ಚನ್ನಬಸವಣ್ಣ ಕಿರಿಯರಾಗಿದ್ದರೂ ಅನುಭಾವದಲ್ಲಿ ಹಿರಿಯರು

ಚನ್ನಬಸವಣ್ಣ ಕಿರಿಯರಾಗಿದ್ದರೂ ಅನುಭಾವದಲ್ಲಿ ಹಿರಿಯರು

ಸಾಣೇಹಳ್ಳಿಯಲ್ಲಿನ ಚನ್ನಬಸವಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ

ಸಾಣೇಹಳ್ಳಿ, ನ.21- ಬಸವಾದಿ ಶಿವಶರಣರಲ್ಲಿ ಅತ್ಯಂತ  ಕಿರಿಯರಾಗಿದ್ದ  ಚನ್ನಬಸವಣ್ಣ,  ವಯಸ್ಸಿನಲ್ಲಿ  ಕಿರಿಯರಾಗಿ ದ್ದರೂ ಅನುಭಾವದಲ್ಲಿ ಹಿರಿಯ ಸ್ಥಾನ ಪಡೆದಿದ್ದರು. ಅವಿರಳ ಜ್ಞಾನಿ, ಚಿನ್ಮಯಜ್ಞಾನಿಯಾಗಿದ್ದರು ಎಂದು ಸಾಣೇಹಳ್ಳಿಯ ಶ್ರೀ   ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಿಸಿದರು.

ಇಲ್ಲಿನ ಎಸ್. ಎಸ್. ರಂಗಮಂದಿರದಲ್ಲಿ ನಡೆದ ಚನ್ನಬಸವಣ್ಣನವರ ಜಯಂತಿ ಹಾಗೂ ರಾಷ್ಟ್ರೀಯ ನಾಟಕೋತ್ಸವದ ಸಿಂಹಾವಲೋಕನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ಲಿಂಗಾಯತ ಧರ್ಮದ ವಿಚಾರ ಬಂದಾಗ ಶರಣರೆಲ್ಲರೂ ಚನ್ನಬಸವಣ್ಣನವರ ಸಲಹೆ ಕೇಳುತ್ತಾ ಇದ್ದರು. ಬಸವಣ್ಣ, ಅಕ್ಕನಾಗಲಾಂಬಿಕೆ, ಅನುಭವ ಮಂಟಪದ ಸಂಪರ್ಕದಿಂದ ಸಂಸ್ಕಾರ ಪಡೆದು ಉನ್ನತ ಸ್ಥಾನ ಪಡೆದುಕೊಂಡಿದ್ದರು ಎಂದು ಅವರು ತಿಳಿಸಿದರು. 

ಯಾರಾದರೂ ಒಳ್ಳೆಯ ಕಾರ್ಯ ಮಾಡಿದಾಗ ಮೆಚ್ಚುವವರು ಇದ್ದ ಹಾಗೆ ಚುಚ್ಚುವರೂ ಇರುತ್ತಾರೆ. ಮೆಚ್ಚುವವರೂ ಮುಖ್ಯ, ಚುಚ್ಚುವವರೂ ಮುಖ್ಯ. ಹಂದಿಯಾಂಗ ನಿಂದಕರಿರಬೇಕು. ನಿಂದಕರು ನಮ್ಮ ದೋಷಗಳನ್ನು ಕಳೆದು ಮತ್ತಷ್ಟು ನಮ್ಮನ್ನು ಪಕ್ವಗೊಳಿಸುವರು. ಒಳ್ಳೆಯ ಕಾರ್ಯಗಳನ್ನು ಮಾಧ್ಯಮಗಳಲ್ಲಿ ಪ್ರಚಾರ ಮಾಡುವುದು ತುಂಬಾ ವಿರಳ. ಪತ್ರಿಕೆಯವರು ಕಾರ್ಯಕ್ರಮದಲ್ಲಿ ಏನು ನಡೆಯುತ್ತೋ ಅದನ್ನು ಮಾತ್ರ ಪ್ರಕಟಪಡಿಸಿದಾಗ ಪತ್ರಿಕಾ ಧರ್ಮ ಉಳಿಲಿಕ್ಕೆ ಸಾಧ್ಯ. ಮಾಧ್ಯಮದವರು ಕೊಡುವ ಸಂಗತಿಯಿಂದ ಮನಸ್ಸು ಅರಳುವ ವಿಚಾರಗಳನ್ನು ಪ್ರಚಾರ ಮಾಡಿದಾಗ ಮಾತ್ರ ಲೋಕಕಲ್ಯಾಣ ಸಾಧ್ಯ ಎಂದರು. 

