ಬೇಸಿಗೆ ಹಂಗಾಮು : ಜಿಲ್ಲೆಯಲ್ಲಿ 65 ಸಾವಿರ ಹೆಕ್ಟೇರ್ ಭತ್ತ ಬೆಳೆಯುವ ಗುರಿ

 ದಾವಣಗೆರೆ,ಫೆ.3-  ಜಿಲ್ಲೆಯಾದ್ಯಂತ  ಬೇಸಿಗೆ ಹಂಗಾಮಿನಲ್ಲಿ ಒಟ್ಟಾರೆ 65 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತವನ್ನು ಬೆಳೆಯುವ ಗುರಿ ಹೊಂದಲಾಗಿದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ. 

ಈ ವರ್ಷದ ಉತ್ತಮ ಮಳೆಯಿಂದಾಗಿ ತುಂಗಾ ಮತ್ತು ಭದ್ರಾ ಜಲಾಶಯಗಳೆರಡೂ ತುಂಬಿರುವುದು ಹಾಗೂ ಕೊಳವೆ ಬಾವಿಗಳಲ್ಲಿ ನೀರು ಹೆಚ್ಚಾಗಿರುವುದರಿಂದ ಜಿಲ್ಲೆಯ ರೈತರು ಹರ್ಷ ಚಿತ್ತರಾಗಿ ಭತ್ತದ ಬೆಳೆ ಬೆಳೆಯಲು ಸಿದ್ಧತೆ ನಡೆಸುತ್ತಿದ್ದಾರೆ.  ಉತ್ತಮ ಬೆಳೆ ಹಾಗೂ ಇಳುವರಿ ಪಡೆಯಲು, ಭತ್ತದ ಉತ್ಪಾದನೆ ಹೆಚ್ಚಿಸುವ ಮುಖ್ಯ ತಾಂತ್ರಿಕತೆಗಳಾದ ಭೂಮಿ ಹಾಗೂ ಸಸಿಮಡಿ ತಯಾರಿಕೆ, ಸುಧಾರಿತ ತಳಿಗಳು, ಸಮಗ್ರ ನೀರು, ಪೋಷಕಾಂಶ ಹಾಗೂ ಸಸ್ಯ ಸಂರಕ್ಷಣೆಗಳ ನಿರ್ವಹಣೆ ಬಗ್ಗೆ ಒತ್ತು ನೀಡುವುದು ಅತ್ಯಗತ್ಯವಾಗಿರುತ್ತದೆ.  

ಮಿಶ್ರಣ ಬೀಜಗಳ ಹತೋಟಿ: ಇತ್ತೀಚಿನ ದಿನಗಳಲ್ಲಿ ಭತ್ತ ಕೊಯ್ಲು ಯಂತ್ರದ ಮೂಲಕ ಕಟಾವು ಮಾಡುವುದರಿಂದ ಸಾಕಷ್ಟು ಪ್ರಮಾಣದ ಭತ್ತದ ಬೀಜಗಳು ಉದುರಿ ಗದ್ದೆಯಲ್ಲಿರುತ್ತವೆ, ಹೀಗಾಗಿ ಈ ಬೀಜಗಳು ಗದ್ದೆಯಲ್ಲಿದ್ದು ಬೇಸಿಗೆ ಹಂಗಾಮಿನಲ್ಲಿ ಭತ್ತ ಬೆಳೆಯುವಾಗ ಮೊಳಕೆಯೊಡೆದು ಬೇಸಿಗೆ ಹಂಗಾಮಿನಲ್ಲಿ ಬೆಳೆದ ಇತರೆ ತಳಿಯೊಂದಿಗೆ ಬೆರಕೆಯಾಗುವುದರಿಂದ ಮುಂಜಾಗ್ರತೆ ಕ್ರಮವಾಗಿ ಉತ್ತಮ ಭೂಮಿ ಸಿದ್ಧತೆ ಅತ್ಯಗತ್ಯ. 

ಆದ್ದರಿಂದ, ಮುಂಗಾರು ಹಂಗಾಮಿನ ಭತ್ತ ಕಟಾವು ಮಾಡಿದ ತಕ್ಷಣ ಗದ್ದೆಯಲ್ಲಿರುವ ತೇವಾಂಶ ಬಳಸಿಕೊಂಡು ನೇಗಿಲು ಅಥವಾ ಟ್ರ್ಯಾಕ್ಟರ್‍ನಿಂದ ಒಂದು ಸಾರಿ ಉಳುಮೆ ಮಾಡಿ ನಂತರ ನೀರು ನಿಲ್ಲಿಸಿ, ಭೂಮಿ ಸುಮಾರು 8-10 ದಿನಗಳವರೆಗಾದರೂ ಕೊಳೆಯಲು ಬಿಡಬೇಕು,  ಹೀಗೆ ಮಾಡುವುದರಿಂದ ಮುಂಗಾರು ಹಂಗಾಮಿನ ಭತ್ತದ ಬೀಜಗಳು ಮೊಳಕೆಯೊಡೆಯುತ್ತವೆ. 

ನಂತರ ಮತ್ತೊಮ್ಮೆ ಟ್ರ್ಯಾಕ್ಟರ್‌ನಿಂದ  ರೊಳ್ಳೆ ಹೊಡೆದು ಮೊಳಕೆಯೊಡೆದ ಭತ್ತವನ್ನು ಭೂಮಿಗೆ ಸೇರಿಸುವುದು.  ಇದರಿಂದ ಬೇಸಿಗೆ ಭತ್ತದಲ್ಲಿ ಇತರೆ ಭತ್ತದ ಬೀಜಗಳ ಮಿಶ್ರಣವಾಗುವುದನ್ನು ತಡೆಯಬಹುದು. 

ಯಂತ್ರಚಾಲಿತ ನಾಟಿ, ಕೂರಿಗೆ ಬಿತ್ತನೆಯಿಂದ ಕೃಷಿ ವೆಚ್ಚಗಳನ್ನು ಗಣನೀಯವಾಗಿ ಕಡಿಮೆ ಮಾಡಬಹುದಾಗಿರುವುದರಿಂದ ತಮ್ಮ
ತಮ್ಮ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳುವಂತೆ ಜಂಟಿ ಕೃಷಿ ನಿರ್ದೇಶಕರು ತಿಳಿಸಿರುತ್ತಾರೆ.  

error: Content is protected !!