ದಾವಣಗೆರೆ, ಏ. 19- ಮಳೆಯಿಲ್ಲದೆ ಬಿಸಿಲಿನ ತಾಪಕ್ಕೆ ಬೆಂದು ಹೋಗಿರುವ ನಗರದ ಜನತೆಗೆ ವರುಣ ಮೊನ್ನೆ ಮಳೆಯ ಸಿಂಚನದ ಸ್ಪರ್ಷ ಮಾಡಿದ್ದು, ಇದು ಅಜ್ಜಯ್ಯ ಮಾಡಿದ ಸಂಕಲ್ಪದ ಪವಾಡ ಎಂದು ಭಕ್ತರು ಬಣ್ಣಿಸಿದ್ದಾರೆ.
ಅಜ್ಜಯ್ಯ ಎಂದೇ ರಾಜ್ಯದಲ್ಲಿ ಪ್ರಸಿದ್ಧ ರಾಗಿರುವ ತುಮಕೂರು ಜಿಲ್ಲೆ, ತಿಪಟೂರು ತಾಲ್ಲೂಕು ನೊಣವಿನಕೆರೆಯ ಶ್ರೀ ಕಾಡಸಿ ದ್ದೇಶ್ವರ ಮಠದ ಶ್ರೀ ಡಾ. ಕರಿವೃಷಭ ದೇಶೀ ಕೇಂದ್ರ ಶಿವಯೋಗೀಶ್ವರ ಮಹಾಸ್ವಾಮೀಜಿ ಮಾಡಿದ ಸಂಕಲ್ಪದಿಂದ ನಗರಕ್ಕೆ ಮಳೆ ಹನಿಯ ಸ್ಪರ್ಶವಾಗಿದೆ ಎಂದು ಭಕ್ತರು ಹೇಳಿದ್ದಾರೆ.
ಧಾರವಾಡ ಜಿಲ್ಲೆಯ ಅಮ್ಮಿನಬಾವಿ ಪಂಚಗ್ರಹ ಹಿರೇಮಠದ ಪ್ರಥಮ ಜಾತ್ರಾ ಮಹೋತ್ಸವದ ರಥೋತ್ಸವದಲ್ಲಿ ಪಾಲ್ಗೊಂಡು ವಾಪಾಸ್ ನೊಣವಿನಕೆರೆಗೆ ಹೋಗುವ ಮಾರ್ಗ ಮಧ್ಯೆ ಸ್ಥಳೀಯ ಕಾಯಿಪೇಟೆಯಲ್ಲಿರುವ ಲಿ. ವೇ. ಹೆಚ್.ಎಂ. ಸೋಮನಾಥಯ್ಯ ಅವರ ಹಿರೇಮಠದಲ್ಲಿ ಸ್ವಲ್ಪ ಹೊತ್ತು ಶ್ರೀಗಳು ವಿಶ್ರಾಂತಿ ಪಡೆದರು.
ಈ ಸಂದರ್ಭದಲ್ಲಿ ಶ್ರೀಗಳವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಅನೇಕ ಭಕ್ತರು, ಬಿಸಿಲಿನ ತಾಪಮಾನ ಮತ್ತು ಮಳೆ ಬಗ್ಗೆ ಶ್ರೀಗಳವರೊಂದಿಗೆ ಪ್ರಸ್ತಾಪಿಸಿ, ಮಳೆಗಾಗಿ ಸಂಕಲ್ಪ ಮಾಡುವಂತೆ ಬೇಡಿಕೆಯನ್ನಿಟ್ಟರು.
ಮಳೆಗಾಗಿ ವಿಶೇಷ ಪೂಜೆ – ಸಂಕಲ್ಪ ಮಾಡಿದ ಶ್ರೀಗಳು, ನಗರದಿಂದ ತಮ್ಮ ಪ್ರಯಾಣ ಆರಂಭಿಸಿದ ಕೆಲ ನಿಮಿಷಗಳಲ್ಲೇ ಕನಿಷ್ಟ 10 ನಿಮಿಷ ಮಳೆಯಾಗಿದ್ದು, ಇದು ನೊಣವಿನ ಕೆರೆ ಶ್ರೀಗಳ ಪವಾಡ ಎಂದು ಭಕ್ತರು ತಮ್ಮ ಭಕ್ತಿಯ ಪರಾಕಾಷ್ಟೆ ಮೆರೆದರು.
ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ನಿರ್ದೇಶಕರೂ ಆಗಿರುವ ದೇವನಗರಿ ಗ್ಯಾಸ್ ಏಜೆನ್ಸಿ ಮಾಲೀಕ ಹೆಚ್.ಎಂ. ರುದ್ರಮುನಿಸ್ವಾಮಿ ಮತ್ತು ಶ್ರೀಮತಿ ಹೆಚ್.ಎಂ. ಹೇಮಲತಾ ದಂಪತಿ, ಹೆಚ್.ಎಂ. ಪ್ರೀತಿ, ಹೆಚ್.ಎಂ ಪ್ರೀತಮ್ ಹಾಗೂ ಶ್ರೀ ಹಿರೇಮಠದ ಭಕ್ತವೃಂದದವರು ಶ್ರೀಗಳವರನ್ನು ಬರಮಾಡಿಕೊಂಡು ಬೀಳ್ಕೊಟ್ಟರು.