ಹರಿಹರ, ಫೆ.3- ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಬೆಂಗಳೂರಿಗೆ ಹೋಗಲು ಬಸ್ಸಿಗೆ ಕಾಯುತ್ತಿದ್ದ ಮಹಿಳಾ ಪ್ರಯಾಣಿಕರು ಹೆಚ್ಚುವರಿ ಬಸ್ ಬಿಡುವಂತೆ ಆಗ್ರಹಿಸಿ, ಬಸ್ಸಿಗೆ ಅಡ್ಡಗಟ್ಟಿ ಭಾನುವಾರ ತಡರಾತ್ರಿ ಪ್ರತಿಭಟನೆ ನಡೆಸಿದರು.
ಮೂರು, ನಾಲ್ಕು ತಾಸುಗಳಿಂದ ಬಸ್ಸಿಗೆ ಕಾಯುತ್ತಿದ್ದ ಪ್ರಯಾಣಿಕರು, ತಾಳ್ಮೆ ಕಳೆದುಕೊಂಡು ನಿಲ್ದಾಣ ನಿಯಂತ್ರಕರ ಬಳಿ ಹೆಚ್ಚುವರಿ ಬಸ್ ಬಿಡುವಂತೆ ಒತ್ತಾಯಿಸಿದರು.
ಈಗಾಗಲೇ 12 ಹೆಚ್ಚುವರಿ ಬಸ್ಸುಗಳನ್ನು ಬಿಟ್ಟಿದ್ದೇವೆ ಎಂದು ನಿಲ್ದಾಣ ನಿಯಂತ್ರಕ ತಿಳಿಸಿದರೂ ಕೂಡ ಹೆಚ್ಚಿನ ಬಸ್ ಬಿಡಲೇ ಬೇಕು ಎಂದು ಪಣತೊಟ್ಟು ವಾಗ್ವಾದ ನಡೆಸಿದರು.
ಪ್ರಯಾಣಿಕರ ಮನವಿಗೆ ಸ್ಪಂದಿಸದ ನಿಲ್ದಾಣ ನಿಯಂತ್ರಕರ ವಿರುದ್ಧ ಜಗಳಕ್ಕೆ ಮುಗಿಬಿದ್ದ ಜನರು, ನಿಲ್ದಾಣದ ಎರಡು ಬದಿಯ ಗೇಟ್ ಬಳಿ ಬೇರೆ ಮಾರ್ಗಕ್ಕೆ ಹೋಗುವ ಬಸ್ಸಗಳನ್ನು ಅಡ್ಡಗಟ್ಟಿ ಆಕ್ರೋಶ ಹೊರಹಾಕಿದರು.
ಪ್ರಯಾಣಿಕರ ಬೇಡಿಕೆಗೆ ಮಣಿಯದ ಅಧಿಕಾರಿಗಳು, ಹೆಚ್ಚುವರಿ ಬಸ್ ಬಿಡುವಲ್ಲಿ ನಿರಾಕರಿಸಿದರು. ಈ ವೇಳೆ ಕೆಲವು ಪ್ರಯಾಣಿಕರು ಮರಳಿ ಮನೆಗೆ ಹೋದರು, ಇನ್ನೂ ಕೆಲವರು ಬಂದ ಬಸ್ ಹತ್ತಿ ಹೋದ ದೃಶ್ಯ ಕಂಡು ಬಂದಿತು.