ಶರಣರ ವಚನಗಳ ಅಧ್ಯಯನದಿಂದ ಮನಸ್ಸಿನ ನಿಯಂತ್ರಣ ಸಾಧ್ಯ

ಶರಣರ ವಚನಗಳ ಅಧ್ಯಯನದಿಂದ ಮನಸ್ಸಿನ ನಿಯಂತ್ರಣ ಸಾಧ್ಯ

`ಕಲ್ಯಾಣದಿಂದ ಉಳವಿಯಡೆಗೆ’ ಪ್ರವಚನ ಮಂಗಲೋತ್ಸವದಲ್ಲಿ ಶ್ರೀ ಬಸವ ಪ್ರಭು ಸ್ವಾಮೀಜಿ

ದಾವಣಗೆರೆ, ಸೆ. 3- ಬಸವಾದಿ ಶರಣರ ವಚನಗಳನ್ನು ಅಧ್ಯಯನ ಮಾಡಿ ಅದರಂತೆ ನಡೆದರೆ ಮಾನವನ ಮನಸ್ಸನ್ನು ನಿಯಂತ್ರಿ ಸಲು ಸಾಧ್ಯ. ಆಗ ಬದುಕು ಆಘಾತಕ್ಕೆ ಒಳಗಾಗುವುದಿಲ್ಲ ಎಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.

ನಗರದ ವಿರಕ್ತಮಠದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಹಮ್ಮಿಕೊಂಡಿದ್ದ `ಕಲ್ಯಾಣದಿಂದ ಉಳವಿಯಡೆಗೆ’ ಪ್ರವಚನ ಮಂಗಲ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ಮಾನವನ ಜೀವನ ತುಂಬಿದ ಬಂಡಿಯಂತೆ. ಈ ಬದುಕೆಂಬ ಬಂಡಿಯು ಇಂದು ನಿಯಂತ್ರಣ ತಪ್ಪಿ ಅಪಘಾತಕ್ಕೆ ಈಡಾಗುತ್ತಿದೆ. ಇದಕ್ಕೆ ಕಾರಣ ಬದುಕೆಂಬ ಬಂಡಿಯ ಗಾಲಿಗಳು ನಿಯಂತ್ರಣವಿಲ್ಲದ್ದರಿಂದ ಈ ಬದುಕು ಅಪಘಾತವಾಗಿದೆ. ಅವಸರವನ್ನು ಬಿಟ್ಟು ಸಮಾಧಾನವಾಗಿ ಚಲಿಸಬೇಕಾಗಿದೆ ಎಂದರು.

ಬಸವಾದಿ ಶಿವಶರಣರ ವಚನಗಳು ಜೀವನದ ಎಡರು ತೊಡರುಗಳನ್ನು, ಕಷ್ಟ-ನೋವುಗಳನ್ನು ಸಮಚಿತ್ತದಿಂದ ಎದುರಿಸುವ, ನೋವು-ನಲಿವನ್ನು ಹೊಗಳಿಕೆ-ತೆಗಳಿಕೆಯನ್ನು ಸಮದೃಷ್ಟಿಯಿಂದ ಕಾಣುವ ಕಲೆಯನ್ನು ಕಲಿಸುತ್ತದೆ. ಬದುಕು ಸುಗಮವಾಗಿ ಸಾಗಲು ಕಾಯಕ ಬೇಕು. ಆ ಕಾಯಕ ಯಾವುದಾದರೂ ಆಗಲಿ ಅದರೊಳಗೆ ಆನಂದವನ್ನು ಕಂಡರೆ ಅದಕ್ಕಿಂತ ಬೇರೆ ಕೈಲಾಸವಿಲ್ಲ ಎಂದು ಹೇಳಿದರು.

