ನಗರದಲ್ಲಿ ಇಂದು ಕ್ಯಾನ್ಸರ್ ಜಾಗೃತಿ ಜಾಥಾ

ದಾವಣಗೆರೆ, ಫೆ. 3- ಜಿ.ಎಂ. ವಿಶ್ವವಿದ್ಯಾಲಯ, ಜಿ.ಎಂ.ಇನ್‌ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯೂಟಿಕಲ್ ಸೈನ್ಸ್ ಅಂಡ್ ರಿಸರ್ಚ್ ವಿಭಾಗ ಮತ್ತು ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ಜಾಗೃತಿ ಜಾಥಾ (ವಾಕಥಾನ್) ನಾಳೆ ದಿನಾಂಕ 4 ರ ಮಂಗಳವಾರ ಬೆಳಿಗ್ಗೆ 7.30 ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಜಿ.ಎಂ. ಫಾರ್ಮಸಿ ವಿಭಾಗದ ಪ್ರಾಚಾರ್ಯ ಡಾ. ಗಿರೀಶ್ ಬೋಳಕಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ಜಾಥಾ ನಗರದ ಮೋತಿ ವೀರಪ್ಪ ಕಾಲೇಜು ಮೈದಾನದಿಂದ ಪ್ರಾರಂಭವಾಗಿ, ವಿದ್ಯಾರ್ಥಿ ಭವನ, ಅಂಬೇಡ್ಕರ್ ವೃತ್ತ, ಜಯದೇವ ವೃತ್ತದವರೆಗೆ ನಡೆಯಲಿದೆ ಎಂದರು.

ಇದೇ ವೇಳೆ ಕ್ಯಾನ್ಸರ್ ಬಗ್ಗೆ ಜಾಗೃತಿ, ಕಿರು ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ. ಕ್ಯಾನ್ಸರ್ ಜಾಗೃತಿ ಜಾಥಾದಲ್ಲಿ ಜಿ.ಎಂ. ವಿವಿ ಕುಲಾಧಿಪತಿ ಜಿ.ಎಂ.ಲಿಂಗರಾಜ್, ಕುಲಪತಿ ಡಾ.ಎಸ್.ಆರ್. ಶಂಕಪಾಲ್, ಉಪ ಕುಲಪತಿ ಡಾ.ಹೆಚ್.ಡಿ. ಮಹೇಶ್ವರಪ್ಪ, ಕುಲಸಚಿವ ಡಾ. ಬಿ.ಎಸ್. ಸುನೀಲ್ ಕುಮಾರ್, ಪ್ರಾಚಾರ್ಯ ಡಾ.ಎಂ.ಡಿ. ಸಂಜಯ್, ಸಹಾಯಕ ಔಷಧ ನಿಯಂತ್ರಕರಾದ ಎಂ.ಎಸ್. ಗೀತಾ, ಎಸ್.ಆರ್. ಪ್ರಸನ್ನಕುಮಾರ್, ರವಿಪ್ರಸಾದ್, ಕ್ಯಾನ್ಸರ್ ಗೆದ್ದಿರುವ ಕಲಾವಿದ ಆರ್.ಟಿ. ಅರುಣ್ ಕುಮಾರ್ ಸೇರಿದಂತೆ ಅನೇಕರು ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.

ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆ ನಿರ್ದೇಶಕ ಡಾ. ಜಗದೀಶ್ ತುಬಚಿ ಮಾತನಾಡಿ, ಭಾರತದಲ್ಲಿ ಪ್ರತಿ ವರ್ಷ ನಾಲ್ಕು ಲಕ್ಷ ಜನರಲ್ಲಿ ಕ್ಯಾನ್ಸರ್ ಪತ್ತೆಯಾಗುತ್ತಿದೆ. ಕ್ಯಾನ್ಸರ್‌ಗೆ ಚಿಕಿತ್ಸೆ ಇದೆ. ಆದರೆ ಅನೇಕರಲ್ಲಿ ತಪ್ಪು ಭಾವನೆ ಇದೆ. ಮೊದಲ ಹಂತದಲ್ಲೇ ಕ್ಯಾನ್ಸರ್ ಪತ್ತೆ ಹಚ್ಚಿ ಗುಣಪಡಿಸಬಹುದು. ಅನೇಕರು ನಾಲ್ಕನೇ ಹಂತದಲ್ಲಿರುವಾಗ ಚಿಕಿತ್ಸೆಗೆ ಬರುವುದು ಕಂಡು ಬರುತ್ತದೆ. ಇತ್ತೀಚಿನ ದಿನಗಳಲ್ಲಿ ಮೊದಲ, ಎರಡನೇ ಹಂತದಲ್ಲಿರುವವರು ಚಿಕಿತ್ಸೆಗೆ ಬರುವಂತಾಗಿದೆ ಎಂದು ಹೇಳಿದರು.

ಅನೇಕರು ಒತ್ತಡದ ಜೀವನದಲ್ಲಿ ಕ್ಯಾನ್ಸರ್‌ನ ಪ್ರಾರಂಭಿಕ ಲಕ್ಷಣಗಳನ್ನೂ ಗಮನಿಸದೇ ಇರುವುದು ಕಂಡುಬರುತ್ತಿದೆ. ತಂಬಾಕು, ಗುಟ್ಕಾ, ಬದಲಾಗುತ್ತಿರುವ ಜೀವನ ಶೈಲಿ, ಇತರೆ ಕಾರಣಗಳಿಂದ ಕ್ಯಾನ್ಸರ್‌ ಕಂಡು ಬರುತ್ತಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಎಂ.ಡಿ.ಮೊಹಮ್ಮದ್ ಯೂಸೂಫ್‌, ಪ್ರತೀಕ್ಷಾ, ಡಾ. ಟಿ.ಎಂ. ವೀರಗಂಗಾಧರ ಸ್ವಾಮಿ ಮತ್ತಿತರರಿದ್ದರು.  

error: Content is protected !!