ತವರೂರಿನ ಪ್ರೌಢಶಾಲೆಗೆ ಅರ್ ಜಿ ಹಳ್ಳಿ ನಾಗರಾಜ್ ರಿಂದ 40 ಪುಸ್ತಕಗಳ ಕೊಡುಗೆ
ದಾವಣಗೆರೆ, ಸೆ. 3 – ಸರ್ಕಾರದ ಆದೇಶದಂತೆ ಓದುವ ಅಭಿಯಾನ ಕಾರ್ಯಕ್ರಮಕ್ಕೆ ಪೂರಕವಾಗಿ ರಾಮಗೊಂಡನಹಳ್ಳಿ ಸರ್ಕಾರಿ ಪ್ರೌಢಶಾಲೆ ಗೆ ಅದೇ ಊರಿನ ಹಿರಿಯ ಲೇಖಕರೂ ಆದ ಆರ್.ಜಿ. ಹಳ್ಳಿ ನಾಗರಾಜ್ ಮಕ್ಕಳು ಓದಬಹುದಾದ ಸುಮಾರು 40 ಪುಸ್ತಕಗಳನ್ನು ಉಚಿತವಾಗಿ ನೀಡಿದ್ದಾರೆ. ಇನ್ನೂ ಹೆಚ್ಚು ಪುಸ್ತಕಗಳನ್ನು ಕಳಿಸುವುದಾಗಿ ತಿಳಿಸಿ ಓದುವ ಹವ್ಯಾಸ ಬೆಳೆಸಿ ಎಂದು ಶಿಕ್ಷಕರಿಗೆ ತಿಳಿಸಿದ್ದಾರೆ.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಬ್ಬೂರಿನಲ್ಲಿ ಮೊದಲನೇ ದಿನ ಗ್ರಂಥಾಲಯವನ್ನು ಸ್ವಚ್ಚತೆ ಮಾಡಿ ಹರಿದಿರುವ ಪುಸ್ತಕಗಳನ್ನು ಹೊಲಿಗೆ ಹಾಕಿ ಸರಿಪಡಿಸಿ ಓದು ಪ್ರಪಂಚ, ಕನ್ನಡ ಕ್ವಿಜ್ ಪುಸ್ತಕ ಗಳನ್ನು ಓದಿಸಲಾಯಿತು.
ಮುಖ್ಯ ಶಿಕ್ಷಕರಾದ ಕಲ್ಲೇಶಪ್ಪ ಸಿ.ಟಿ.ಯವರ ನೇತೃತ್ವದಲ್ಲಿ ಶಿಕ್ಷಕರಾದ ಕೆ. ಶಂಕರಪ್ಪ, ರೇಖಾ, ರೂಪಾ ಪ್ರಿಯಾಂಕ, ಗೀತಾ ರವರು ಓದುವ ಅಭಿಯಾನವನ್ನು ಆರಂಭಿಸಿದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಾಡಾದಲ್ಲಿ ಬೆಳಿಗ್ಗೆ 11 ಗಂಟೆಯಿಂದ 12 ಗಂಟೆಯವರೆಗೆ ಮಕ್ಕಳಿಗೆ ಶಾಲಾ ಗ್ರಂಥಾಲಯ ದಿಂದ ವಿವಿಧ ಪುಸ್ತಕಗಳನ್ನು, ದಿನ ಪತ್ರಿಕೆಗಳನ್ನು ಓದಿಸಲಾಯಿತು.
ಮುಖ್ಯ ಶಿಕ್ಷಕರಾದ ಸುಧಾ ಎಸ್.ಡಿ. ಯವರು ಮಕ್ಕಳಿಗೆ ಓದುವ ಪ್ರವೃತ್ತಿ ಹೆಚ್ಚಿಸುವ ಇಂತಹ ಕಾರ್ಯ ಗಳನ್ನು ಯಾಂತ್ರಿಕವಾಗಿ ಮಾಡದೇ ಪ್ರತಿ ನಿತ್ಯ ಶಾಲೆಯಲ್ಲಿ ಅಳವಡಿಸಿ ಕೊಳ್ಳುತ್ತೇವೆ. ಶಾಲೆಯ ಎಲ್ಲಾ ಸಿಬ್ಬಂದಿ ವರ್ಗದವರು ಕೂಡ ಓದುವ ಹವ್ಯಾಸವನ್ನು ಮಕ್ಕಳಲ್ಲಿ ಬೆಳೆಸಲು ಆಸಕ್ತಿ ಹೊಂದಿದ್ದಾರೆ ಎಂದು ತಿಳಿಸಿದರು.
ಶಿಕ್ಷಕರಾದ ಅಕ್ಕಮಹಾದೇವಿ, ಹಾಲಮ್ಮ, ಅಶ್ವಿನಿ ಎ, ರಮ್ಯಶ್ರೀ ಎನ್., ನಾಗರಾಜ ಕೆ., ರವಿಕುಮಾರ್ ರವರು ಮಕ್ಕಳಿಗೆ ಕುವೆಂಪು ವಿಚಾರಗಳು, ಈ ಸೋಪನ ನೀತಿ ಕಥೆಗಳು, ಆರೋಗ್ಯದಲ್ಲಿ ಯೋಗಾಸನ, ಪಂಚತಂತ್ರ ಕಥೆಗಳು, ಮೂಢನಂಬಿಕೆ ವಿರುದ್ಧ ಹೋರಾಟ, ಆವಂತಿ ಕಥೆಗಳ ಪುಸ್ತಕಗಳನ್ನು ಪರಿಚಯಿಸಿ ಓದಲು ಪ್ರೇರೇಪಿಸಿದರು.
ಕ್ಲಸ್ಟರ್ನ ವಿಠಲಾಪುರ, ಅಣಬೇರು ಹಾಗೂ ರಾಮಗೊಂಡನಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಓದುವ ಅಭಿಯಾನ ಪ್ರಾರಂಭವಾಯಿತು.