ಮಲೇಬೆನ್ನೂರು, ಆ. 13- ಇಲ್ಲಿನ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಪುರಸಭೆ ಮುಖ್ಯಾಧಿಕಾರಿ ಹಾಗೂ ಪೌರ ಕಾರ್ಮಿಕರಿಗೆ ನಿನ್ನೆ ಹಮ್ಮಿಕೊಂಡಿದ್ದ ರಕ್ಷಾಬಂಧನ ಮತ್ತು ಅಭಿನಂದನಾ ಕಾರ್ಯಕ್ರಮವನ್ನು ಈಶ್ವರೀಯ ವಿಶ್ವವಿದ್ಯಾಲಯದ ಗದಗ ಮತ್ತು ಧಾರವಾಡ ಕೇಂದ್ರಗಳ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಜಯಂತಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಯಂತಿ ಅವರು, ದೃಷ್ಟಿ ಪರಿವರ್ತನೆ ಮಾಡುವುದು ಮತ್ತು ದುರ್ಗುಣ, ದುರಾಲೋಚನೆಯಿಂದ ಆಚೆ ಸರಿದು ಸೌಹಾರ್ದತೆ, ಶಾಂತಿ ಸಂದೇಶ ಸಾರುವುದನ್ನು ತಿಳಿಸುವುದೇ ರಕ್ಷಾಬಂಧನದ ಉದ್ದೇಶವಾಗಿದೆ. ಆಹಾರಕ್ಕೆ ಕ್ರಿಮಿ ಬಾರದಿರಲು, ಕೆಡದಿರಲು ಲಕ್ಷ್ಮಣರೇಖೆ ಹಾಕುತ್ತೇವೆ. ರಾಜ್ಯಕ್ಕೆ ಕೋಟೆ, ಮನೆಗೆ ಗೋಡೆ, ಕಾಲುಗಳಿಗೆ ಪಾದರಕ್ಷೆ ಹಾಕುವಂತೆ ಸಹೋದರಿಯರಿಗೆ ಸಹೋದರರು ರಕ್ಷಣೆಯ ಬಂಧವಾಗಿದ್ದಾರೆ ಎಂದು ತಿಳಿಸಿದರು. ಮನೆಯಲ್ಲಿ ದೇವರ ಕೊಠಡಿ ಆತ್ಮಕ್ಕೆ ಶಕ್ತಿ ನೀಡುವ ಸ್ಥಳವಾಗಿದೆ. ಸರ್ವ ಆತ್ಮಗಳು ದೇವರ ಕೋಣೆಯಲ್ಲಿ ಕುಳಿತು ಧ್ಯಾನದಿಂದ ಮನಸ್ಸನ್ನು ಚಾರ್ಜ್ ಮಾಡಿಕೊಳ್ಳ ಬೇಕು ಎಂದರು.
ಮುಖ್ಯಾಧಿಕಾರಿ ಹನುಮಂತಪ್ಪ ಭಜಕ್ಕನವರ್ ಮಾತನಾಡಿ, ಬ್ರಹ್ಮಾಕುಮಾರಿಯರು ಪುರಸಭೆ ಸಿಬ್ಬಂದಿಗೆ ಪರಮಾತ್ಮನ ಸಂದೇಶ ನೀಡಿ, ರಕ್ಷಾ ಬಂಧನ ಧಾರಣೆ ಮಾಡಿರುವ ಈ ವಿಶೇಷ ಸಂದರ್ಭವನ್ನು ನಾವು ಇಂದಿಗೂ ಮರೆಯುವುದಿಲ್ಲ ಎಂದರು.
ಹಿರೇಕೆರೂರಿನ ವಿ ವಿ ಕೇಂದ್ರದ ರಾಜಯೋಗಿನಿ ಬ್ರಹ್ಮಾಕುಮಾರಿ ಸೌಭಾಗ್ಯ ಅವರು, ಆತ್ಮ ಮತ್ತು ಪರಮಾತ್ಮನ ವ್ಯತ್ಯಾಸ ಹಾಗೂ ತರಗತಿಯ ಕೋರ್ಸ್ ತಿಳಿಸಿಕೊಟ್ಟರು.
ಈಶ್ವರೀಯ ವಿಶ್ವವಿದ್ಯಾಲಯದ ಮಲೇಬೆನ್ನೂರು ಶಾಖೆಯ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಶಾಂತಾಜಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಬಿ. ಪಂಚಣ್ಣ ದೊಡ್ಡ ಬಸಣ್ಣ, ಹೆಚ್. ಎಸ್. ವೀರಭದ್ರಯ್ಯ, ರುದ್ರಯ್ಯ, ಪುರಸಭೆ ಆರೋಗ್ಯ ನಿರೀಕ್ಷಕರಾದ ನವೀನ್, ಶಿವರಾಜ್ ಕೂಸಗಟ್ಟಿ, ಅವಿನಾಶ್, ಪೌರ ಕಾರ್ಮಿಕರಾದ ಫತಾವುಲ್ಲಾ, ಆಂಜನೇಯ, ಕಿಜರ್ ಅಲಿ, ವೆಂಕಟೇಶ್ ಮತ್ತಿತರರು
ತಮ್ಮ ಅನಿಸಿಕೆ ಹಂಚಿಕೊಂಡರು.