ಸರ್ವಾಧಿಕಾರಿ ಪ್ರವೃತ್ತಿಯ ಬಿಜೆಪಿ ಸೋಲಿಸಿ

ಸರ್ವಾಧಿಕಾರಿ ಪ್ರವೃತ್ತಿಯ ಬಿಜೆಪಿ ಸೋಲಿಸಿ

ಕಾಂಗ್ರೆಸ್‌ ಪಕ್ಷದ ಎಸ್ಟಿ ಕಾರ್ಯಕರ್ತರ ಬೆಂಬಲ ಸಭೆಯಲ್ಲಿ ಮಾಜಿ ಸಂಸದ ಉಗ್ರಪ್ಪ ಕರೆ

ನೀವು ನನಗೆ ಹೆಚ್ಚಿನ ಸಹಕಾರ ನೀಡಿ ಗೆಲ್ಲಿಸಿದರೆ ತ್ರಿಬಲ್‌ ಇಂಜಿನ್‌ ಸರ್ಕಾರವಾಗಿ ಜಿಲ್ಲೆಯಲ್ಲಿ  ಕಾರ್ಯ ನಿರ್ವಹಿಸಬಹುದು.

– ಡಾ. ಪ್ರಭಾ ಮಲ್ಲಿಕಾರ್ಜುನ್‌, ಕಾಂಗ್ರೆಸ್‌ ಅಭ್ಯರ್ಥಿ

ದಾವಣಗೆರೆೇ, ಏ.28- ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುವ ಬಿಜೆಪಿಯ ಸರ್ವಾಧಿಕಾರಿ ಪ್ರವೃತ್ತಿ ತೊಲಗಿಸಲು ಈ ಬಾರಿ ಕಾಂಗ್ರೆಸ್‌ ಪಕ್ಷವನ್ನು ಗೆಲ್ಲಿಸಬೇಕೆಂದು ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ ಹೇಳಿದರು. 

ನಗರದ ಸಾಯಿ ಮಂದಿರ ಸಮುದಾಯ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್‌ ಪಕ್ಷದ ಎಸ್ಟಿ ಕಾರ್ಯಕರ್ತರ ಬೆಂಬಲ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಂವಿಧಾನ ಉಳಿಸಿಕೊಳ್ಳಲು ಹಾಗೂ ಪ್ರಜಾಪ್ರಭುತ್ವವನ್ನು ರಕ್ಷಿಸುವ ಶಕ್ತಿ ನಿಮ್ಮಲ್ಲಿದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯ ಎಸ್ಟಿ ಸಮುದಾಯ ಕಾಂಗ್ರೆಸ್‌ ಪಕ್ಷ ಗೆಲ್ಲಿಸುವ ಪಣ ತೊಡಬೇಕು ಎಂದು ಹೇಳಿದರು. 

ಸಂವಿಧಾನ ಇರದಿದ್ದರೆ ಮೀಸಲಾತಿ ಇರುತ್ತಿರಲಿಲ್ಲ, ಈ ನಿಟ್ಟಿನಲ್ಲಿ 1991ರಲ್ಲಿ ಕಾಂಗ್ರೆಸ್‌ ಸರ್ಕಾರವು ಸಂವಿಧಾನದ ಸಹಾಯದಿಂದ 51 ಜಾತಿಗಳನ್ನು ಎಸ್ಟಿಗೆ ಸೇರಿಸಿ ಈ ಸಮುದಾಯದ ಹಿತ ಕಾಪಾಡಿದೆ ಎಂದರು.

ವಿಧಾನಸೌಧದ ಮುಂದೆ 2.5 ಎಕರೆ ಜಾಗದಲ್ಲಿ ಮಹರ್ಷಿ ವಾಲ್ಮೀಕಿ ತಪೋವನ ಹಾಗೂ ಅಲ್ಲೇ 25 ಅಡಿ ಉದ್ದದ ವಾಲ್ಮೀಕಿ ಪುತ್ಥಳಿ ಸ್ಥಾಪನೆ ಮಾಡುವ ಮೂಲಕ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ವಾಲ್ಮೀಕಿ ಜನಾಂಗಕ್ಕೆ ಕೊಡುಗೆ ನೀಡಿದೆ ಎಂದು ಹೇಳಿದರು.

ಮೋದಿ ಅವರು ಬಿಜೆಪಿಯ 10 ವರ್ಷದ ಆಡಳಿತದಲ್ಲಿ 180 ಲಕ್ಷ ಕೋಟಿ ರೂ.ಗಳಷ್ಟು ಸಾಲ ಮಾಡಿ ದೇಶದ ಆರ್ಥಿಕ ವ್ಯವಸ್ಥೆ ಕೆಡಿಸಿದ್ದಾರೆ ಎಂದು ದೂರಿದರು. 

