ಆರೋಗ್ಯ ಯಾರ ಸ್ವತ್ತೂ ಅಲ್ಲ… ಅದು ನಮ್ಮ ಸ್ವತ್ತು…

ಿಂದ ಪ್ರತಿ ವರ್ಷ ಏಪ್ರಿಲ್ 7 ರಂದು `ವಿಶ್ವ ಆರೋಗ್ಯ ದಿನ’ವನ್ನಾಗಿ ಆಚರಿಸುವ ಪರಿಪಾಠವನ್ನು ಜಾರಿಗೆ ತಂದಿದೆ.  ಜಗತ್ತಿನ ನಾಗರಿಕರನ್ನು ಗಮನದಲ್ಲಿಟ್ಟು ಕೊಂಡು ಪ್ರತಿ ವರ್ಷ ಆರೋಗ್ಯಕ್ಕೆ ಸಂಬಂಧಿಸಿದ ಒಂದು  ನಿರ್ದಿಷ್ಟ  ಉದ್ದೇಶದ ಹಿನ್ನೆಲೆಯಲ್ಲಿ ಏಪ್ರಿಲ್ 7 ರ ಈ ದಿನವನ್ನು ವಿಶ್ವ ಆರೋಗ್ಯ ದಿನವನ್ನಾಗಿ ಆಚರಿಸಲಾ ಗುವುದು.  ಅದರಂತೆ 2021 ರ ಈ ವರ್ಷ ದಲ್ಲಿ  `ಸರ್ವರಿಗೂ ಉತ್ತಮವಾದ ಆರೋಗ್ಯ ಕರ ಜಗತ್ತನ್ನು ನಿರ್ಮಿಸುವ’ ಸದುದ್ಧೇಶವನ್ನು ವಿಶ್ವ  ಆರೋಗ್ಯ ಸಂಸ್ಥೆ ಹೊಂದಿದೆ.

ಆರೋಗ್ಯವೇ ಭಾಗ್ಯ, ಆರೋಗ್ಯವೇ ಸಂಪತ್ತು, ಆರೋಗ್ಯ ಹೊರತುಪಡಿಸಿದರೆ ಉಳಿದೆಲ್ಲವೂ ಮಿಥ್ಯ, ರಾಗಿ ಉಂಡವನು ನಿರೋಗಿ, ದಿನಕ್ಕೊಂದು ಸೇಬು ತಿನ್ನಿ ರೋಗದಿಂದ ದೂರವಿರಿ ಎಂದು ಹೇಳುವುದು ವಾಡಿಕೆ. ಆದರೂ ಬಹುತೇಕ ಮಂದಿ ಆರೋಗ್ಯ ಸಂಪಾದನೆಗಿಂತ ಹಣ ಸಂಪಾದನೆಯ ಕಡೆ ಹೆಚ್ಚು ಗಮನಹರಿಸುವುದು ಉಂಟು. ಆರೋಗ್ಯ ನಮ್ಮ ಕೈಲಿದೆ. ಅದನ್ನು ನಾವು ಅತ್ಯಂತ ಜಾಣತನದಿಂದ ಕಾಪಾಡಿಕೊಳ್ಳಬೇಕೆಂಬ ಸಾಮಾನ್ಯ ಅರಿವು ಪ್ರತಿಯೊಬ್ಬರಲ್ಲಿಯೂ ಇರಬೇಕು. ಆರೋಗ್ಯವನ್ನು ನಾವು ಕಾಪಾಡಿಕೊಂಡರೆ, ಅದೇ ಆರೋಗ್ಯ ನಮ್ಮನ್ನು ಕಾಪಾಡುತ್ತದೆ ಎಂಬ ಸತ್ಯವನ್ನು ಎಲ್ಲರೂ ಅರಿಯಬೇಕು.  ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ ಅಧಿಕ, ಈ ರೋಗವು ಹತ್ತು ಹಲವು ಕಾಯಿಲೆಗಳಿಗೆ ಆಹ್ವಾನ ನೀಡುತ್ತದೆ. ಇದರಿಂದಾಗಿ 40 ವರ್ಷಕ್ಕೆ ಮೇಲ್ಪಟ್ಟವರು ವರ್ಷಕ್ಕೆ 2-3 ಬಾರಿ ದೇಹದಲ್ಲಿ ಸಕ್ಕರೆ ಪ್ರಮಾಣ ಎಷ್ಟಿದೆ ಎಂಬುದನ್ನು ತಿಳಿಯಲು ಪರೀಕ್ಷೆ ಮಾಡಿಸಿಕೊಳ್ಳುವುದು ಆರೋಗ್ಯ ದೃಷ್ಟಿಯಿಂದ ಒಳಿತು, ಆಗಲಾದರೂ ಸ್ವಲ್ಪ ಮಟ್ಟಿಗೆ ರೋಗಗಳು ಬರದಂತೆ   ತಡೆಗಟ್ಟಬಹುದು.

