ಕಲಾವಿದ ಎನ್.ಎಸ್. ರಾಜು ಮನವಿ
ದಾವಣಗೆರೆ, ಫೆ.3- ಕಲೆ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸಲು ಧನ ಸಹಾಯ ಮಾಡಬೇಕು ಎಂದು ರಂಗ ಕಲಾವಿದ ಎನ್.ಎಸ್ ರಾಜು ಮನವಿ ಮಾಡಿದರು.
ಶ್ರೀ ಜಯಲಕ್ಷ್ಮಿ ನಾಟಕ ಸಂಘದ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ನಡೆದ `ಕಳ್ಳ ಗುರು, ಸುಳ್ಳ ಶಿಷ್ಯ’ ಎಂಬ ಸಾಮಾಜಿಕ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾಡಿನ ಸಂಪತ್ತು ಆಗಿರುವ ಕಲಾವಿದರನ್ನು ಉಳಿಸಿ ಬೆಳೆಸುವಂತಹ ಕೆಲಸ ಮಾಡಬೇಕಾಗಿದೆ. ಈ ದಿನಮಾನಗಳಲ್ಲಿ ಬಣ್ಣ ಹಚ್ಚಿ ಜನರನ್ನು ರಂಜಿಸುವ ಕಲಾವಿದರ ಬದುಕು ಕಷ್ಟಕರವಾಗಿದೆ. ಹಾಗಾಗಿ ದಾನಿಗಳು, ಕಲಾ ಪೋಷಕರು ಧನ ಸಹಾಯ ಮಾಡುವ ಮೂಲಕ ಕಲೆ ಹಾಗೂ ಕಲಾವಿದರನ್ನು ಉಳಿಸಿ, ಬೆಳೆಸಬೇಕು ಎಂದರು.
ಕಲಾವಿದರಿಗೆ ಇಲಾಖೆ ನೀಡುವ ಸಹಾಯ ಧನ ಸಾಕಾಗುವುದಿಲ್ಲ.
ಹಾಗಾಗಿ ಇಲಾಖೆಯಿಂದ ಹೆಚ್ಚಿನ ಪ್ರೋತ್ಸಾಹ ಧನ ಸೇರಿದಂತೆ ವಿವಿಧ ಸವಲತ್ತುಗಳನ್ನು ನೀಡಿ ಗೌರವಿಸಬೇಕು ಎಂದ ಅವರು, ವಿವಿಧ ಅಕಾಡೆಮಿಯ ಪ್ರಶಸ್ತಿಗಳು ಗ್ರಾಮೀಣ ಪ್ರದೇಶದ ಕಲಾವಿದರಿಗೂ ಸಿಗುವಂತಾಗಲಿ ಎಂದು ಆಶಿಸಿದರು.
ದೇವಸ್ಥಾನ ಸಮಿತಿಯ ಅಧ್ಯಕ್ಷ ಎ.ಸಿ. ಸಿದ್ದಪ್ಪ, ಎನ್. ಎಸ್. ದಿಳ್ಳೆಪ್ಪ, ಎಸ್.ಜಿ. ವಿಜಯಕುಮಾರ್, ಎಲ್. ಶಂಕರ್, ಟಿ. ಸಿದ್ದರಾಮಪ್ಪ ಬುಳಸಾಗರ, ಎನ್. ರವಿಕುಮಾರ್, ಮಡ್ರಳ್ಳಿಯ ಮಂಜುನಾಥ, ಪಿ.ಕೆ. ಖಾದರ್ ಇತರರು ಇದ್ದರು.
ಸತ್ಯನಾರಾಯಣ ಕನ್ನಡ ಕಲಾ ಬಳಗದ ಎಸ್. ಪ್ರೇಮಾ ತಂಡದಿಂದ `ಕಳ್ಳ ಗುರು, ಸುಳ್ಳ ಶಿಷ್ಯ’ ಎಂಬ ನಾಟಕ ಪ್ರದರ್ಶನ ನಡೆಯಿತು.