ಮನೋಬಲವೂ ಮದ್ದೇ

ದೀಪ ಬೆಳಗಿಸುವುದು ಭಾರತೀಯ ಪರಂಪರೆ. ಬಸವ ಪರಂಪರೆಯಲ್ಲಿ `ಜ್ಯೋತಿಯ ಬಲ ದಿಂದ ತಮಂಧದ ಕೇಡು ನೋಡಯ್ಯಾ’ ಎನ್ನುವರು ಬಸವಣ್ಣನವರು. 

ದೇಶದ ಪ್ರಧಾನ ಮಂತ್ರಿಗಳ ಕರೆಯ ಮೇರೆಗೆ ರಾತ್ರಿ 9 ಗಂಟೆಗೆ ಮನೆಯ ವಿದ್ಯುತ್ ದೀಪಗಳನ್ನು ಆರಿಸಿ ಮನೆಯ ಹೊರಭಾಗದಲ್ಲಿ ದೀಪ ಬೆಳಗಿಸುವುದು ಬುದ್ಧಿಯ ಮೂಲಕ ಅಲ್ಲ; ಹೃದಯದ ಮೂಲಕ ಶ್ರದ್ಧೆಯಿಂದ ಮಾಡುವ ಕಾರ್ಯ. ನಮ್ಮಲ್ಲಿ ಕ್ರಿಯಾಶಕ್ತಿ ಮತ್ತು ಸಂಕಲ್ಪಶಕ್ತಿ ಎರಡೂ ಇವೆ. ಇವೆರಡರ ಸಂಗಮವಾದಾಗಲೇ ಅದ್ಭುತ ಕಾರ್ಯ ಸಾಧ್ಯ. 

ಈಗ ವಿಶ್ವದ ಜನತೆಯನ್ನು ಭಯಂಕರ ರಾಕ್ಷಸನಂತೆ ಕಾಡುತ್ತಿರುವುದು ಕೊರೊನಾ ಎನ್ನುವ ವೈರಸ್. ದೀಪ ಬೆಳಗಿಸಿದಾಕ್ಷಣ ಕೊರೊನಾ ಸತ್ತು ಸಮಾಧಿಯಾಗುತ್ತದೆ ಎಂದರೆ ಅದು ಅಜ್ಞಾನ, ಮೌಢ್ಯದ ಪ್ರತೀಕ. ದೀಪ ಬೆಳಗಿಸುವ ಮೂಲಕ ಮಾನಸಿಕವಾಗಿ ಕುಗ್ಗಿದವರಿಗೆ ಮನೋಬಲ ಮೂಡಿಸುವುದೇ ಮುಖ್ಯ ಉದ್ದೇಶ. ಒಂಬತ್ತು ನಿಮಿಷ ಮೌನವಾಗಿದ್ದು ದೀಪ ಬೆಳಗಿಸುವ ಮೂಲಕ ಭಾರತೀಯರೆಲ್ಲ ಒಂದೆಂಬ ಸಂಘಟನೆ ತೋರಿಸಿದಂತಾಗಿದೆ. ಈಗ ಪ್ರತಿಯೊಬ್ಬರೂ  ಏಪ್ರಿಲ್ 14 ರವರೆಗೆ ಮನೆಯಲ್ಲೇ ಇದ್ದು ವ್ಯಕ್ತಿ-ವ್ಯಕ್ತಿಗಳ ನಡುವೆ ಅಂತರ ಕಾಯ್ದುಕೊಂಡರೆ ಕೊರೊನಾ ವೈರಸ್ಸನ್ನು ಕರಗಿಸಬಹುದು. ಆದುದರಿಂದ ಸಾರ್ವಜನಿಕರು ಮನೆಯನ್ನೇ ತಮ್ಮ ಕಾರ್ಯಕ್ಷೇತ್ರ ಮಾಡಿಕೊಳ್ಳಬೇಕು. 

