ಅಸ್ಪೃಶ್ಯತೆಯಿಂದ ಕಾಪಾಡಿದ ಪಕ್ಷಕ್ಕೆ ಬೆಂಬಲಿಸಿ

ಅಸ್ಪೃಶ್ಯತೆಯಿಂದ ಕಾಪಾಡಿದ ಪಕ್ಷಕ್ಕೆ ಬೆಂಬಲಿಸಿ

ಮಾದಿಗ ಸಮುದಾಯದ ಸಭೆಯಲ್ಲಿ ಮಾಜಿ ಸಚಿವ ಹೆಚ್. ಆಂಜನೇಯ ಕರೆ

ದಾವಣಗೆರೆ, ಏ. 28- ಗಾಂಧೀಜಿ, ನೆಹರು ಅಂತಹ ಕಾಂಗ್ರೆಸ್ಸಿನ ನಾಯಕರು ನಮ್ಮ ಹಿರಿಯರನ್ನು ಅಸ್ಪೃಶ್ಯತೆಯಿಂದ ಕಾಪಾಡಿದ್ದಾರೆ. ಹೊರತು ಬಿಜೆಪಿಗರು ಅಲ್ಲ ಎಂದು ಮಾಜಿ ಸಚಿವ ಎಚ್. ಆಂಜನೇಯ ಹೇಳಿದರು.

ನಗರದ ಅಕ್ಕ ಮಹಾದೇವಿ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಮಾದಿಗ ಸಮುದಾಯದ ಚುನಾವಣಾ ಸಭೆಯಲ್ಲಿ ಅವರು ಮಾತನಾಡಿದರು.

ಮಾದಿಗ ಸಮುದಾಯದ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಅಪಾರ ಕೊಡುಗೆ ನೀಡಿದೆ ಆದ್ದರಿಂದ ನಮ್ಮ ಸಮಾಜವು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವ ಮೂಲಕ ಋಣ ತೀರಿಸಬೇಕು ಎಂದು ಹೇಳಿದರು.

ಮಾದಿಗರು ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಈಗ ನಾವೆಲ್ಲರೂ ಒಗ್ಗಟ್ಟಿನಿಂದ ಬಸವಣ್ಣನ ಕನಸನ್ನು ಸಾಕಾರಗೊಳಿಸಿದ ಹಾಗೂ ಸಮಸಮಾಜದ ಕನಸು ಕಂಡ ಕಾಂಗ್ರೆಸ್‌ಗೆ ಬೆಂಬಲ ನೀಡಬೇಕು ಎಂದರು.

ಶಾಮನೂರು ಕುಟುಂಬವು ಎಸ್.ಎಂ. ಕೃಷ್ಣ ಬಡಾವಣೆ ನಿರ್ಮಿಸಿ ಸೂರು ಕಲ್ಪಿಸಿದ್ದಾರೆ ಮತ್ತು ಚಿಕ್ಕಮ್ಮನಹಟ್ಟಿ ಬಡಾವಣೆಯಲ್ಲಿ 400 ನಿವೇಶನಗಳನ್ನು ಕೊಟ್ಟಿದ್ದಾರೆ. ಹಿಂದಿನಿಂದಲೂ ಅವಕಾಶ ವಂಚಿತ ಸಮುದಾಯಗಳ  ಪರ ಚಿಂತಿಸುವ ಶಾಮನೂರು ಕುಟುಂಬವನ್ನು ಗೆಲ್ಲಿಸಬೇಕು ಎಂದು ಕರೆ ನೀಡಿದರು.

ಬಿಜೆಪಿ ತನ್ನ ವಿಪಕ್ಷಗಳ ವಿರುದ್ಧ ಇಡಿ, ಸಿಬಿಐ, ಮೂಲಕ ದಬ್ಬಾಳಿಕೆ ಮಾಡುತ್ತಿದೆ, ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯಿದ್ದು, ಯಾವುದೇ ಕಾರಣಕ್ಕೂ ಹಿಂಜರಿಯಬಾರದು ಎಂದರು.

ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಮಾತನಾಡಿ, ಬಿಜೆಪಿಯು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ನಡೆದು ಕೊಳ್ಳುವ ಜತೆಗೆ ಐಟಿ ರೈಡ್ ಮಾಡಿಸುತ್ತಾ ಸರ್ವಾಧಿಕಾರದ ಆಡಳಿತ ಮಾಡುತ್ತಿದೆ ಎಂದರು.

ಪ್ರಧಾನ ಮಂತ್ರಿ ಮೋದಿ ಅವರು ಬಡವರಿಗೆ ಅನುಕೂಲ ಮಾಡದೇ ಕೇವಲ ಶ್ರೀಮಂತರನ್ನು ಉಳಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ದೂರಿದರು.

ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ, ಈ ಹಿಂದೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಎಚ್. ಆಂಜನೇಯ ಸಮಾಜ ಕಲ್ಯಾಣ ಮಂತ್ರಿ ಆಗಿದ್ದರು. ಆಗ ದಲಿತರ ಅಭಿವೃದ್ಧಿ ಆರಂಭವಾಯಿತು.ಈ ನಿಟ್ಟಿನಲ್ಲಿ ಪಕ್ಷದ ಋಣ ತೀರಿಸಲು ಕಾಂಗ್ರೆಸ್‌ಗೆ ಮತ ಹಾಕುವಂತೆ ಮನವಿ ಮಾಡಿದರು.

ಪಾಲಿಕೆ‌ ಸದಸ್ಯ ಉದಯ ಕುಮಾರ್, ನಿಂಗಪ್ಪ, ಎನ್.ನೀಲಗಿರಿಯಪ್ಪ, ಎಲ್.ಡಿ.ಗೋಣೆಪ್ಪ, ಸೋಮ್ಲಾಪುರ ಹನುಮಂತಪ್ಪ, ಸಿದ್ದನೂರು ಪ್ರಕಾಶ್,  ಜಿಪಂ ಮಾಜಿ ಉಪಾಧ್ಯಕ್ಷ ಶಿವಣ್ಣ, ಹರಿಹರ ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಹನುಮಂತಪ್ಪ, ರೈತ ಮುಖಂಡ ಹುಚ್ಚವ್ವನಹಳ್ಳಿ ಮಂಜುನಾಥ, ಬಿ.ಎಂ. ಹನುಮಂತಪ್ಪ, ಮಂಜುಳಮ್ಮ, ನಗರ ಸಭಾ ಮಾಜಿ ಸದಸ್ಯ ಮಲ್ಲಿಕಾರ್ಜುನ, ನಿವೃತ್ತ ಡಿವೈಎಸ್ಪಿ ರವಿ ನಾರಾಯಣ್, ಬಗರ್ ಹುಕ್ಕುಂ ಸಮಿತಿಯ ಶೇಖರಪ್ಪ ಇದ್ದರು.

error: Content is protected !!