ಕೊರೊನಾ ಸೋಂಕು ಕಡಿಮೆ ಎಚ್ಚರಿಕೆ ತಪ್ಪಿದರೆ ಆಪತ್ತು

ಕೊರೊನಾ ಸೋಂಕು ಕಡಿಮೆ ಎಚ್ಚರಿಕೆ ತಪ್ಪಿದರೆ ಆಪತ್ತು - Janathavaniದಾವಣಗೆರೆ, ಜು. 10 – ಕೊರೊನಾ ಪಾಸಿಟಿವ್ ಪ್ರಮಾಣ ಈಗ ಶೇ.1.5ಕ್ಕಿಂತ ಕಡಿಮೆ ಇದೆ. ಆದರೂ, ಮೈ ಮರೆಯುವಂತಿಲ್ಲ ಎಂದು ಐ.ಸಿ.ಎಂ.ಆರ್., ಏಮ್ಸ್ ನಿರ್ದೇಶಕರು ಹಾಗೂ ಕೇಂದ್ರ ಆರೋಗ್ಯ ಸಚಿವಾಲಯ ಸೂಚನೆ ನೀಡಿದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.

ಇಂದಿಲ್ಲಿ ಪತ್ರಕರ್ತರೊಂದಿಗೆ ಮಾತಾನಾಡುತ್ತಿದ್ದ ಅವರು, ಶೇ.60ರಿಂದ 70ರಷ್ಟು ಜನರು ಎರಡು ಡೋಸ್‌ ಲಸಿಕೆ ಪಡೆಯುವವರೆಗೂ ಮುಂಜಾಗ್ರತಾ ಕ್ರಮಕ್ಕೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಎಚ್ಚರಿಕೆ ತಪ್ಪಿದರೆ ಆಪತ್ತು ಕಾಡುತ್ತದೆ ಎಂದವರು ಹೇಳಿದರು. 

ಕೇರಳದಲ್ಲಿ ಪ್ರತಿದಿನ 15 ಸಾವಿರದವರೆಗೆ ಪ್ರಕರಣಗಳು ಕಂಡು ಬರುತ್ತಿವೆ. ಮಹಾರಾಷ್ಟ್ರದಲ್ಲೂ ಪ್ರಕರಣಗಳು ಹೆಚ್ಚಾಗಿವೆ. ಈ ರಾಜ್ಯಗಳಲ್ಲಿ ಕೊರೊನಾ ಹೆಚ್ಚಾದ ನಂತರ ರಾಜ್ಯದಲ್ಲೂ ಸೋಂಕು ಏರಿಕೆಯಾಗಿರುವುದನ್ನು ಎರಡು ಅಲೆಗಳಲ್ಲಿ ಕಂಡಿದ್ದೇವೆ. ಮತ್ತೆ ಅದೇ ಪರಿಸ್ಥಿತಿ ಬರಬಾರದು ಎಂದರೆ ಎಚ್ಚರವಾಗಿರಬೇಕು ಎಂದರು.

ಆಗಸ್ಟ್‌ನಲ್ಲಿ ಹೆಚ್ಚು ಲಸಿಕೆ : ಆಗಸ್ಟ್ ವೇಳೆಗೆ 1.6 ಕೋಟಿ ಜನರಿಗೆ ಎರಡನೇ ಡೋಸ್ ಲಸಿಕೆ ನೀಡಬೇಕಾಗುತ್ತದೆ. ಈ ಬಗ್ಗೆ ಹೈಕೋರ್ಟ್ ವಿವರ ಕೇಳಿರುವ ಕುರಿತು ಉತ್ತರಿಸಿರುವ ಸಚಿವರು, ಹೈಕೋರ್ಟ್‌ನಷ್ಟೇ ನಾವೂ ಗಂಭೀರವಾಗಿ ಲಸಿಕೆಗೆ ಪ್ರಯತ್ನ ಮಾಡುತ್ತಿದ್ದೇವೆ. ದೆಹಲಿಗೆ ತೆರಳಿ ಸಂಬಂಧಪಟ್ಟ ಎಲ್ಲ ಅಧಿಕಾರಿಗಳು ಹಾಗೂ ಸಚಿವರನ್ನು ಭೇಟಿ ಮಾಡಿದ್ದೇನೆ. ಆಗಸ್ಟ್ ವೇಳೆಗೆ ದೊಡ್ಡ ಮಟ್ಟದಲ್ಲಿ ಲಸಿಕೆ ಲಭ್ಯವಾಗುವ ಭರವಸೆ ದೊರೆತಿದೆ ಎಂದರು.

ಅನ್‌ಲಾಕ್‌ ಜನರ ಜವಾಬ್ದಾರಿ : ಅನ್‌ಲಾಕ್ ಪ್ರಕಟಣೆ ಮಾಡಿದ ನಂತರ ಪ್ರತಿ ವ್ಯಕ್ತಿ ಆರೋಗ್ಯ ಜವಾಬ್ದಾರಿ ಹೊರಬೇಕು. ಪ್ರತಿಯೊಬ್ಬ ವ್ಯಕ್ತಿಯ ನಿಗಾ ಸರ್ಕಾರಕ್ಕೆ ಮೀರಿದ್ದು.  ಜನರು ಅವರ ಎಚ್ಚರಿಕೆ ಅವರೇ ಹೊತ್ತರೆ ಒಳ್ಳೆಯದು ಎಂದವರು ಹೇಳಿದರು.

ಜನರು ಎಚ್ಚರಿಕೆ ವಹಿಸದೇ ಹೋದರೆ ಸರ್ಕಾರ ಬಿಗಿ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಆಗ ಜನಜೀವನ ಅಸ್ತವ್ಯಸ್ತ ಆಗುತ್ತದೆ ಎಂದ ಸುಧಾಕರ್, ಪ್ರತಿ ಹತ್ತು ಲಕ್ಷ ಜನಸಂಖ್ಯೆಗೆ  50ಕ್ಕಿಂತ ಹೆಚ್ಚು ಪ್ರಕರಣಗಳು ಬರಬಾರದು ಎಂಬುದು ಮಾನದಂಡವಾಗಿದೆ. ಈ ಬಗ್ಗೆ ನಿಗಾ ವಹಿಸಿದ್ದೇವೆ ಎಂದರು.

ಪಿ.ಹೆಚ್.ಸಿ. ಉನ್ನತೀಕರಣ : ರಾಜ್ಯ ಸರ್ಕಾರ 250 ಪಿ.ಹೆಚ್.ಸಿ.ಗಳ ಉನ್ನತೀಕರಣಕ್ಕೆ ಕ್ರಮ ತೆಗೆದುಕೊಳ್ಳುತ್ತಿದೆ. ಇದರ ಜೊತೆಗೆ ಇನ್ನೂ 250 ಪಿ.ಹೆಚ್.ಸಿ.ಗಳ ಉನ್ನತೀಕರಣಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ರಾಜ್ಯದ ಎಲ್ಲಾ 2,500 ಪಿ.ಹೆಚ್.ಸಿ.ಗಳ ಉನ್ನತೀಕರಣದ ಉದ್ದೇಶವಿದೆ ಎಂದವರು ಹೇಳಿದ್ದಾರೆ.

error: Content is protected !!