ಹಿಂದಿನ ವರ್ಷಗಳಿಗಿಂತ ಈ ವರ್ಷ ತುಂಬಾ ಪರಿಣಾಮಕಾರಿಯಾಗಿ ನಾಟಕೋತ್ಸವ ನಡೆಯಿತು. ಆದರೆ, ನಾಟಕಗಳ ಆಯ್ಕೆಯಲ್ಲಿ ಸ್ವಲ್ಪ ಎಡವಿದ್ದೇವೆ ಅಂತ ಅನಿಸಿತು. ಮುಂದಿನ ದಿನಮಾನ ಗಳಲ್ಲಿ ಸೂಕ್ತ ನಾಟಕಗಳನ್ನು ಆಯ್ಕೆ ಮಾಡು ವಂಥ ಕೆಲಸವನ್ನು ನಮ್ಮ ಕಾರ್ಯಕರ್ತರು ಮಾಡಬೇಕು ಎಂದು ಸೂಚನೆ ನೀಡಿದರು. 

ನಿವೃತ್ತ ಪ್ರಾಚಾರ್ಯ ಐ. ಜಿ. ಚಂದ್ರಶೇಖರಯ್ಯ ನವರು ಚನ್ನಬಸವಣ್ಣನವರ ಬಗ್ಗೆ ಮಾತನಾಡಿ,  ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳವರು ಶರಣರ ಜಯಂತಿಗಳನ್ನು ಆಚರಿಸುವುದರ ಮೂಲಕ ಹೊಸ ಪರಂಪರೆಯನ್ನು ಬಿತ್ತಿದರು. ಅರಿವು, ಆಚಾರ, ಅನುಭಾವ ಸಾಧಿಸಿದರೆ ಶರಣರಾಗುತ್ತೇವೆ. ಚನ್ನಬಸವಣ್ಣನವರು ಕಿರಿಯರಾಗಿದ್ದರೂ ಅನುಭಾವದಲ್ಲಿ ಹಿರಿಯರು. ಲಿಂಗಾಯತ ಧರ್ಮ ತತ್ವಗಳ ಬಗ್ಗೆ ಅಧಿಕೃತವಾಗಿ ಮಾತನಾಡುವ ಏಕೈಕ ವ್ಯಕ್ತಿ ಚನ್ನಬಸವಣ್ಣ ಆಗಿದ್ದರು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾಟೇಹಳ್ಳಿ ಶಿವಕುಮಾರ್‌,  ಶಶಿಧರ, ಶರತ್ ಪಾಟೀಲ್, ಬಿಜೆಪಿ ಮುಖಂಡ ರಘು ಚಂದನ್, ಕೋಗುಂಡೆ ಮಂಜುನಾಥ್, ಹೆಬ್ಬಳ್ಳಿ ಮಲ್ಲಿಕಾರ್ಜುನ್‌ ಮಾತನಾಡಿದರು. ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಬನಸೀಹಳ್ಳಿ ಅಜ್ಜಪ್ಪ ಅವರನ್ನು ಅಭಿನಂದಿಸಲಾಯಿತು.

ಜ್ಯೋತಿ ಕೆ, ನಾಗರಾಜ್ ಹೆಚ್. ಎಸ್, ತಬಲಸಾಥಿ ಶರಣಕುಮಾರ್ ವಚನ ಗೀತೆ ಹಾಡಿದರು. ಅಧ್ಯಾಪಕ ಮಲ್ಲಿಕಾರ್ಜುನ ಸ್ವಾಗತಿಸಿದರೆ, ಎನ್. ಸಿ. ದೀಪ ನಿರೂಪಿಸಿದರು.

error: Content is protected !!