ಅಧಿಕ ರಕ್ತದೊತ್ತಡ, ಪಾರ್ಶ್ವವಾಯು, ಕಡಿಮೆ ಉಸಿರಾಟದ ಸೋಂಕು, ಶ್ವಾಸಕೋಶದ ಕಾಯಿಲೆ, ಕ್ಯಾನ್ಸರ್, ಡಯಾಬಿಟೀಸ್, ಬುದ್ಧಿ ಮಾಂಧ್ಯತೆ, ಅತಿಸಾರ, ಕ್ಷಯ, ಸಿರೋಸಿಸ್, ಎಬೋಲಾ, ಇನ್ ಪ್ಲುಯೆಂಜಾ ಇವು ಅತ್ಯಂತ ಮಾರಕ ರೋಗಗಳು. ಕಾಲರಾ, ಮಲೇರಿಯಾ, ಹಕ್ಕಿ ಜ್ವರ, ಚಿಕನ್‌ಫಾಕ್ಸ್  ರೋಗಗಳು ಇನ್ನಿತರೆ ರೋಗಗಳಾಗಿವೆ. ಈ ಎಲ್ಲ ರೋಗಗಳ  ತೀಕ್ಷ್ಣತೆ ಮತ್ತು ಪರಿಹಾರ ಕುರಿತು ಜನತೆ  ಚಿಂತನೆ ನಡೆಸಿ ತನ್ಮೂಲಕ ಆರೋಗ್ಯ ಕಾಪಾಡಿಕೊಳ್ಳುವುದರ ಕಡೆ ಆದ್ಯ ಗಮನಹರಿಸಬೇಕು. 

ವಿಶ್ವದ ಅತಿ ದೊಡ್ಡ ಕಾಯಿಲೆ ಎಂದರೆ ಇಸ್ಕೆಮಿಕ್ ಹೃದ್ರೋಗ. ಇದು ವಿಶ್ವದ ಒಟ್ಟು ಸಾವುಗಳಲ್ಲಿ ಶೇ. 16 ರಷ್ಟಿದೆ. 2000 ದಿಂದೀಚೆಗೆ ಈ ಕಾಯಿಲೆಯಿಂದ ಅನೇಕ ಸಾವುಗಳಾಗಿವೆ. ಇದರಿಂದ  2019 ರ ಸುಮಾರಿಗೆ 2 ಮಿಲಿಯನ್ ಗಿಂತಲೂ ಹೆಚ್ಚು ಸಾವುಗಳು ಸಂಭವಿಸಿವೆ. ಇತ್ತೀಚಿನ ದಶಕಗಳಲ್ಲಿ ಸಾಂಕ್ರಾಮಿಕ ಕಾಯಿಲೆಗಳಲ್ಲಿ ಜಾಗತಿಕ ಮಟ್ಟದಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ. 1990 ರಲ್ಲಿ  1.1 ಶತಕೋಟಿಗಿಂತಲೂ ಹೆಚ್ಚಿದ್ದದ್ದು 2016 ರ ಸುಮಾರಿಗೆ 670, 000 ಕ್ಕಿಂತ ಅಂದರೆ ಸರಿ ಸುಮಾರು ಶೇ. 40 ರಷ್ಟು ಕಡಿಮೆಯಾಗಿರುವುದು ಅಂಕಿ ಸಂಖ್ಯೆಗಳಿಂದ ತಿಳಿದುಬಂದಿದೆ. 

