ದಾವಣಗೆರೆ, ಜು. 24 – ಕೃಷಿಗೆ ಪ್ರತ್ಯೇಕ ಮುಂಗಡ ಪತ್ರ ರೂಪಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಂಯುಕ್ತ ಹೋರಾಟ-ಕರ್ನಾಟಕ ಸಂಘಟನೆಯಿಂದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಶುಕ್ರವಾರ ಪ್ರತಿಭಟನೆ ನಡೆಸಿ, ನಂತರ ಸಂಸದರ ಕಚೇರಿಗೆ ತೆರಳಿ ಅಲ್ಲಿನ ಸಿಬ್ಬಂದಿ ಮೂಲಕ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಮನವಿ ಸಲ್ಲಿಸಲಾಯಿತು.
ಕೃಷಿಯ ಕಾರ್ಪೊರೇಟೀಕರಣ ಮಾಡಕೂಡದು. ಕೃಷಿ ಉತ್ಪಾದನೆ, ವ್ಯಾಪಾರ ಮತ್ತು ಆಹಾರ ಸಂಸ್ಕರಣೆಯಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಪ್ರವೇಶ ನೀಡಬಾರದು. ಮುಕ್ತ ವ್ಯಾಪಾರ ಒಡಂಬಡಿಕೆಗಳನ್ನು ಮಾಡಿಕೊಳ್ಳಬಾರದು. ಭಾರತವು ಕೃಷಿಗೆ ಸಂಬಂಧಿಸಿ ಡಬ್ಲುೃಟಿಒ ಒಪ್ಪಂದದಿಂದ ಹೊರಬರಬೇಕು. ಕೇಂದ್ರ ಸರ್ಕಾರದ ಸಹಕಾರ ಇಲಾಖೆಯನ್ನು ರದ್ದುಗೊಳಿಸಬೇಕು.
ಎಲ್ಲ ಬೆಳೆಗಳಿಗೂ ಕಾಯ್ದೆಬದ್ಧ ಕನಿಷ್ಠ ಬೆಂಬಲ ಬೆಲೆ ಹಾಗೂ ಸಂಪೂರ್ಣ ಉತ್ಪನ್ನದ ಸಂಗ್ರಹಣೆಯ ಖಾತ್ರಿ ನೀಡಬೇಕು. ರೈತರು, ಕೃಷಿ ಕಾರ್ಮಿಕರನ್ನು ಸಾಲದಶೂಲದಿಂದ ಹೊರತರಲು ಸಮಗ್ರ ಸಾಲಮನ್ನಾ ಮಾಡಬೇಕು. ವಿದ್ಯುಚ್ಚಕ್ತಿ ವಲಯದ ಖಾಸಗೀಕರಣ ಹಾಗೂ ಪ್ರೀಪೇಯ್ಡ್ ಸ್ಮಾರ್ಟ್ ಮೀಟರ್ಗಳ ಪ್ರಸ್ತಾಪ ಕೈಬಿಡಬೇಕು.
ರಸಗೊಬ್ಬರ, ಬೀಜ, ಕ್ರಿಮಿನಾಶಕ, ನೀರಾವರಿ ಯಂತ್ರೋಪಕರಣಗಳು, ಬಿಡಿಭಾಗಗಳು, ಟ್ರಾೃಕ್ಟರ್ನಂತಹ ಕೃಷಿ ಒಳಸುರಿಗಳ ಮೇಲೆ ಜಿಎಸ್ಟಿ ಹೇರದೆ ಸಬ್ಸಿಡಿ ಜಾರಿಗೊಳಿಸಬೇಕು. ಸರ್ಕಾರಿ ಯೋಜನೆಗಳ ಲಾಭವನ್ನು ಪಾಲು- ಬೆಳೆಗಾರರು, ಗೇಣಿದಾರ ರೈತರಿಗೂ ವಿಸ್ತರಿಸಬೇಕು. ಎಲ್ಲ ಕೃಷಿ, ಪಶು ಸಂಗೋಪನೆ ವ್ಯವಸ್ಥೆಗಳಿಗೂ ಸಾರ್ವಜನಿಕ ವಲಯದಲ್ಲಿ ವಿಮೆ ಸೌಲಭ್ಯ ಕಲ್ಪಿಸಬೇಕು. ಕಾರ್ಪೊರೇಟ್ ಪರವಾದ ಪಿಎಂಎಫ್ಬಿವೈ ಯೋಜನೆ ರದ್ದುಗೊಳಿಸಬೇಕು.
ರೈತರು, ಕೃಷಿ ಕಾರ್ಮಿಕರಿಗೆ ಪಿಂಚಣಿ ಹಕ್ಕನ್ನು ಮಾನ್ಯಗೊಳಿಸಬೇಕು. 60 ವರ್ಷ ವಯಸ್ಸಿನ ನಂತರ ತಿಂಗಳಿಗೆ 10 ಸಾವಿರ ರೂ. ನೆರವು ಕಲ್ಪಿಸಬೇಕು. ಕಾಡುಪ್ರಾಣಿಗಳ ಹಾವಳಿಗೆ ಶಾಶ್ವತ ಪರಿಹಾರ ರೂಪಿಸಬೇಕು. ಮಾನವ ಜೀವ ಹಾನಿಗೆ 1 ಕೋಟಿ ಊ. ಬೆಳೆ ಮತ್ತು ಸಾಕುಪ್ರಾಣಿಗಳ ನಷ್ಟಕ್ಕೆ 2 ಕೋಟಿ ರೂ. ಪರಿಹಾರ ನೀಡಬೇಕು. ಜನತೆ ಮೇಲೆ ಹೇರಲಾದ ಮೂರು ಕ್ರಿಮಿನಲ್ ಕಾಯ್ದೆಗಳನ್ನು ರದ್ದು ಪಡಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯ ಗೌರವಾಧ್ಯಕ್ಷ ಕುರುವ ಗಣೇಶ್, ರಾಜ್ಯ ಉಪಾಧ್ಯಕ್ಷ ಹೊನ್ನೂರು ಮುನಿಯಪ್ಪ, ಜಿಲ್ಲಾಧ್ಯಕ್ಷ ಪಿ.ವಿ. ಮರುಳಸಿದ್ದಯ್ಯ, ಎಐಕೆಎಸ್ ಅಧ್ಯಕ್ಷ ಐರಣಿ ಚಂದ್ರು, ಜಿಲ್ಲಾಧ್ಯಕ್ಷ ಆವರಗೆರೆ ಉಮೇಶ್, ಮಂಜುನಾಥ್, ಸತೀಶ್, ಹೊನ್ನೂರು ರಾಜು, ಕೆ,ಜಿ.ಶೇಖರಪ್ಪ, ಕಣಿವೆಬಿಳಚಿ ಅಣ್ಣಪ್ಪ, ಮಾಯಕೊಂಡ ಬೀರಪ್ಪ, ನಾಗರಾಜ್, ದೊಡ್ಡೇರಿ ಬಸವರಾಜಪ್ಪ ಇತರರಿದ್ದರು.