ಕಂಪನಿಗಳ ಕಲ್ಮಷ ನೀರು ರೈತರ ಜಮೀನಿಗೆ ಕ್ರಮ ಕೈಗೊಳ್ಳದಿದ್ದರೆ ಬೀಗ ಜಡಿದು ಹೋರಾಟ

ಕಂಪನಿಗಳ ಕಲ್ಮಷ ನೀರು ರೈತರ ಜಮೀನಿಗೆ   ಕ್ರಮ ಕೈಗೊಳ್ಳದಿದ್ದರೆ ಬೀಗ ಜಡಿದು ಹೋರಾಟ

ಗ್ರಾಮಸ್ಥರ ಪ್ರತಿಭಟನೆಯಲ್ಲಿ ರೈತ ಮುಖಂಡ ರವೀಂದ್ರಗೌಡ ಪಾಟೀಲ ಎಚ್ಚರಿಕೆ

ರಾಣೇಬೆನ್ನೂರು, ಮೇ 14 -ತಾಲ್ಲೂಕಿನ ಹನುಮನ ಹಳ್ಳಿ ಹತ್ತಿರ ಬೃಹದಾಕಾರದಲ್ಲಿ ನಿರ್ಮಾಣ ಗೊಂಡಿರುವ  ಎರಡು ಕಂಪನಿಗಳು ಹೊರಸೂಸುವ ರಾಸಾಯನಿಕ ಕಲ್ಮಷಯುಕ್ತ   ನೀರಿನಿಂದ ರೈತರು ಆತಂಕಕ್ಕೀಡಾಗಿದ್ದಾರೆ  ಎಂದು ರೈತ ಮುಖಂಡ ರವೀಂದ್ರಗೌಡ ಎಫ್. ಪಾಟೀಲ ದೂರಿದ್ದಾರೆ.   

ನೀರನ್ನು ಕಂಪನಿಯವರು ನೇರವಾಗಿ ಪಕ್ಕದಲ್ಲಿರುವ ದೊಡ್ಡ ಹಳ್ಳಕ್ಕೆ ಬಿಡುವುದರಿಂದ ಹಳ್ಳದ ಮುಖಾಂತರ ನೀರು ಪಕ್ಕದ ಕುಮದ್ವತಿ ಮತ್ತು ತುಂಗಭದ್ರಾ ನದಿಗಳನ್ನು ಸೇರುವುದರಿಂದ ರೈತರು ಹಳ್ಳ ಮತ್ತು ನದಿಯ ನೀರನ್ನು ತಮ್ಮ ಹೊಲಗಳಿಗೆ ಹಾಯಿಸುತ್ತಾರೆ. ಈ ರಾಸಾಯನಿಕಯುಕ್ತ ನೀರಿನಿಂದ   ರೈತರ ಫಲವತ್ತಾದ ಕೃಷಿ ಭೂಮಿ ಬರಡಾಗುತ್ತಿರುವ ಬಗ್ಗೆ ರೈತರಿಗೆ ಆತಂಕ ಒಂದು ಕಡೆಯಾದರೆ, ಈ ದುರ್ವಾಸನೆಯುಳ್ಳ ನೀರಿನಿಂದ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಎಲ್ಲಾ ಲಕ್ಷ್ಮಣಗಳು ಕಂಡು ಬರುತ್ತಿದ್ದು ಕೃಷಿಕರು, ಕೃಷಿ ಕಾರ್ಮಿಕರು ದುರ್ವಾಸನೆಗೆ ಹೆದರಿ ಕೃಷಿ ಚಟುವಟಿಕೆಯನ್ನೇ ಬಿಟ್ಟು ಗುಳೇ ಹೋಗುವ ವಾತಾವರಣ ನಿರ್ಮಾಣವಾಗಿದೆ.

