ಜಾಹೀರಾತಿಗೆ ಮಾರು ಹೋಗದೆ, ಐಎಸ್‌ಐ ಗುರುತಿನ ವಸ್ತುಗಳನ್ನು ಖರೀದಿಸಬೇಕು

ಹರಿಹರದ  ಗ್ರಾಹಕರ ಅದಾಲತ್ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಕರೆ

ಹರಿಹರ, ಏ.15- ಗ್ರಾಹಕರು ತಾವು ಖರೀದಿಸಿದ ವಸ್ತುಗಳಲ್ಲಿ ಗುಣಮಟ್ಟದ ಕೊರತೆ ಕಂಡುಬಂದಾಗ ಈ ಕುರಿತು ಗ್ರಾಹಕರ ಸೇವಾ ಕೇಂದ್ರಕ್ಕೆ ದೂರು ನೀಡಿ, ಪರಿಹಾರವನ್ನು ಪಡೆಯುವುದಕ್ಕೆ ಮುಂದಾಗಬೇಕು ಎಂದು ತಹಶೀಲ್ದಾರ ಕೆ.ಬಿ.  ರಾಮಚಂದ್ರಪ್ಪ ತಿಳಿಸಿದರು.

ನಗರದ ಗುರುಭವನದಲ್ಲಿ ಆಹಾರ ಇಲಾಖೆ ವತಿಯಿಂದ ನಡೆದ ಗ್ರಾಹಕರ ಅದಾಲತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಗ್ರಾಹಕರು ಯಾವುದೇ ವಸ್ತುಗಳನ್ನು ಕೊಂಡುಕೊಳ್ಳುವಾಗ ಐಎಸ್ಐ ಮಾರ್ಕ್ ಇರುವಂತಹ ಮತ್ತು ಸರ್ಕಾರದ ಪರವಾನಗಿ ಹೊಂದಿದ ವಸ್ತುಗಳನ್ನು ಕೊಂಡುಕೊಳ್ಳಲು ಮುಂದಾಗಬೇಕು. ಅದನ್ನು ಬಿಟ್ಟು ಜಾಹೀರಾತಿಗೆ ಮಾರು ಹೋಗಿ ಐಎಸ್ಐ ಮಾರ್ಕ್ ಇಲ್ಲದೇ ಇರುವಂತಹ ವಸ್ತುಗಳನ್ನು ಕೊಂಡರೆ ಅದರಿಂದ ಆಗುವ ಅನಾಹುತಗಳಿಂದ ಆರೋಗ್ಯ ಹದಗೆಡುವುದರ ಜೊತೆಗೆ ಮನಸ್ಸಿನ ನೆಮ್ಮದಿ ಕೂಡ ಹಾಳಾಗುತ್ತದೆ.

ವ್ಯಾಪಾರಿಗಳು ತಮಗೆ ಯಾವುದೇ ರೀತಿಯಲ್ಲಿ ಮೋಸವನ್ನು ಮಾಡಿದಾಗ, ಅದರ ದಾಖಲೆಗಳನ್ನು ಇಟ್ಟುಕೊಂಡು, ಗ್ರಾಹಕರ ಸೇವಾ ಕೇಂದ್ರದಲ್ಲಿ ದೂರನ್ನು ದಾಖಲಿಸಿ ಅದರಿಂದ ಪರಿಹಾರವನ್ನು ಪಡೆಯಬಹುದಾಗಿದ್ದು, ಇದನ್ನು ಸದುಪಯೋಗ ಪಡಿಸಿಕೊಳ್ಳಲು ತಿಳಿಸಿದರು. 

ಜಿಲ್ಲಾ ಆಹಾರ ಉಪನಿರ್ದೇಶಕ ಮಂಟೆಸ್ವಾಮಿ ಮಾತನಾಡಿ, ವ್ಯಾಪಾರಸ್ಥರಿಂದ ಮೋಸ ಹೋದ ಗ್ರಾಹಕರು ಜಿಲ್ಲಾ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರನ್ನು ದಾಖಲಿಸಿದಾಗ, ಗ್ರಾಹಕರು ಬಹು ಬೇಗನೆ ಪರಿಹಾರ ಪಡೆಯಬಹುದು. ಒಂದು ಕೋಟಿಯಿಂದ 10  ಕೋಟಿ ರೂಪಾಯಿವರೆಗೆ ರಾಜ್ಯದಲ್ಲಿ ಪರಿಹಾರವನ್ನು ಪಡೆಯಬಹುದು. ಅದಕ್ಕಿಂತ ಹೆಚ್ಚು ಹಣ ಮೋಸವಾದರೆ ರಾಷ್ಟ್ರೀಯ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರನ್ನು ನೀಡಿ ಪರಿಹಾರವನ್ನು ಪಡೆಯಬಹುದು. 

