ಎಐಡಿಎಸ್ಓ ಟೀಕೆ
ದಾವಣಗೆರೆ,ಏ.2- ಪಿಹೆಚ್ಡಿ ಪ್ರವೇಶಕ್ಕೆ ನೆಟ್ ಅರ್ಹತೆಯನ್ನು ಕಡ್ಡಾಯಗೊಳಿಸಿರುವ ಯುಜಿಸಿಯ ನಿಲುವನ್ನು ಎಐಡಿಎಸ್ಓ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಖಂಡಿಸಿದ್ದಾರೆ.
ಶಿಕ್ಷಣ ವ್ಯವಸ್ಥೆಯ ಇಂದಿನ ಇತಿಮಿತಿ ಗಳಲ್ಲಿಯೇ ಪಿಹೆಚ್ಡಿ ಶೈಕ್ಷಣಿಕ ಅರ್ಹತೆಯ ಪ್ರಮುಖ ಮಾನದಂಡವಾಗಿದೆ. ಈಗಾಗಲೇ ಹಲವು ಹಂತಗಳಲ್ಲಿ ವ್ಯಾಪಾರೀಕರಣಗೊಂಡಿರುವ ಶಿಕ್ಷಣ ವ್ಯವಸ್ಥೆಯಲ್ಲಿ, ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದ ಜನಸಮುದಾಯದ ಕೆಲವೇ ಕೆಲವು ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಮುಗಿಸಿ ಪಿಹೆಚ್ಡಿವರೆಗೂ ತಲುಪುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ನೆಟ್ ಅರ್ಹತೆಯನ್ನು ಕಡ್ಡಾಯಗೊಳಿಸಿರುವುದು ಆಕಾಂಕ್ಷಿಗಳಲ್ಲಿ ಅನೇಕರನ್ನು ಪಿಎಚ್ ಡಿಯಿಂದ ದೂರ ತಳ್ಳುತ್ತದೆ.
ಪ್ರಾದೇಶಿಕ ವೈವಿಧ್ಯತೆಗೆ ಪೂರಕವಾಗಿ ಶಿಕ್ಷಣವನ್ನು ಒದಗಿಸಲು ವಿಶ್ವವಿದ್ಯಾಲಯಗಳು ಸ್ಥಾಪನೆಗೊಂಡಿವೆ. ಪ್ರತಿ ವಿಶ್ವವಿದ್ಯಾಲಯಗಳು ವಿಭಿನ್ನತೆಯಿಂದ ಕೂಡಿವೆ. ಹೀಗಿರುವಾಗ, ಎಲ್ಲ ವಿಶ್ವವಿದ್ಯಾಲಯಗಳಿಗೂ ಒಂದು ಸಾಮಾನ್ಯ ಪರೀಕ್ಷೆಯನ್ನು ನಿಗದಿಪಡಿಸುವುದು ಶಿಕ್ಷಣದ ಪ್ರಜಾತಾಂತ್ರಿಕ ಪರಿಕಲ್ಪನೆಯನ್ನು ನಾಶಗೊಳಿಸುತ್ತದೆ.
ನೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಕೋಚಿಂಗ್ ಅನಿವಾರ್ಯವಾಗಿದೆ. ದುಬಾರಿ ಕೋಚಿಂಗ್ ಪಡೆಯಲು ಸಾಧ್ಯವಿರದ ಅಭ್ಯರ್ಥಿ ಗಳನ್ನು ಪಿಹೆಚ್ಡಿಯಿಂದ ವಂಚಿತರನ್ನಾಗಿಸುವ ಈ ನಿಲುವು ಅನ್ಯಾಯದಿಂದ ಕೂಡಿದೆ. ಕೋಚಿಂಗ್ ಮಾಫಿಯಾಗೆ ಮಣೆ ಹಾಕಲು ಇದನ್ನು ಜಾರಿಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ನಿಯಮವನ್ನು ಈ ಕೂಡಲೇ ಹಿಂಪಡೆಯಬೇಕೆಂದು ಜಿಲ್ಲಾ ಕಾರ್ಯದರ್ಶಿ ಟಿ.ಎಸ್.ಸುಮನ್ ಆಗ್ರಹಿಸಿದ್ದಾರೆ.