ಹಾಗಾಗಿ ಯಾವುದೇ ಸಾಧಕ, ಬಾಧಕಗಳನ್ನು ತಿಳಿದುಕೊಳ್ಳದೇ  ಇಂತಹ ಅಪಾಯಕಾರಿ ಕಂಪನಿಗಳನ್ನು ಇಲ್ಲಿ ಸ್ಥಾಪನೆ ಮಾಡಲಿಕ್ಕೆ ಅನುಮತಿ ನೀಡಿರುವ ಸರ್ಕಾರ ಮತ್ತು ಜಿಲ್ಲಾಡಳಿತದ ನಿರ್ಲಕ್ಷ್ಯ ಮತ್ತು ಕರ್ತವ್ಯ ಲೋಪವೇ ಇದಕ್ಕೆ ಕಾರಣ ಎಂದು  ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.       

ಈ ಕಂಪನಿಗಳ ಆಸುಪಾಸಿನ   ಹನುಮನಹಳ್ಳಿ, ಮುದೇನೂರು, ಮಲಕನಹಳ್ಳಿ, ಕೃಷ್ಣಾಪುರ, ಮುಷ್ಟೂರು, ಹೊಳೆನ್ವೇರಿ ತೆರೇದಹಳ್ಳಿ, ನಾಗೇನಹಳ್ಳಿ ಗ್ರಾಮಗಳ ಗ್ರಾಮಸ್ಥರು ನಡೆಸುತ್ತಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ  ಅವರು ಮಾತನಾಡಿದರು.  

ಸರ್ಕಾರ ಮತ್ತು ಜಿಲ್ಲಾಡಳಿತ ಪರಿಸರ ಮತ್ತು ವಾಯುಮಾಲಿನ್ಯ ನಿಯಂತ್ರಣ ಮಂಡಳಿಗಳು ಈ ಕೂಡಲೇ ಈ ಬಗ್ಗೆ ತುರ್ತುಕ್ರಮ ಜರುಗಿಸಿ, ಕಂಪನಿಯವರ ಮೇಲೆ ಶಿಸ್ತು ಕ್ರಮ ಜರುಗಿಸಬೇಕು  ಎಂದು ಒತ್ತಾಯಿಸಿದರು. ಭೀಕರ ಬರಗಾಲದ ಮಧ್ಯೆ ರೈತರು ವಿಲಿವಿಲಿ ಒದ್ದಾಡುತ್ತಾ, ಆತ್ಮಹತ್ಯೆಯ ದಾರಿ ಹಿಡಿಯುತ್ತಿರುವು ದಕ್ಕೆ ಇಂಥ ಎಡಬಿಡಂಗಿ ಯೋಜನೆ ಗಳೂ ಕೂಡ ಕಾರಣವಾಗಿವೆ ಎಂದು  ಟೀಕಿಸಿರುವ ಪಾಟೀಲರು, ವಾರದೊಳಗೆ ಸಮಸ್ಯೆ ಬಗೆಹರಿಸದಿದ್ದರೆ ಕಾರ್ಖಾನೆಗೆ ಬೀಗ ಜಡಿದು ನ್ಯಾಯಕ್ಕಾಗಿ ಹೋರಾಡಲಾಗುವುದೆಂದು ಎಚ್ಚರಿಕೆ ನೀಡಿದರು. 

ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷರಾದ ರೇಖಾ ಮಂಜಪ್ಪ ಪುಟ್ಟಕ್ಕನವರ,  ರೈತ ಮುಖಂಡರಾದ ವಾಗೀಶ ದೊಡ್ಡಮನಿ, ಹರಿಹರಗೌಡ ಪಾಟೀಲ, ಬಸವರಾಜ ಯಲ್ಲಕ್ಕನವರ, ಮನ್ಮಥ ಎಸ್. ಕರಿಯಜ್ಜರ, ಉಲ್ಲಾಸ ಹಿರೇಮಠ ಮುಂತಾದವರು ಭಾಗವಹಿಸಿದ್ದರು.

error: Content is protected !!