ಕಾಂಗ್ರೆಸ್ ಪ್ರಬಲ ಆಕಾಂಕ್ಷಿ ಜಿ.ಬಿ. ವಿನಯ್ ಕುಮಾರ್
ದಾವಣಗೆರೆ, ಏ.8- ದಾವಣ ಗೆರೆ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾನು ಸ್ಪರ್ಧಿಸುವುದು ಖಚಿತ ಎಂದು ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿಯಾಗಿದ್ದ ಇನ್ಸ್ಸೈಟ್ಸ್ ಐಎಎಸ್ ಸಂಸ್ಥಾಪಕರೂ, ನಿರ್ದೇಶಕರೂ ಆದ ಜಿ.ಬಿ. ವಿನಯ್ ಕುಮಾರ್ ತಮ್ಮ ಇಂಗಿತ ವ್ಯಕ್ತಪಡಿಸಿದರು.
ನಗರದ ಎಸ್.ಎಸ್. ಬಡಾವಣೆಯಲ್ಲಿನ ತಮ್ಮ ಗೃಹ ಕಚೇರಿಯಲ್ಲಿ ಇಂದು ಕರೆಯಲಾಗಿದ್ದ ಕಾರ್ಯಕರ್ತರು, ಬೆಂಬಲಿಗರ ಸಭೆಯಲ್ಲಿ ಅವರು ಮಾತನಾಡಿದರು.
`ಕೈ’ ಟಿಕೆಟ್ ತಪ್ಪಿದ ಹಿನ್ನೆಲ್ಲೆಯಲ್ಲಿ ಲೋಕಸ ಭಾ ವ್ಯಾಪ್ತಿಯ ಹಳ್ಳಿಗಳಲ್ಲಿ `ವಿನಯ ನಡಿಗೆ ಜನರ ಕಡೆಗೆ’ ಎಂಬ ವಿನೂತನ ಕಾರ್ಯಕ್ರ ಮದ ಮೂಲಕ ಮತ್ತೊಮ್ಮೆ ಜನಾಭಿ ಪ್ರಾಯ ಸಂಗ್ರಹಿಸಿ, ಇಂದು ನಡೆದ ಕಾರ್ಯಕರ್ತರ ಮತ್ತು ಬೆಂಬಲಿಗರ ಸಭೆ ಬಳಿಕ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದರು.
ನಾಯಕರ ಮಾತಿಗಿಂತ ಜನರ ಅಭಿಪ್ರಾಯಕ್ಕೆ ನಾನು ಮನ್ನಣೆ ನೀಡುತ್ತೇನೆ. ನನಗೂ ಇದು ಧರ್ಮ ಸಂಕಟದ ಪ್ರಶ್ನೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸಹ ಪಕ್ಷೇತರ ಅಭ್ಯರ್ಥಿ ಯಾಗಿ ಸ್ಪರ್ಧಿಸುವುದು ಸುಲಭದ ಮಾತಲ್ಲ ಎಂದು ಹೇಳಿದ್ದಾರೆ. ನಾನು ಜನರ ಬಯಕೆಯಂತೆ ಸ್ಪರ್ಧಿಸಲು ತೀರ್ಮಾನಿಸಿದ್ದೇನೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಪ್ರಬಲವಾಗಿರುವ ಎರಡು ಕುಟುಂಬಗಳ ಬಗ್ಗೆ ಜನಸಾಮಾನ್ಯರಲ್ಲಿ ಅಸಮಾ ಧಾನ ವ್ಯಕ್ತವಾಗುತ್ತಿರುವುದು ಕಂಡು ಬರುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ಮತ ಚಲಾಯಿಸಲು ಮುಂದಾಗಿದ್ದು, ಅಂತಹ ಮತಗಳು ನನಗೆ ಬರಲಿವೆ ಎಂಬ ವಿಶ್ವಾಸ ನನ್ನದು ಎಂದರು.
ಹೊಸಬರಿಗೆ ಅವಕಾಶಗಳು ಸಿಗಬೇಕೆಂಬುದು ನನ್ನ ಆಶಯ. ಕುಟುಂಬ ರಾಜಕಾರಣದ ವಿರುದ್ಧದ ಹೋರಾಟವೇ ಹೊರತು ಯಾವುದೇ ವ್ಯಕ್ತಿ ಮತ್ತು ಪಕ್ಷದ ವಿರುದ್ಧ ಅಲ್ಲ. ಸಚಿವ ಈಶ್ವರ ಖಂಡ್ರೆಯವರ ಪುತ್ರನಿಗೂ ಪಕ್ಷ ಟಿಕೆಟ್ ನೀಡಿದೆ. ಅವರಿಗೆ ಇಲ್ಲದ ಮಾನದಂಡ ನನಗೇಕೆ ಎಂದು ಪ್ರಶ್ನಿಸಿದರು.
ನನ್ನ ಕುಟುಂಬದವರ ಮತ್ತು ಕ್ಷೇತ್ರದ ಜನ ರೊಂದಿಗೆ ಚರ್ಚಿಸಿಯೇ ಪಕ್ಷೇತರವಾಗಿ ಸ್ಪರ್ಧಿ ಸುವ ನಿರ್ಧಾರ ಕೈಗೊಂಡಿದ್ದೇನೆ. ಯಾವುದೇ ಒತ್ತಡಕ್ಕೂ ಮಣಿಯುವುದಿಲ್ಲ ಮತ್ತು ಮುಂದೆ ಇಟ್ಟ ಹೆಜ್ಜೆಯನ್ನು ಹಿಂತೆಗೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು. ನಾನು ಅತ್ಯಂತ ಅಭಿಮಾನದಿಂದ ಕಾಣುವ ಸಿಎಂ ಸಿದ್ಧರಾಮಯ್ಯ ಅವರ ಮಾತು ಕೇಳಬೇಕೋ, ಶ್ರೀ ನಿರಂಜನಾನಂದಪುರಿ ಸ್ವಾಮೀಜಿಯವರ ಮಾತಿಗೆ ಮನ್ನಣೆ ನೀಡಿ ಸ್ಪರ್ಧೆಯಿಂದ ಹಿಂದೆ ಸರಿಯಬೇಕೋ ಎಂಬ ಧರ್ಮ ಸಂಕಟ ನನ್ನದಾಗಿತ್ತು. ಪಾದಯಾತ್ರೆ ಮತ್ತು ಇತರೆ ಸಂದರ್ಭಗಳಲ್ಲಿ ಹಳ್ಳಿಗಳಲ್ಲಿ ಸಂಗ್ರಹಿಸಿದ ಜನಾಭಿಪ್ರಾಯಕ್ಕೆ ಮನ್ನಣೆ ನೀಡಬೇಕೆಂಬ ಧರ್ಮ ಸಂಕಟ ನನ್ನದಾಗಿತ್ತು. ಆದರೆ ಜನರ ಪ್ರೀತಿ, ವಿಶ್ವಾಸ, ನಂಬಿಕೆಗೆ ಮನ್ನಣೆ ಕೊಡಲೇಬೇಕೆಂಬ ನಿರ್ಧಾರ ಕೈಗೊಂಡು ಸ್ಪರ್ಧೆ ಬಯಸಿದ್ದೇನೆ ಎಂದರು.
ಈಗಿನ ರಾಜಕೀಯ ಪರಿಸ್ಥಿತಿಯನ್ನು ಗಂಭೀರವಾಗಿ ಅವಲೋಕಿಸಿದಾಗ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಮಧ್ಯೆ ನಾನು ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಿದರು.