ತಾಲ್ಲೂಕು ಕನ್ನಡ ಸಮ್ಮೇಳನದ ಸಮಾರೋಪದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯ ಕುಲಸಚಿವ ಡಾ. ಬಿ.ಇ. ರಂಗಸ್ವಾಮಿ ಆಶಯ
ದಾವಣಗೆರೆ, ಫೆ. 3- ವಿಜ್ಞಾನದ ಸಂವಹನಗಳು ಪ್ರಾದೇಶಿಕ ಭಾಷೆ ಅಥವಾ ಕನ್ನಡದಲ್ಲಿಯೇ ನಡೆಯಬೇಕು. ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ವೈಜ್ಞಾನಿಕ ಲೇಖನಗಳು, ಚಿಂತನೆಗಳು, ಪ್ರಕಟಗೊಳ್ಳಬೇಕು ಮತ್ತು ಚರ್ಚೆಯಾಗಲೆಂದು ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯ ಕುಲಸಚಿವ ಡಾ ಬಿ.ಇ. ರಂಗಸ್ವಾಮಿ ಆಶಯ ವ್ಯಕ್ತಪಡಿಸಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಮೊನ್ನೆ ಹಮ್ಮಿಕೊಂಡಿದ್ದ 11 ನೇ ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಆಶಯ ನುಡಿಗಳನ್ನಾಡಿದರು.
ಸಮಾಜಕ್ಕೆ ಕನ್ನಡ ಸಾಹಿತ್ಯ ಲೋಕದ ಕೊಡುಗೆ ಅಪಾರವಾದುದು. ಸಾಹಿತ್ಯ ಮತ್ತು ಸಾಂಸ್ಕೃತಿಕ ನೆಲೆಗಟ್ಟಿನ ಬಗ್ಗೆ ತಿಳಿವಳಿಕೆ ಮೂಡಿಸುವ ಅಗತ್ಯವಿದೆ. ತಾಂತ್ರಿಕ ಶಿಕ್ಷಣವನ್ನು ಮಾತೃಭಾಷೆ ಕನ್ನಡದಲ್ಲಿಯೇ ನೀಡಬೇಕೆಂಬ ವಿವಿಯು ಆಶಯ ಹೊಂದಿದ್ದರೂ ಸಹ ಕನ್ನಡದಲ್ಲಿ ಕಲಿಯಲು ವಿದ್ಯಾರ್ಥಿಗಳು ನಿರಾಸಕ್ತಿ ತೋರುತ್ತಿದ್ದಾರೆಂದು ಹೇಳಿದರು.
ಸಮಾಜಕ್ಕೆ ಕನ್ನಡ ಸಾಹಿತ್ಯ ಲೋಕದ ಕೊಡುಗೆ ಅಪಾರವಾದುದು. ಇಂತಹ ಸಾಹಿತ್ಯ ಸಮ್ಮೇಳನಗಳ ಮೂಲಕ ಸಾಂಸ್ಕೃತಿಕ ನೆಲೆಗಟ್ಟನ್ನು ಹಾಗೂ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ವಿದ್ಯಾರ್ಥಿ ಯುವಜನರಿಗೆ, ಜನ ಸಾಮಾನ್ಯರಿಗೆ ತಿಳಿಸಿಕೊಡಲಾಗುತ್ತಿದೆ ಎಂದರು.
ಕನ್ನಡವನ್ನು ಹೆಚ್ಚು ಹೆಚ್ಚು ಬಳಸಿದಾಗ ಮಾತ್ರ ಕನ್ನಡ ಭಾಷೆ ಉಳಿಯಲು ಮತ್ತು ಬೆಳೆಯಲು ಸಾಧ್ಯ. ಆದ್ದರಿಂದ ಇನ್ನೂ ಹೆಚ್ಚು ಹೆಚ್ಚು ಕಾರ್ಯಕ್ರಮಗಳು ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸುವಂತಾಗಲಿ ಎಂದು ಆಶಿಸಿದರು.
ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷೆ ಸುಮತಿ ಜಯಪ್ಪ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ, ಅಧ್ಯಾತ್ಮಿಕ ಚಿಂತಕರಾದ ಶಿವಾನಂದ ಗುರೂಜಿ ಅವರು ಸಮ್ಮೇಳನಾಧ್ಯಕ್ಷರ ಸಮೀಕ್ಷಾ ನುಡಿಗಳನ್ನಾಡಿದರು.
ಇದೇ ವೇಳೆ ಕುವೆಂಪು ಕನ್ನಡ ಭವನ ನಿರ್ಮಾಣಕ್ಕೆ ಶ್ರಮಿಸಿದ್ದ ದಿ. ಪ್ರೊ. ಎಸ್.ಬಿ. ರಂಗನಾಥ್ ಅವರ ಪತ್ನಿ ಶ್ರೀಮತಿ ರತ್ನಮ್ಮ ರಂಗನಾಥ್ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರುಗಳಾದ ಬಿ.ಟಿ. ನಂದ್ಯಪ್ಪ, ಪಂಡಿತ ಎಸ್ಎಂ. ರುದ್ರಮುನಿಯಯ್ಯ, ರೂಪ ಬಸಪ್ಪನವರ್, ರಾಜಯೋಗಿನಿ ಬ್ರಹ್ಮಾಕುಮಾರಿ ಗೀತಾ ಜೀ, ಹೆಚ್. ಭಾರತಿ, ಕಣಕುಪ್ಪಿ ಕರಿಬಸಪ್ಪ, ಪೋಪಟ್ ಲಾಲ್ ಜೈನ್, ಹೆಚ್.ಎನ್. ಜಯಮ್ಮ, ಬಿ. ಅನಸೂಯ, ಡಾ. ಸುಪರ್ಣ, ಗಿರೀಶ್ ದೇವರಮನಿ ಅವರುಗಳಿಗೆ ಪರಿಷತ್ ವತಿಯಿಂದ ಗೌರವಿಸಲಾಯಿತು.
ಕಸಾಪ ಪದಾಧಿಕಾರಿಗಳಾದ ಬಿ. ದಿಳ್ಳೆಪ್ಪ, ಜಗದೀಶ್ ಕೂಲಂಬಿ, ರೇವಣಸಿದ್ಧಪ್ಪ ಅಂಗಡಿ, ಷಡಾಕ್ಷರಪ್ಪ ಎಲೆಬೇತೂರು ಮತ್ತಿತರರು ಉಪಸ್ಥಿತರಿದ್ದರು. ಎಸ್. ಶಿವಯ್ಯ ಸ್ವಾಗತಿಸಿದರು. ಪಂಕಜಾಕ್ಷಿ ನಿರೂಪಿಸಿದರು. ಸೌಭಾಗ್ಯಮ್ಮ ವಂದಿಸಿದರು.
ನಂತರ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವನ್ನು ವಿವಿಧ ಶಾಲಾ ಮಕ್ಕಳು ನಡೆಸಿಕೊಟ್ಟರು. ವೃತ್ತಿ ರಂಗಭೂಮಿ ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ್ ಕಡಕೋಳ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.