ಅತ್ಯುನ್ನತ ಸಂಶೋಧನಾ ಚಟುವಟಿಕೆಗೆ ಸಂದ ಮನ್ನಣೆ
ದಾವಣಗೆರೆ, ಆ. 13- ಭಾರತ ಸರ್ಕಾರದ ಶಿಕ್ಷಣ ಮಂತ್ರಾಲಯವು ಪ್ರತಿ ವರ್ಷ ಬಿಡುಗಡೆ ಮಾಡುವ ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟು-2024 (ಎನ್ಐಆರ್ಎಫ್)ರ ಪಟ್ಟಿಯಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯವು ಮುಂಚೂಣಿ ಸ್ಥಾನ ಪಡೆದಿದೆ.
ಎನ್ಐಆರ್ಎಫ್ ಸಿದ್ಧಪಡಿಸಿರುವ ರಾಜ್ಯ ಸರ್ಕಾರಿ ವಿಶ್ವವಿದ್ಯಾಲಯಗಳ ವಿಭಾಗದಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯವು 51ರಿಂದ 100ರ ಶ್ರೇಣಿ ಪಟ್ಟಿಯಲ್ಲಿ ಸ್ಥಾನ ಗಳಿಸಿ, ಗಮನ ಸೆಳೆದಿದೆ. ವಿಶ್ವವಿದ್ಯಾಲಯವು ರಾಜ್ಯದ ಕುವೆಂಪು, ತುಮಕೂರು, ಧಾರವಾಡ ವಿಶ್ವವಿದ್ಯಾಲಯಗಳೊಂದಿಗೆ ಪ್ರಮುಖ ಸ್ಥಾನದಲ್ಲಿ ಗುರುತಿಸಿಕೊಂಡಿದೆ.
ದಾವಣಗೆರೆ ವಿಶ್ವವಿದ್ಯಾನಿಲಯವು ಶೈಕ್ಷಣಿಕವಾಗಿ ಸಂಶೋಧನೆ, ಬೋಧನೆ, ಸಂಶೋಧನಾ ಯೋಜನೆಗಳು, ಪೇಟೆಂಟ್, ಸಂಶೋಧನಾ ನಾವೀನ್ಯತೆ, ವಿಸ್ತರಣಾ ಚಟುವಟಿಕೆಗಳ ಮಾನದಂಡಗಳಲ್ಲಿ ಉತ್ತಮ ಅಂಕ ಗಳಿಸಿದ್ದು, ಶ್ರೇಯಾಂಕ ಪಟ್ಟಿಯಲ್ಲಿ ಸ್ಥಾನ ಪಡೆಯಲು ನೆರವಾಗಿದೆ. ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರ 600ಕ್ಕೂ ಸಂಶೋಧನಾ ಪ್ರಬಂಧಗಳು ಜಾಗತಿಕ ಮಟ್ಟದ ಸಂಶೋಧನಾ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ.
ವಿಶ್ವವಿದ್ಯಾನಿಲಯದ ಎಲ್ಲ ವಿಭಾಗಗಳ ಪ್ರಾಧ್ಯಾಪಕರು ಸಂಘಟನಾತ್ಮಕವಾಗಿ, ಸಾಂಘಿಕವಾಗಿ ಕೈಗೊಂಡ ಸಂಶೋಧನಾ ಚಟುವಟಿಕೆಗಳು, ಸಂಶೋಧನಾ ಯೋಜನೆಗಳ ಕಾರ್ಯಾನುಷ್ಠಾನಗಳಿಂದಾಗಿ ವಿಶ್ವವಿದ್ಯಾನಿಲಯವು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಇಂಥ ಮಹತ್ತರ ಸಾಧನೆ ಮಾಡಿರುವುದು ದಾವಣಗೆರೆ ವಿಶ್ವವಿದ್ಯಾನಿಲಯದ ಹೆಮ್ಮೆಯಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಶೋಧನೆಗಳ ಮೂಲಕ ಉನ್ನತ ಶ್ರೇಯಾಂಕ ಪಡೆಯಲು ಪ್ರೇರಣೆಯಾಗಿದೆ ಎಂದು ಕುಲಪತಿ ಪ್ರೊ.ಬಿ.ಡಿ.ಕುಂಬಾರ ತಿಳಿಸಿದ್ದಾರೆ.
ಎನ್ಐಆರ್ಎಫ್ ಶ್ರೇಯಾಂಕ ಪಟ್ಟಿಯಲ್ಲಿ ಸ್ಥಾನ ಪಡೆಯಲು ಕಳೆದ ಐದು ವರ್ಷಗಳಿಂದ ನಡೆಸಿದ ನಿರಂತರ ಪ್ರಯತ್ನವು ಈ ಬಾರಿ ಕೈಗೂಡಿದೆ. ಸಂಶೋಧನೆಯಲ್ಲಿ ಉತ್ತಮ ಸಾಧನೆ ಮಾಡಿದ್ದರೂ ಉತ್ತಮ ಗುಣಮಟ್ಟದ ಪ್ರಯೋಗಾಲಯವೂ ಸೇರಿದಂತೆ ಕನಿಷ್ಠ ಮೂಲಸೌಲಭ್ಯಗಳ ಕೊರತೆಯಿಂದ ಇತರೆ ಮಾನದಂಡಗಳಲ್ಲಿ ವೈಫಲ್ಯತೆ ಕಾಣುತ್ತಿತ್ತು. ವಿಶ್ವವಿದ್ಯಾನಿಲಯದ ಗಣಿತಶಾಸ್ತ್ರ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ.ಬಿ.ಸಿ.ಪ್ರಸನ್ನಕುಮಾರ, ಐಕ್ಯೂಎಸಿ ನಿರ್ದೇಶಕ ಪ್ರೊ.ಗೋವಿಂದಪ್ಪ, ಪಿಎಂಇ ನಿರ್ದೇಶಕ ಪ್ರೊ.ಡಿ.ಜಿ.ಪ್ರಕಾಶ ಅವರ ನೇತೃತ್ವದ ಸಮಿತಿಯು ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸಿದೆ. ಸಮಿತಿ ಸದಸ್ಯರೆಲ್ಲರ ಸಾಂಘಿಕ ಪ್ರಯತ್ನವೂ ವಿಶ್ವವಿದ್ಯಾನಿಲಯದ ಶ್ರೇಯಾಂಕ ಸಾಧನೆಗೆ ಪೂರಕವಾಗಿದೆ ಎಂದು ಪ್ರೊ.ಕುಂಬಾರ ಶ್ಲ್ಯಾಘಿಸಿದ್ದಾರೆ.
ಮುಂದಿನ ದಿನಗಳಲ್ಲಿ ಸಂಶೋಧನೆಗೆ ಅಗತ್ಯವಿರುವ ಪ್ರಯೋಗಾಲಯ ಹಾಗೂ ಇನ್ನಿತರೆ ಎಲ್ಲ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ವಿದ್ಯಾರ್ಥಿಗಳನ್ನೂ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವ ಪ್ರಾಯೋಗಿಕ ಶಿಕ್ಷಣಕ್ಕೂ ವಿಶ್ವವಿದ್ಯಾನಿಲಯವು ಆದ್ಯತೆ ನೀಡಲಿದೆ. ಇದಕ್ಕೆ ಪೂರಕವಾಗಿ ವಿದೇಶಿ ವಿಶ್ವವಿದ್ಯಾಲಯಗಳ ಜೊತೆಗೆ ಸಂಶೋಧನಾ ಒಡಂಬಡಿಕೆಗೂ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.