ಶಾಲಾ ಕೊಠಡಿ ಧ್ವಂಸ : ದೂರು ದಾಖಲಿಸಲು ಶಾಸಕರ ಸೂಚನೆ

ಶಾಲಾ ಕೊಠಡಿ ಧ್ವಂಸ : ದೂರು ದಾಖಲಿಸಲು ಶಾಸಕರ ಸೂಚನೆ

ಹರಿಹರ, ಜು. 9- ತಾಲ್ಲೂಕಿನ ಮಲೇಬೆನ್ನೂರಿನಲ್ಲಿ ಇಂದಿರಾ ಕ್ಯಾಂಟೀನ್‌ ನಿರ್ಮಿಸಲು ಶಾಲಾ ಕೊಠಡಿ ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸುವಂತೆ ಬಿಇಓ ಹನುಮಂತಪ್ಪ ಅವರಿಗೆ ಶಾಸಕ ಬಿ.ಪಿ. ಹರೀಶ್‌ ಸೂಚನೆ ನೀಡಿದರು.

ನಗರದ ತಾಲ್ಲೂಕು ಪಂಚಾಯತ್‌ ಸಭಾಂಗಣದಲ್ಲಿ ಸೋಮವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅಭಿವೃದ್ಧಿ ಕುರಿತು ಪರಿಶೀಲನೆ ನಡೆಸಿದರು

`ನನ್ನ ಗಮನಕ್ಕೆ ಬರದಂತೆ ಕಳೆದ 15 ದಿನಗಳ ಹಿಂದೆಯೇ ಶಾಲಾ ಕೊಠಡಿ ಧ್ವಂಸ ಕಾರ್ಯ ನಡೆದಿದೆ ಎಂದು ಬಿಇಓ ಹೇಳಿದಾಗ, ಕೊಠಡಿ ಧ್ವಂಸಗೊಳಿಸಿ ಇಷ್ಟು ದಿನ ಕಳೆದರೂ ದೂರು ದಾಖಲಿಸದೇ ಇರುವುದಕ್ಕೆ ಏನಿದೆ ಒಳ ಮರ್ಮ ? ಎಂದು ಶಾಸಕರು ಪ್ರಶ್ನಿಸಿದರು.

ತಕ್ಷಣವೇ ಈ ಕುರಿತು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಆ ಶಾಲೆಯ ಮುಖ್ಯ ಶಿಕ್ಷಕರಿಂದ ಮಾಹಿತಿ ಪಡೆದು ದೂರು ದಾಖಲಿಸಿ ಎಂದು ಸೂಚಿಸಿದರು.

ನಗರದ ಶೇ.80ರಷ್ಟು ಬಡಾವಣೆಗಳು ನಿಯಮಾನುಸಾರ ಆಗದೇ ಇರುವುದರಿಂದ ಮನೆ ನಿರ್ಮಿಸುವುದಕ್ಕಾಗಿ ಲೈಸೆನ್ಸ್‌ ಪಡೆಯಲು ಇಲ್ಲಿನ ನಿವಾಸಿಗಳಿಗೆ ತೊಂದರೆ ಆಗುತ್ತಿದೆ. ಈ ಕುರಿತು ದೂಡಾದ ಸಭೆಯಲ್ಲಿ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ತಹಶೀಲ್ದಾರ್‌, ನಗರಸಭೆ, ತಾಪಂ ಇಓ, ಸರ್ವೆ ಇಲಾಖೆ ಹಾಗೂ ನಿವೃತ್ತ ಸರ್ವೆ ಅಧಿಕಾರಿಗಳನ್ನು ಕೆಲಸಕ್ಕೆ ನೇಮಿಸಿಕೊಂಡು ಸರ್ವೆ ಕಾರ್ಯ ಮುಗಿಸುವಂತೆ ತಿಳಿಸಿದರು.

ಡೆಂಗ್ಯೂ ಹಾವಳಿ ಹೆಚ್ಚಾಗಿದ್ದರಿಂದ ಸಾರ್ವಜನಿಕರ ಸುರಕ್ಷತೆಗಾಗಿ ಆರೋಗ್ಯ ಇಲಾಖೆ ಜಾಗೃತಿ ಕಾರ್ಯಕ್ರಮ ನಡೆಸಬೇಕು ಮತ್ತು ನಗರಸಭೆ ಅಧಿಕಾರಿಗಳು ಮತ್ತು ಪಿಡಿಓಗಳು ಸ್ವಚ್ಛತೆಗೆ ಹೆಚ್ಚು ಗಮನ ಕೊಡಬೇಕೆಂದು ಸೂಚನೆ ನೀಡಿದರು.