2020 ರ ಮಾರ್ಚ್ ತಿಂಗಳಿನಿಂದ ಕೊರೊನಾ  ಎಂಬ  ಮಹಾಮಾರಿ ಸಾಂಕ್ರಾಮಿಕ ರೋಗವು ಇಡೀ ಜಗತ್ತನ್ನು ಬಾಧಿಸುತ್ತಿದೆ. ಈ ರೋಗಕ್ಕೆ ತುತ್ತಾಗದಿರುವ ದೇಶ ಅತಿ  ವಿರಳ. ಈ ರೋಗವು ಜನತೆಯ ಆರೋಗ್ಯ ಲಾಭಗಳನ್ನು ಕಡಿಮೆ ಮಾಡಿದೆ. ಬಹುತೇಕ ಜನರನ್ನು ಆಹಾರ ಅಭದ್ರತೆ ಮತ್ತು ಬಡತನಕ್ಕೆ ತಳ್ಳಿದೆ. ಲಿಂಗ, ಸಾಮಾಜಿಕ ಮತ್ತು ಆರೋಗ್ಯ ಅಸಮಾನತೆಗಳನ್ನು ಹೆಚ್ಚಿಸಿದೆ. ಎಲ್ಲಾ ರಾಷ್ಟ್ರಗಳು ಆರ್ಥಿಕವಾಗಿ ಜರ್ಜರಿತವಾಗಿವೆ. ಯಾರು ಅನೇಕ ಕಾಯಿಲೆಗಳಿಂದ ನರಳುತ್ತಿರುವರೋ ಅವರಿಗೆ ಸರಿಯಾದ ಆರೋಗ್ಯ ಸೇವೆಗಳು ಲಭಿಸುತ್ತಿಲ್ಲ. ಕೊರೊನಾದಿಂದಾಗಿ ವಿಶ್ವದ ಕೆಲ ಗುಂಪುಗಳ ಕನಿಷ್ಠ ದಿನದ ಆದಾಯದಲ್ಲಿ  ಇಳಿಕೆಯಾಗಿದೆ, ಉದ್ಯೋಗಗಳ ಕೊರತೆ ಮತ್ತು  ವಲಸೆ ಪ್ರಮಾಣ ಹೆಚ್ಚಾಗಿದೆ. ಲಿಂಗ ಅಸಮಾನತೆ, ಆರೋಗ್ಯಕರ ಪರಿಸರ, ಶುದ್ಧ ನೀರು, ಗಾಳಿ, ಆಹಾರ ಭದ್ರತೆ, ಶಿಕ್ಷಣ, ಕೌಟುಂಬಿಕ ಪರಿಸ್ಥಿತಿ, ಆರೋಗ್ಯ ಸೇವೆಗಳು ಇವೇ ಮೊದಲಾದವುಗಳಿಂದ ಸಮುದಾಯದ ಜನರು ವಂಚಿತರಾಗಿದ್ದಾರೆ. ಈ ಎಲ್ಲಾ ಅಂಶಗಳು ಪರೋಕ್ಷವಾಗಿ ವಿವಿಧ ಬಗೆಯ ರೋಗಗಳು ಮತ್ತು ಸಾವುಗಳಿಗೆ ದಾರಿ ಮಾಡಿಕೊಡುತ್ತಿವೆ.

ಕೊರೊನಾ ಮಹಾಮಾರಿಯಿಂದ ಯಾವ ದೇಶಗಳೂ ಮುಕ್ತಿಯನ್ನು ಹೊಂದಿಲ್ಲ. ಇದೀಗ ಎರಡನೆಯ ಅಲೆಯಲ್ಲಿ ರೂಪಾಂತರಿ ಕೊರೊನ ಪ್ರಾರಂಭವಾಗಿದೆ. ಇದರ ವೇಗ ಮೊದಲು ಇದ್ದಿದ್ದಕ್ಕಿಂತಲೂ ಅಧಿಕ. ಇದರ ನಿರ್ಮೂಲನೆಯಲ್ಲಿ ಸರ್ಕಾರದ ಪಾತ್ರ ಎಷ್ಟಿದೆಯೋ, ಅದಕ್ಕಿಂತಲೂ ಹೆಚ್ಚಾಗಿ ಸಾರ್ವಜನಿಕರ ಪಾತ್ರವಿದೆ. ಸರ್ಕಾರ ವಿಧಿಸುವ ಎಲ್ಲ ನಿಯಮಗಳನ್ನು ಸಾರ್ವಜನಿಕರು ಚಾಚೂ ತಪ್ಪದೆ ಪಾಲಿಸಬೇಕು. ಆಗ ಮಾತ್ರ ಇದರ ನಿರ್ಮೂಲನೆ ಸಾಧ್ಯ. 

