ದಾವಣಗೆರೆ, ಫೆ. 3- ನಗರದ ಜಿ.ಎಂ. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ವ್ಯವಹಾರಗಳ ನಿರ್ದೇಶನಾಲಯ ಹಾಗೂ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ವತಿಯಿಂದ ನಾಳೆ ದಿನಾಂಕ 4 ರಿಂದ ಇದೇ ದಿನಾಂಕ 15 ರವರೆಗೆ ಜಿ.ಎಂ. ವಿವಿಯ ಕ್ರೀಡಾಂಗಣದಲ್ಲಿ ಪ್ರಥಮ ಬಾರಿಗೆ ಐಪಿಎಲ್ ಮಾದರಿಯ ಜಿ.ಎಂ. ಲೀಗ್ ಕ್ರೀಡಾ ಹಬ್ಬ ನಡೆಯಲಿದೆ. 11 ದಿನಗಳ ಕಾಲ ಕ್ರಿಕೆಟ್, ವಾಲಿಬಾಲ್, ಖೋ-ಖೋ, ಥ್ರೋ ಬಾಲ್ ಪಂದ್ಯಾವಳಿಗಳನ್ನು ಆಯೋಜಿಸಲಾಗಿದೆ ಎಂದು ನಿರ್ದೇಶಕ ಡಾ.ಹೆಚ್.ಎನ್. ಕಿರಣ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಾಳೆ ಮಂಗಳವಾರ ಜಿ.ಎಂ. ಲೀಗ್ ಕ್ರೀಡಾ ಹಬ್ಬಕ್ಕೆ ಚಾಲನೆ ದೊರೆಯಲಿದೆ. ಕುಸ್ತಿಪಟು, ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ಪುರಸ್ಕೃತರಾದ ಕಾರ್ತಿಕ ಜಿ. ಕಾಟೆ ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದು,
ಜಿ.ಎಂ. ವಿವಿಯ ಕುಲಾಧಿಪತಿ ಜಿ.ಎಂ.ಲಿಂಗರಾಜು ಅಧ್ಯಕ್ಷತೆ ವಹಿಸಲಿದ್ದಾರೆ. ಕುಲಪತಿ ಡಾ. ಎಸ್.ಆರ್. ಶಂಕಪಾಲ್, ಸಹ ಕುಲಪತಿ ಡಾ.ಹೆಚ್.ಡಿ. ಮಹೇಶಪ್ಪ, ಕುಲಸಚಿವ ಡಾ. ಬಿ.ಎಸ್. ಸುನೀಲ್ ಕುಮಾರ್, ಜಿ.ಎಂ. ತಾಂತ್ರಿಕ ಮಹಾವಿದ್ಯಾಲಯದ ಆಡಳಿತಾಧಿಕಾರಿ ವೈ.ಯು. ಸುಭಾಶ್ಚಂದ್ರ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.
ಕ್ರಿಕೆಟ್ ಪಂದ್ಯಾವಳಿಯಲ್ಲಿ 9 ತಂಡಗಳಿದ್ದು, ಪ್ರತಿ ತಂಡದಲ್ಲಿ 20 ಆಟಗಾರರು ಇದ್ದಾರೆ. ವಾಲಿಬಾಲ್ ಪಂದ್ಯದಲ್ಲಿ 8 ತಂಡಗಳಿದ್ದು, ಪ್ರತಿ ತಂಡದಲ್ಲಿ 10 ಆಟಗಾರರು ಇದ್ದಾರೆ.
ಖೋ-ಖೋ ಪುರುಷರು ಹಾಗೂ ಮಹಿಳೆಯರ ವಿಭಾಗದಲ್ಲಿ ತಲಾ ನಾಲ್ಕು ತಂಡಗಳಿದ್ದು, ಪ್ರತಿ ತಂಡದಲ್ಲಿ 12 ಆಟಗಾರರು ಇರುತ್ತಾರೆ. ಥ್ರೋ ಬಾಲ್ ಮಹಿಳಾ ವಿಭಾಗದಲ್ಲಿ 6 ತಂಡಗಳಿದ್ದು, ಪ್ರತಿ ತಂಡದಲ್ಲೂ 8 ಆಟಗಾರರು ಇದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಜಿ.ಎಂ. ವಿವಿಯ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ನಿರ್ದೇಶಕರಾದ ಜಿ.ಬಿ. ಅಜ್ಜಯ್ಯ, ಗುರುಶಂಕರ್, ಬಿ.ಇ. ರಾಜೇಶ್ ಉಪಸ್ಥಿತರಿದ್ದರು.