ತಾಲ್ಲೂಕಿನಲ್ಲಿ 5 ಡೆಂಘಿ ಹಾಗೂ 5 ಚಿಕುನ್ ಗುನ್ಯಾ ಪ್ರಕರಣಗಳು ದಾಖ ಲಾಗಿದ್ದು, ತಾಲ್ಲೂಕಿನ ಪ್ರತಿ ಗ್ರಾಮದಲ್ಲೂ ಲಾರ್ವಾ ಸರ್ವೆ ಮಾಡಲಾಗಿದೆ. ಯುವಕನೊಬ್ಬ ಡೆಂಗ್ಯೂ ಸೋಂಕಿಗೆ ಬಲಿಯಾದ ಮಾಹಿತಿ ನಮ್ಮ ಗಮನಕ್ಕೆ ಬಂದಿಲ್ಲ ಎಂದು ಆರೋಗ್ಯ ಇಲಾಖೆಯ ಅಧಿಕಾರಿ ಅಬ್ದುಲ್ ಖಾದರ್ ತಿಳಿಸಿದರು.

ತಾಲ್ಲೂಕಿನಲ್ಲಿ ಎಷ್ಟು ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಲಾಗಿದೆ ಮತ್ತು ಎಷ್ಟು ಹಣ ಅವ್ಯವಹಾರ ನಡೆದಿದೆ ಎಂದು ಶಾಸಕರು ಪ್ರಶ್ನಿಸಿದಾಗ, ಕಟ್ಟಡ ಕಾರ್ಮಿಕರ ತಪಾಸಣೆ ರಾಜ್ಯಮಟ್ಟದಲ್ಲಿ ಟೆಂಡರ್ ಆಗಿರುತ್ತದೆ. ತಾಲ್ಲೂಕಿನಲ್ಲಿ 28,323 ಕಟ್ಟಡ ಕಾರ್ಮಿಕರ ನೋಂದಣಿ ಇದ್ದು, ಅದರಲ್ಲಿ 730 ಜನ ಮಾತ್ರ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಕಿಟ್ ಪಡೆದಿದ್ದಾರೆ ಎಂದು ಕಾರ್ಮಿಕ ಇಲಾಖೆಯ ಅಧಿಕಾರಿ ಕವಿತಾ ಹೇಳಿದರು.

ತಾ.ಪಂ. ಇಓ ರಾಮಕೃಷ್ಣಪ್ಪ, ತಾಲ್ಲೂಕಿನಲ್ಲಿ ಎಸ್ಟಿ ಹಾಸ್ಟೆಲ್ ಮತ್ತು ಇನ್ನೂ ಹೆಚ್ಚುವರಿ ಹಾಸ್ಟೆಲ್ ಅವಶ್ಯಕತೆ ಇರುವುದರಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.

ಈ ವೇಳೆ ತಹಶೀಲ್ದಾರ್ ಗುರುಬಸವ ರಾಜ್, ಕೃಷಿ ಇಲಾಖೆಯ ನಾರಾಯಣಗೌಡ, ಲೋಕೋಪಯೋಗಿ ಇಲಾಖೆ ಶಿವಮೂರ್ತಿ, ಬೆಸ್ಕಾಂ ಇಲಾಖೆಯ ರಮೇಶ್ ನಾಯಕ, ಬಿಸಿಎಂ ಇಲಾಖೆ ಆಸ್ಮಾ ಬಾನು, ತೋಟಗಾರಿಕೆ ಇಲಾಖೆ ಶಶಿಧರ್, ಪಶುಪಾಲನೆ ಇಲಾಖೆ ಸಿದ್ದೇಶ್, ಡಾ. ಹನುಮನಾಯ್ಕ್, ನಗರಸಭೆ ಎಇಇ ತಿಪ್ಪೇಸ್ವಾಮಿ, ಆಹಾರ ಇಲಾಖೆಯ ಪರಮೇಶ್ವರಪ್ಪ, ಅಬಕಾರಿ ಇಲಾಖೆಯ ಅಧಿಕಾರಿ ಶೀಲಾ, ಕಾರ್ಮಿಕ ಇಲಾಖೆಯ ಅಧಿಕಾರಿ ಕವಿತಾ, ಸಿಡಿಪಿಓ ಇಲಾಖೆಯ ಪೂರ್ಣಿಮಾ ,ಆರ್‌ಟಿಓ ಇಲಾಖೆ ಶಶಿಧರ್, ತಾಪಂ ಇಲಾಖೆಯ ಲೆಕ್ಕಾಧಿಕಾರಿ ಲಿಂಗರಾಜ್, ಆರ್.ಜಿ. ಪೂಜಾ, ಕಿರಣ್  ಮತ್ತು ಇತರರಿದ್ದರು.

error: Content is protected !!