ದಾವಣಗೆರೆ, ಜು.9- ಗೌಡರ ಮಲ್ಲಿಕಾರ್ಜುನಪ್ಪ ಮತ್ತು ತುಮಕೂರಿನ ಮಾಜಿ ಲೋಕಸಭಾ ಸದಸ್ಯ ಜಿ.ಎಸ್ ಬಸವರಾಜು ಅವರ ಒಡನಾಟದಲ್ಲಿ ಜಿಎಂಐಟಿ ಕಾಲೇಜು ಸ್ಥಾಪನೆಯಾಯಿತು ಎಂದು ತುಮಕೂರು ನಗರದ ಶಾಸಕರಾದ ಜ್ಯೋತಿ ಗಣೇಶ್ ಹೇಳಿದರು.
ನಗರದ ಜಿ.ಎಂ ವಿಶ್ವವಿದ್ಯಾಲಯದ ಹಾಲಮ್ಮ ಸಭಾಂಗಣದಲ್ಲಿ ಕಳೆದ ವಾರ ಏರ್ಪಾಡಾಗಿದ್ದ ಲಿಂಗೈಕ್ಯ ಗೌಡರ ಮಲ್ಲಿಕಾರ್ಜುನಪ್ಪನವರ 95ನೇ ಜನ್ಮ ವಾರ್ಷಿಕೋತ್ಸವ ಸಮಾರಂಭದಲ್ಲಿ ಲಿಂಗೈಕ್ಯರನ್ನು ಸ್ಮರಿಸಿ ಮಾತನಾಡಿದರು.
ಈ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವಲ್ಲಿ ಜಿಎಂ ಸಂಸ್ಥೆ ಹೆಮ್ಮರವಾಗಿ ಬೆಳೆದಿರುವುದು ನಮ್ಮೆಲ್ಲರಿಗೂ ಹೆಮ್ಮೆ ಎಂದು ತಿಳಿಸಿದರು.
ಮಾಜಿ ಕೇಂದ್ರ ಸಚಿವ ಜಿ.ಎಂ. ಸಿದ್ದೇಶ್ವರ ಮಾತನಾಡಿ, ನಮ್ಮ ತಂದೆಯವರ ಆಸೆಯಂತೆ ಅವರು ಕಟ್ಟಿದ ಈ ಶಿಕ್ಷಣ ಸಂಸ್ಥೆ ಇಂದು ಸಾಕಷ್ಟು ಆಸರೆಯಾಗಿ ಶಿಕ್ಷಣ ನೀಡುತ್ತಾ ಮಧ್ಯ ಕರ್ನಾಟಕ ಭಾಗದ ಅತಿ ದೊಡ್ಡ ಸಂಸ್ಥೆಯಾಗಿ ಹೊರಹೊಮ್ಮಿದೆ ಎಂದು ಹೇಳಿದರು.
ಇದೇ ವೇಳೆ ಪಿ.ಎಚ್.ಡಿ ಪಡೆದ ಅಧ್ಯಾಪಕರುಗಳಿಗೆ ಸನ್ಮಾನಿಸಿದರು.
ನಿವೃತ್ತ ನ್ಯಾಯಮೂರ್ತಿ ಡಾ.ಜಸ್ಟಿಸ್ ಎಚ್. ಬಿ. ಪ್ರಭಾಕರ್, ಜಿ.ಎಂ ವಿವಿಯ ಕುಲಪತಿ ಡಾ.ಎಸ್.ಆರ್. ಶಂಖಪಾಲ್, ಕಾಲೇಜಿನ ಪ್ರಾಚಾರ್ಯ ಡಾ.ಎಂ.ಬಿ. ಸಂಜಯ್ ಪಾಂಡೆ, ಗಾಯತ್ರಿ ಸಿದ್ದೇಶ್ವರ, ಜಿ.ಎಂ. ವಿವಿಯ ಕುಲಾಧಿಪತಿ ಜಿ.ಎಂ ಲಿಂಗರಾಜು, ಆಡಳಿತಾಧಿಕಾರಿ ವೈ.ಯು. ಸುಭಾಷ್ ಚಂದ್ರ, ಆಡಳಿತ ಮಂಡಳಿ ಸದಸ್ಯ ಡಾ.ಕೆ. ದಿವ್ಯಾನಂದ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.