ಯಾರೂ ಮತಾಂಧರಾಗಿ ಮಠ, ಮಂದಿರ, ಚರ್ಚ್, ಮಸೀದಿ ಮುಂತಾದ ಧಾರ್ಮಿಕ ತಾಣಗಳಲ್ಲಿ ಪ್ರಾರ್ಥನೆ, ಪ್ರವಚನ, ಜಾತ್ರೆ ಇತ್ಯಾದಿ ಮಾಡಬಾರದು. ಆಯಾ ಧರ್ಮದ ಗುರುಗಳು ಸಹ ಮುಗ್ಧ, ಮೂಢ, ಮತಾಂಧ ಭಕ್ತರಿಗೆ ಅರಿವು ನೀಡಿ ಮನೆಯಲ್ಲೇ ಪ್ರಾರ್ಥನೆ ಮಾಡಲು ಕಟ್ಟುನಿಟ್ಟಿನ ಎಚ್ಚರಿಕೆ ನೀಡಬೇಕು. ಆದರೆ, ಕೆಲವು ಧರ್ಮದ ಗುರುಗಳೇ ಭಕ್ತ ಸಮೂಹವನ್ನು ಸೇರಿಸಿಕೊಂಡು ಪ್ರಾರ್ಥನೆ ಮಾಡಲು ಮುಂದಾದರೆ ಅವರೆಂತಹ ಧರ್ಮದ ಗುರುಗಳು? ಅವರೂ ಸಹ ಮತಾಂಧರೇ. ಅಂತವರ ಮೇಲೆ ಸರ್ಕಾರ ಉಗ್ರ ಕ್ರಮ ಜರುಗಿಸಿ, ಸೆರೆಮನೆಗೆ ತಳ್ಳಬೇಕು. 

ಭಾರತ ಒಂದು ಹಡಗು ಇದ್ದಂತೆ. ಇದರಲ್ಲಿ ಹಿಂದೂ, ಸಿಖ್ಖ್, ಕ್ರಿಶ್ಚಿಯನ್, ಲಿಂಗಾಯತ, ಮುಸಲ್ಮಾನ ಹೀಗೆ ಎಲ್ಲಾ ವರ್ಗದ ಜನರೂ ಕುಳಿತಿದ್ದೇವೆ. ಇವರಲ್ಲಿ ಯಾರೇ ಹಡಗಿಗೆ ತೂತು ಕೊರೆಯುವ ಕಾರ್ಯ ಮಾಡಿದರೂ ಕುಳಿತವರೆಲ್ಲ ಸಮುದ್ರದ ಪಾಲಾಗಬೇಕಾಗುತ್ತದೆ. ಹಾಗಾಗಿ ಅಂಥವನನ್ನು ಹಿಡಿದು ಕೈಕಾಲು ಕಟ್ಟಿ ಮೊದಲು ಸಮುದ್ರಕ್ಕೆ ಎಸೆಯಬೇಕು. 

ಲಿಂಗಾಯತ ಧರ್ಮದ ಗಣಾಚಾರ ಹೇಳುವುದು ಇದನ್ನೇ. ಆದುದರಿಂದ ಜಾತಿ, ಧರ್ಮ, ಭಾಷೆ, ಪಕ್ಷ, ಪಂಗಡ ಎನ್ನದೇ ಪ್ರತಿಯೊಬ್ಬರೂ ಮನೆಯಲ್ಲೇ ಇದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕೊರೊನಾ ವಿರುದ್ಧ ಸಮರ ಸಾರಿ ನಾವೂ ಉಳಿಯಬೇಕು, ನಮ್ಮವರನ್ನೂ ಉಳಿಸಬೇಕು. ಕೊರೊನಾ ತಾನಾಗಿ ನಮ್ಮ ಬಳಿ ಬರುವುದಿಲ್ಲ. ಆದರೆ, ನಾವೇ ನಮ್ಮ ಬೇಜವಾಬ್ದಾರಿಯಿಂದ ಅದರ ಹತ್ತಿರ ಹೋದರೆ ಅದು ತನ್ನ ಕಬಂಧ ಬಾಹು ಚಾಚಿ ನಮ್ಮನ್ನು ಹಿಡಿದು ಹಿಪ್ಪೆ ಮಾಡಿ ಬಿಸಾಕುವುದು. ಸ್ವಯಂ ದಿಗ್ಬಂಧನ ಹಾಕಿಕೊಂಡರೆ ನಾವೂ ಕ್ಷೇಮ, ನಮ್ಮ ಜನರೂ ಕ್ಷೇಮ, ನಮ್ಮ ನಾಡೂ ಕ್ಷೇಮ.


ಮನೋಬಲವೂ ಮದ್ದೇ - Janathavaniಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
ಶ್ರೀ ತರಳಬಾಳು ಜಗದ್ಗೂರು ಶಾಖಾಮಠ, ಸಾಣೇಹಳ್ಳಿ.
9448395594 [email protected]

error: Content is protected !!