ಎಸ್ಸಿ, ಎಸ್ಟಿ, ಮೈನಾರಿಟಿ, ಬಡವರು ಹಾಗೂ  ದೇಶದ ರೈತರ ಮೇಲೆ ಬಿಜೆಪಿಗೆ ಕಾಳಜಿ ಇಲ್ಲ. ಈ ಸಂಗತಿಯನ್ನು ಎಲ್ಲರೂ ತಿಳಿದು ಕಾಂಗ್ರೆಸ್‌ಗೆ ಮತ ಹಾಕ ಬೇಕು ಎಂದು ಹೇಳಿದರು.

ಶಾಮನೂರು ಕುಟುಂಬವು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಅನುದಾನ ತಂದು ಜಿಲ್ಲೆಯ ಸಮಗ್ರ ಅಭಿವೃದ್ಧಿ ಮಾಡುವ ಗುರಿ ಇಟ್ಟುಕೊಂಡಿದ್ದು, ಈ ಜಿಲ್ಲೆಯ ಬದಲಾವಣೆಗೆ ಡಾ. ಪ್ರಭಾ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ಕಾಂಗ್ರೆಸ್‌ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್‌ ಮಾತನಾಡಿ, ನಮ್ಮ ಸರ್ಕಾರ ನುಡಿದಂತೆ ನಡೆದು ಜನರ ವಿಶ್ವಾಸ ಗಳಿಸಿದೆ. ಕೇಂದ್ರದಲ್ಲಿ ಕಾಂಗ್ರೆಸ್‌ ಗೆದ್ದರೆ ಮಹಿಳೆಯರಿಗೆ 1ಲಕ್ಷ ರೂ. ಕೊಡಲಿದೆ ಎಂದು ಹೇಳಿದರು.

ಜನರ ಸಮಸ್ಯೆಗೆ ಜವಾಬ್ದಾರಿಯುತವಾಗಿ ಸ್ಪಂದಿಸುವವನೇ ನಿಜವಾದ ನಾಯಕ. ಈ ನಿಟ್ಟಿನಲ್ಲಿ ನಾನೂ ಸಹ ನಿಮ್ಮ ಎಲ್ಲ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ ಎಂದು ಭರವಸೆ ನೀಡಿದರು.

ನಮ್ಮ ಜಿಲ್ಲೆಗೆ ವಿಮಾನ ನಿಲ್ದಾಣ, ಐಟಿ-ಬಿಟಿ ಕಂಪನಿಗಳ ಅವಶ್ಯಕತೆಯಿದ್ದು, ಇಂತಹ ಯೋಜನೆಗಳನ್ನು ಜಿಲ್ಲೆಗೆ ತಂದು ಇಲ್ಲಿನ ಸಮಗ್ರ ಅಭಿವೃದ್ಧಿ ಮಾಡುತ್ತೇನೆ ಎಂದು ಹೇಳಿದರು.

ವರಿಷ್ಠರು ರಾಜ್ಯದಲ್ಲಿ 18-20 ಸ್ಥಾನ ಗಳಿಸುತ್ತೇವೆ ಎಂದಿದ್ದರು. ಆ ಪಟ್ಟಿಯಲ್ಲಿ ನನ್ನ ಹೆಸರು ಇರುವಂತೆ ಮತದಾರರು ಆಶೀರ್ವಾದ ಮಾಡಿ ಎಂದು ಮನವಿ ಮಾಡಿಕೊಂಡರು.

ಡಾ.ಎ.ಬಿ. ರಾಮಚಂದ್ರಪ್ಪ ಪ್ರಾಸ್ತಾವಿಕ ಮಾತನಾಡಿದರು.

ಮುಖಂಡರಾದ ಎಸ್‌.ಆರ್‌. ಶೇಖರಪ್ಪ, ರಮೇಶ್‌ ಹೊದಿಗೆರೆ, ಎಸ್ಟಿ ಘಟಕದ ಕೆ.ಪಿ. ಪಾಲಯ್ಯ, ಹದಡಿ ಹಾಲಪ್ಪ, ಮೇಯರ್‌ ವಿನಾಯಕ ಪೈಲ್ವಾನ್‌, ಪಾಲಿಕೆ ಸದಸ್ಯ ಪಾಮೇನಳ್ಳಿ ನಾಗರಾಜ್‌, ಬಿ. ವೀರಣ್ಣ, ಎಸ್ಟಿ ಸಮಾಜದ ಮುಖಂಡರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

error: Content is protected !!