ಗ್ರಾಹಕರ ಮೇಲೆ ದಿನನಿತ್ಯ ವಂಚನೆ ಜರುಗುತ್ತಿದ್ದರೂ ಜಿಲ್ಲೆಯಲ್ಲಿ ತಿಂಗಳಲ್ಲಿ ಕನಿಷ್ಠ 10 ಪ್ರಕರಣಗಳು ಮಾತ್ರ ದಾಖಲಾಗುತ್ತಿವೆ. ರಾಜ್ಯದಲ್ಲಿ ಅತಿ ಹೆಚ್ಚು ವಂಚನೆಗೊಳಗಾಗುತ್ತಿರುವುದು ರೈತರು ಖರೀದಿಸಿದ ವಸ್ತುಗಳಲ್ಲಿ ಮತ್ತು ಪೆಟ್ರೋಲ್, ಗ್ಯಾಸ್, ಹಾಗೂ ದಿನ ನಿತ್ಯದ ವಸ್ತುಗಳನ್ನು ಖರೀದಿಸುವಾಗ. ಜಾಹೀರಾತಿಗೆ ಮಾರು ಹೋಗಿ ಗ್ರಾಹಕರು ಮೋಸ ಹೋಗುತ್ತಿರುವುದು. 2019 ರಲ್ಲಿ ಗ್ರಾಹಕರ ಸಂರಕ್ಷಣಾ ಕಾಯ್ದೆಯನ್ನು ಸರ್ಕಾರ ಜಾರಿಗೆ ತಂದಿದ್ದು, ಗ್ರಾಹಕರು ಇದರ ಸದುಪಯೋಗ ಪಡೆದು ನ್ಯಾಯ ಪಡೆಯುವಂತೆ ಕಿವಿ ಮಾತು ಹೇಳಿದರು.

ಇದಕ್ಕೆ ಕಂಪನಿಯಯವರು ನೀಡುವ ಜಾಹೀರಾತು ಕಾರಣ. ಅದಕ್ಕಾಗಿ ಅದರ ಬಗ್ಗೆ ಅಷ್ಟೊಂದು ಆಸೆಯನ್ನು ಪಡಬಾರದು. ಗುಣಮಟ್ಟದ ವಸ್ತುಗಳನ್ನು ಖರೀದಿಸಲು ಮುಂದಾದರೆ ಯಾವುದೇ ರೀತಿಯ ಸಮಸ್ಯೆಗಳು ಬರುವುದಿಲ್ಲ. ಒಂದು ವೇಳೆ ಸಮಸ್ಯೆ ಬಂದರೆ ಗ್ರಾಹಕರಿಗೆ ತೊಂದರೆ ಆಗಬಾರದು ಎಂದು 2019 ರಿಂದ ಗ್ರಾಹಕರ ಸಂರಕ್ಷಣಾ ಕಾಯ್ದೆಯನ್ನು ಸರ್ಕಾರ ಜಾರಿಗೆ ತಂದಿದೆ. ಅದನ್ನು ಸದುಪಯೋಗ ಪಡಿಸಿಕೊಂಡು ಮೋಸವಾದಾಗ ಪರಿಹಾರವನ್ನು ಪಡೆಯಬಹುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಆಹಾರ ಇಲಾಖೆಯ ಎಇಇ ರಮೇಶ್, ಇಲಾಖೆಯ ಸಹಾಯಕ ನಿರ್ದೇಶಕ  ಬಿ.ಟಿ. ಪ್ರಕಾಶ್, ಆಹಾರ ಸಂರಕ್ಷಣಾ ಅಧಿಕಾರಿ ಕೊಟ್ರೇಶ್, ಮೈಸೂರು ಕಿರ್ಲೋಸ್ಕರ್ ಕಾರ್ಮಿಕರ ಸೊಸೈಟಿ ಅಧ್ಯಕ್ಷ ಬಿರಾದಾರ, ತೂಕ ಮತ್ತು ಕಾನೂನು ಮಾಪನ ಇಲಾಖೆ ಅಧಿಕಾರಿ ಪರವೀಸ್ ಹಾಗೂ ತಾಲ್ಲೂಕಿನ ನ್ಯಾಯಬೆಲೆ ಅಂಗಡಿ ಮಾಲೀಕರು ಹಾಜರಿದ್ದರು. 

error: Content is protected !!