಿದರು.

ನಿನ್ನೆಯೇ ಹರಿಹರದ ಆಸ್ಪತ್ರೆಯಲ್ಲಿ ಐದು ಸಾವುಗಳು ಸಂಭವಿಸಿವೆ. ಹರಿಹರ ಆಸ್ಪತ್ರೆಯಲ್ಲಿ 56 ಸಾವುಗಳು ಸಂಭವಿಸಿವೆ. ಆದರೆ, ಈ ಸಾವುಗಳು ಜಿಲ್ಲಾಡಳಿತ ಪ್ರಕಟಿಸುವ ವರದಿಯಲ್ಲಿ ಕಂಡುಬರುತ್ತಿಲ್ಲ ಎಂದರು.

ಸಾವುಗಳ ಕುರಿತು ವಾಸ್ತವ ಹೇಳಿದರೆ ಸರ್ಕಾರದಿಂದ ನೆರವು ಪಡೆಯಲು ಸಾಧ್ಯ ಎಂದು ಹೇಳಿದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಸ್ಟಿರಾಯ್ಡ್ ಔಷಧಗಳಿಂದ ಕಿಡ್ನಿ ಹಾಗೂ ಹೃದಯಾಘಾತ ಆದರೆ ಅದನ್ನೂ ಕೊರೊನಾ ಸಾವು ಎಂದೇ ಪರಿಗಣಿಸಬೇಕು ಎಂದು ತಿಳಿಸಿದರು.

ಇದಕ್ಕೆ ಉತ್ತರಿಸಿದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಿ.ಡಿ. ರಾಘವನ್, ಕೊರೊನಾ ಸಾವುಗಳೆಲ್ಲವನ್ನೂ ದಾಖಲಿಸಲಾಗುತ್ತಿದೆ. ಆದರೆ, ಕೊರೊನಾ ಸೋಂಕಿನಿಂದ ಬರುವ ಸಾವು, ಕೊರೊನಾ ರೀತಿಯ ಲಕ್ಷಣಗಳಿಂದ ಬರುವ ಸಾವು ಹಾಗೂ ಕೊರೊನಾ ಇದ್ದರೂ ಬೇರೆ ಕಾರಣದಿಂದ ಬರುವ ಸಾವುಗಳ ಬೇರೆ ಬೇರೆ ಮೂರು ಪಟ್ಟಿ ಇದೆ ಎಂದು ತಿಳಿಸಿದರು.

ಈ ಮೂರು ಪಟ್ಟಿಗಳ ಮಾಹಿತಿ ಸೇರಿಸಿ ಶಾಸಕರಿಗೆ ಪ್ರತಿದಿನ ಕಳಿಸಿ. ಸಾವಿನ ವರದಿ ಮುಚ್ಚಿಟ್ಟು ಸಾಧಿಸುವುದೇನಿದೆ? ಎಂದು ಆರೋಗ್ಯ ಸಚಿವ ಡಾ. ಸುಧಾಕರ್‌ ಹೇಳಿದರು.

error: Content is protected !!