ಖಿನ್ನತೆ, ಅತಿಯಾದ ಹೊಯ್ದಾಟಕ್ಕೆ ಒಳಗಾದ ಇಂದಿನ ಯುವ ಸಮುದಾಯ, ದುಡಿಯುವ ಜನರು, ವ್ಯಾಪಾರಸ್ಥರು, ಗೃಹಿಣಿಯರು, ವೃತ್ತಿಪರರು, ವಿದ್ಯಾರ್ಥಿಗಳು ಹೀಗೆ ವಿವಿಧ ಸ್ತರದಲ್ಲಿರುವವರಿಗೂ ನಿರಾಳದ ಬದುಕಿೆಗೆ ಅಡಿಪಾಯವನ್ನು ಒದಗಿಸುತ್ತದೆ. ಶಾರೀರಿಕ  ಆರೋಗ್ಯ ಪಡೆಯುವುದರಿಂದ ಮಾನಸಿಕ, ಸಾಮಾಜಿಕ, ಅಧ್ಯಾತ್ಮಿಕ ಆರೋಗ್ಯವನ್ನು ಸಾಧಿಸಿ, ನೆಮ್ಮದಿ, ಸಂತೃಪ್ತಿಯ ಜೀವನವನ್ನು  ನಡೆಸಲು ನಮಗೆ ಬಸವಾದಿ ಶಿವಶರಣರ ವಚನಗಳು ಅಗತ್ಯ ಎಂದರು.

ಮನುಷ್ಯನ ಬದುಕಿಗೆ ಒಂದು ದಿನ ಸಾವಿದೆ. ಆ ಸಾವನ್ನು ಗೆಲ್ಲಬೇಕಾದರೆ ಬಸವಾದಿ ಶಿವಶರಣರ ಜೀವನ ಚರಿತ್ರೆಯನ್ನು ಯಾರು ಕೇಳುತ್ತಾರೋ ಅವರು ಸಾವನ್ನು ಗೆಲ್ಲುತ್ತಾರೆ. ಸಾವು ಗೆದ್ದು ಇಂದಿಗೂ ಬಸವಾದಿ ಶರಣರು ಬದುಕಿದ್ದಾರೆ. ಹಾಗಾಗಿ ಬಸವಾದಿ ಶರಣರು ಅಳಿದು ಹೋದ ಜೀವಗಳು ಅಲ್ಲ. ಉಳಿದ ಜೀವಗಳು ಅರ್ಥಾತ್ ಸಾವಿಲ್ಲದ ಜೀವಗಳು. ಅವರು ಸೂರ್ಯ-ಚಂದ್ರ ಇರುವವರೆಗೂ ಶಾಶ್ವತ ಚೇತನವಾಗಿದ್ದಾರೆ ಎಂದು ಹೇಳಿದರು.

ಪ್ರವಚನ ನೀಡಿದ ಮೈಸೂರು ಬಸವ ಧ್ಯಾನ ಮಂದಿರದ ಶ್ರೀ ಬಸವ ಲಿಂಗಮೂರ್ತಿ ಸ್ವಾಮೀಜಿ ಅವರು,  ಕಲ್ಯಾಣದಿಂದ ಉಳವಿಯೆಡೆಗೆ ಪ್ರವಚನ ಕೇಳಲು ದಾವಣಗೆರೆಯ ಭಕ್ತರು ಪ್ರತಿದಿನವೂ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದ್ದೀರಿ ಎಂದರು.

ಚಿತ್ರದುರ್ಗ ವೀರಶೈವ ಸಮಾಜದ ಸಹ ಕಾರ್ಯದರ್ಶಿ ಜಿತೇಂದ್ರ ಹುಲಿಕುಂಟೆ, ಚಿಂದೋಡಿ ವೀರಣ್ಣ, ಎಸ್.ಜಿ. ಸಂಗಪ್ಪ, ಶೋಭಾ ಪಲ್ಲಾಗಟ್ಟೆ, ಎಂ. ಜಯಕುಮಾರ್, ಅಂದನೂರು ಮುಪ್ಪಣ್ಣ, ಹಾಸಬಾವಿ ಕರಿಬಸಪ್ಪ ಮತ್ತಿತರರು ಭಾಗವಹಿಸಿದ್ದರು.

error: Content is protected !!