ಕೇಂದ್ರದ ಮೋದಿ ಸರ್ಕಾರ ಕಿವಿ, ಕಣ್ಣು ಎರಡೂ ಇಲ್ಲದಂತೆ ವರ್ತಿಸುತ್ತಿದೆ : ವೈ. ರಾಮಪ್ಪ

ಕೇಂದ್ರದ ಮೋದಿ ಸರ್ಕಾರ ಕಿವಿ, ಕಣ್ಣು ಎರಡೂ ಇಲ್ಲದಂತೆ ವರ್ತಿಸುತ್ತಿದೆ : ವೈ. ರಾಮಪ್ಪ - Janathavaniದಾವಣಗೆರೆ, ಜು.29- ಕೊರೊನಾದಂತಹ ಮಹಾಮಾರಿ ಲಕ್ಷೋಪಲಕ್ಷ ಜನರನ್ನು ಬಲಿ ತೆಗೆದುಕೊಂಡು ದೇಶವೇ ತತ್ತರಿಸಿ ಹೋಗಿರುವ ಸಂದರ್ಭದಲ್ಲಿ ಪೆಟ್ರೋಲ್‌, ಡೀಸೆಲ್‌, ಗ್ಯಾಸ್‌ ಸಿಲಿಂಡರ್‌ಗಳ ಬೆಲೆಗಳನ್ನು ಗಗನಕ್ಕೇರಿಸಿ, ಸಾಮಾನ್ಯರ ಬದುಕು ದುಸ್ಥರವಾಗುವಂತೆ ಕೇಂದ್ರ ಸರ್ಕಾರ ಮಾಡಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಡಾ.ವೈ.ರಾಮಪ್ಪ ಕಿಡಿ ಕಾರಿದ್ದಾರೆ. 

ಮಾಯಕೊಂಡ ವಿಧಾನಸಭಾ ಕ್ಷೇತ್ರದ ಬಸವಾಪಟ್ಟಣ ಬ್ಲಾಕ್ ಕಾಂಗ್ರೆಸ್ ವತಿಯಿಂದ ತ್ಯಾವಣಿಗಿಯಲ್ಲಿ ಇಂದು ಏರ್ಪಾಡಾಗಿದ್ದ ಬೃಹತ್ ಸೈಕಲ್ ಜಾಥಾದ ಸಂದರ್ಭದಲ್ಲಿ ಬಹಿರಂಗ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

1973 ರಲ್ಲಿ ಕೇವಲ 7 ಪೈಸೆ ಪೆಟ್ರೋಲ್‌ ಬೆಲೆ ಜಾಸ್ತಿಯಾದಾಗ ಅಂದಿನ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷದ ನಾಯಕ ಅಟಲ್‌ ಬಿಹಾರಿ ವಾಜಪೇಯಿ ಎತ್ತಿನ ಗಾಡಿಯಲ್ಲಿ ಹೋಗಿ ಲೋಕ ಸಭೆಗೆ ಮುತ್ತಿಗೆ ಹಾಕಿ, ಪ್ರತಿಭಟನೆ ನಡೆಸಿದ್ದರು. ಆದರೆ, ಇಂದು ಪೆಟ್ರೋಲ್‌, ಡೀಸೆಲ್‌ ಬೆಲೆ 100 ರೂ.ಗೂ ಅಧಿಕವಾಗಿದ್ದು ಸಾರ್ವಜನಿಕರ, ರೈತರ ಬದುಕನ್ನು ಅಸ್ಥಿರಗೊಳಿಸಿದೆ ಎಂದು ಅವರು ಹೇಳಿದರು.

ವರ್ಷಾನುಗಟ್ಟಲೇ ಕೇಂದ್ರ ಸರ್ಕಾರದ ವಿರುದ್ಧ ಕೃಷಿ ಕಾಯಿದೆ ವಿರೋಧಿಸಿ, ಪಂಜಾಬ್‌ ಗಡಿಭಾಗದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದರೂ ಅವರ ಬೇಡಿಕೆಗೆ ಸ್ಪಂದಿಸುತ್ತಿಲ್ಲ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ದಿಕ್ಕರಿಸುವುದರ ಮೂಲಕ ನಿರಂಕುಶ ಅಧಿಕಾರದ ಆಡಳಿತವನ್ನು ನರೇಂದ್ರ ಮೋದಿ ಸರ್ಕಾರ ನಡೆಸುತ್ತಿದೆ ಎಂದರು.

ಸರ್ಕಾರದ ವರ್ತನೆ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಿರಂತರವಾಗಿ ನಡೆಯುತ್ತಲೇ ಇವೆ. ಒಟ್ಟಿನಲ್ಲಿ ಕೇಂದ್ರ ಸರ್ಕಾರ ಕಿವಿ ಮತ್ತು ಕಣ್ಣು ಎರಡನ್ನೂ ನೋಡದ, ಕೇಳಿಸಲಾರದ ರೀತಿಯಲ್ಲಿ ವರ್ತಿಸುತ್ತಿದೆ ಎಂದು ರಾಮಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಪುಂಖಾನುಪುಂಖವಾಗಿ ಭಾಷಣ ಬಿಗಿಯುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಕುಟುಂಬ ರಾಜಕಾರಣದ ಬಗ್ಗೆ ಪದೇ ಪದೇ ಟೀಕಿಸುತ್ತಾರೆ. ಕರ್ನಾಟಕದ ಮುಖ್ಯಮಂತ್ರಿ ಆಯ್ಕೆಯಲ್ಲಿ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿರುವುದೇಕೆ ? ಗಾಜಿನ ಮನೆಯಲ್ಲಿ ಕುಳಿತು ಇತರರತ್ತ ಕಲ್ಲು ಎಸೆಯುವ ಬಿಜೆಪಿಯವರ ನಡೆ ಅಸಂಸದೀಯ ವಾಗಿದೆ ಎಂದು ರಾಮಪ್ಪ ಜರಿದರು.

ಭರಮಸಾಗರ ಸಮೀಪದ ಇಸಾಮುದ್ರದಲ್ಲಿ ಬಾಲಕಿಯ ಮೇಲೆ ಕಿಡಿಗೇಡಿಗಳು ಅತ್ಯಾಚಾರ ವೆಸಗಿ ಕೊಲೆ ಮಾಡಿರುವ ಆರೋಪಿಗಳ ವಿರುದ್ಧ ಕಿಣ ಕ್ರಮ ಜರುಗಿಸಬೇಕು. ಮೂಡಿಗೆರೆೆಯಲ್ಲಿ ದಲಿತ ಯುವಕನಿಗೆ ಮೂತ್ರ ಕುಡಿಸಿ ಇಡೀ ದಲಿತ ಸಮುದಾಯಕ್ಕೆ ಅವಮಾನಗೊಳಿಸಿದ ಅಧಿಕಾರಿಗೆ ಕಾಯಂ ಶಿಕ್ಷೆಗೊಳಪಡಿಸಬೇಕೆಂದು ಎಂದು ಅವರು ಒತ್ತಾಯಿಸಿದರು.

error: Content is protected !!