ಹೊನ್ನಾಳಿ, ಏ.23- ಬಿಸಿಲಿನ ಬೇಗೆಯಿಂದ ತತ್ತರಿಸಿ ಹೋಗಿದ್ದ ಜನತೆಗೆ ಸೋಮವಾರ ಸಂಜೆ ಸುರಿದ ಮಳೆ ತಂಪೆರೆಯಿತು. ಗುಡುಗು – ಸಿಡಿಲಿನ ಆರ್ಭಟ ಜೋರಾಗಿದ್ದಿತು. ಬಿರುಗಾಳಿಗೆ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿನ ಮರಗಳು ವಿದ್ಯುತ್ ಕಂಬದ ಮೇಲೆ ಬಿದ್ದ ಪರಿಣಾಮ 37ಕ್ಕೂ ಹೆಚ್ಚು ಕಂಬಗಳು ಬಿದ್ದು, ಕೆಲ ಕಾಲ ವಿದ್ಯುತ್ ವ್ಯತ್ಯಯ ಉಂಟಾಗಿದ್ದಿತು.
ಹೊನ್ನಾಳಿ ಹಾಗೂ ಸುತ್ತ-ಮುತ್ತಲಿನ ಹಳ್ಳಿಗಳಲ್ಲಿ ಸಾಧಾರಣ ಮಳೆಯಾಗಿದೆ. ಮಳೆ ಮಾಪನ ಕೇಂದ್ರದಲ್ಲಿ ಹೊನ್ನಾಳಿ ಪಟ್ಟಣ 55.0, ಹರಳಹಳ್ಳಿ 1.4 ಒಟ್ಟು 56.4 ಮಿ.ಮೀ.ಮಳೆಯಾಗಿರುವ ವರದಿಯಾಗಿದೆ. ತುಗ್ಗಲಹಳ್ಳಿ ಗ್ರಾಮದ ರತ್ನಮ್ಮ ಎಂಬುವವರ ಮನೆಯ ಮಹಡಿ ಗೋಡೆ ಗಾಳಿ – ಮಳೆಯ ರಭಸಕ್ಕೆ ಬಿದ್ದಿದ್ದು, ಯಾವುದೇ ಜೀವಹಾನಿ ಯಾಗಿರುವುದಿಲ್ಲವೆಂದು ಉಪತಹಶೀಲ್ದಾರ್ ಸುರೇಶ್ ಮಾಹಿತಿ ನೀಡಿದರು.