ಸರ್ಕಾರ ಮತ್ತು ಜನಪ್ರತಿನಿಧಿಗಳು ಪ್ರತಿಯೊಬ್ಬ ನಾಗರಿಕನಿಗೆ ಯಾವಾಗ ಮತ್ತು ಎಲ್ಲಿ ಅವಶ್ಯಕತೆ ಕಂಡುಬರುವುದೋ ಅಲ್ಲಿ ಅವರಿಗೆ ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸಲು ಮುಂದಾಗಬೇಕು. ಯಾರ ಆರೋಗ್ಯ ಯಾವ ಸಮಯದಲ್ಲಿ ಏನಾಗುವುದೋ ಊಹಿಸಲು ಆಗದು. ಆದ್ದರಿಂದ ನಮ್ಮ ಎಚ್ಚರಿಕೆ ನಮ್ಮ ಕೈಯಲ್ಲಿ ಇರಬೇಕು. ಯಾವುದೇ ರೋಗವನ್ನು ಗುಣಪಡಿಸುವುದಕ್ಕಿಂತ, ಅದು ಬರದಂತೆ ಎಚ್ಚರಿಕೆ ವಹಿಸುವುದು ಉತ್ತಮ. ಮಾರುಕಟ್ಟೆಯಲ್ಲಿ ಹಣ ಕೊಟ್ಟು ಬೇಕಾದ ವಸ್ತುವನ್ನು ಕೊಂಡುಕೊಳ್ಳಬಹುದು. ಆದರೆ ಒಮ್ಮೆ  ಆರೋಗ್ಯ ಹದಗೆಟ್ಟರೆ ಎಷ್ಟು ಹಣ ಖರ್ಚು ಮಾಡಿದರೂ ಅದು ಮೊದಲಿನಂತೆ ಸಿಗದು.

ವಿಶ್ವ ಆರೋಗ್ಯ ದಿನದಂದು ಆರೋಗ್ಯ ಕುರಿತಂತೆ ಇರುವ ಅಸಮಾನತೆಗಳನ್ನು ಹೋಗಲಾಡಿಸಲು ವರ್ಷವಿಡೀ ಜಾಗತಿಕ ಅಭಿಯಾನದ ಅಂಗವಾಗಿ ಜನರನ್ನು ಒಗ್ಗೂಡಿಸಿ ಉತ್ತಮ ಹಾಗೂ ಆರೋಗ್ಯಕರ ಜಗತ್ತನ್ನು ನಿರ್ಮಿಸುವ ಭರವಸೆಯನ್ನು ವಿಶ್ವ ಆರೋಗ್ಯ ಸಂಸ್ಥೆ ನೀಡಿದೆ. 

ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ದಿನವನ್ನು ಇಂದು ವಿಶ್ವವ್ಯಾಪಿಯಾಗಿ ಆಚರಿಸಲಾಗುತ್ತಿದೆ. ನಾಗರಿಕರಾದ ನಾವು  ನಮ್ಮಗಳ  ಆರೋಗ್ಯ ಸುರಕ್ಷತೆಯ ಕಡೆ ಗಮನಹರಿಸಿ ಸದೃಢ ಸಮಾಜ ನಿರ್ಮಾಣ ಮಾಡುವ ಕಡೆ ಹೆಜ್ಜೆ ಹಾಕೋಣ, ಸರ್ಕಾರಗಳ ಜೊತೆ ಕೈ ಜೋಡಿಸೋಣ, ಮಾಸ್ಕ್ ಧಾರಣೆಯ ಜೊತೆಗೆ ಸಾಮಾಜಿಕ ಅಂತರ ಪಾಲನೆ ಮಾಡಿ ಕೊರೊನಾ ಎಂಬ ಸಾಂಕ್ರಾಮಿಕ ರೋಗವನ್ನು  ಹಿಮ್ಮೆಟ್ಟಿಸುವ ಸಂಕಲ್ಪದೊಂದಿಗೆ ಉತ್ತಮ ಆರೋಗ್ಯವನ್ನು ನಮ್ಮದಾಗಿಸಿ ಕೊಳ್ಳೋಣ.


ಡಾ. ಶಿವಯ್ಯ ಎಸ್.
ವಿಶ್ರಾಂತ ಪ್ರಾಧ್ಯಾಪಕರು, ದಾವಣಗೆರೆ
[email protected]

error: Content is protected !!