ದಾವಣಗೆರೆ, ಏ. 1- ನಮ್ಮ ನಾಡು `ಕರ್ನಾಟಕ’ ಎಂದು ನಾಮಾಂಕಿತವಾಗಿ 50 ವರ್ಷ ತುಂಬಿದ ಈ ಸುವರ್ಣ ಸಂದರ್ಭದಲ್ಲಿ ಸರ್ವ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ನಾಡು-ನುಡಿಗಾಗಿ ಕೆಲಸ ಮಾಡಿದ ಸಂಘ ಸಂಸ್ಥೆಗಳಿಗೆ, ಕನ್ನಡ ಶಾಲೆಗಳಿಗೆ, ಕರ್ನಾಟಕ ಏಕೀಕರಣ ಹೋರಾಟದಲ್ಲಿ ಭಾಗಿಯಾದ ಹೋರಾಟಗಾರರಿಗೆ `ಸುವರ್ಣ ಕರ್ನಾಟಕ ಕನ್ನಡ ಸಾಹಿತ್ಯ ಪರಿಷತ್ತು ಪ್ರಶಸ್ತಿ’ ನೀಡುವ ಯೋಜನೆಯನ್ನು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಇದೇ ತಿಂಗಳ ಭಾಲ್ಕಿಯಲ್ಲಿ ಹಮ್ಮಿಕೊಂಡಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ವಾಮದೇವಪ್ಪ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆಯಲ್ಲಿ 100/75/50 ವರ್ಷ ತುಂಬಿರುವ ಕನ್ನಡ ಶಾಲೆಗಳು, ಕನ್ನಡ ನಾಡು ನುಡಿಗಾಗಿ ಕೆಲಸ ಮಾಡಿರುವ ಸಂಘ ಸಂಸ್ಥೆಗಳು, ಹಾಗೆಯೇ ವೈಯಕ್ತಿಕ ಪ್ರಶಸ್ತಿಗಾಗಿ ಕರ್ನಾಟಕ ಏಕೀಕರಣದ ಹೋರಾಟದಲ್ಲಿ ಭಾಗಿಯಾದ ದಾವಣಗೆರೆ ಜಿಲ್ಲೆಯ ಕನ್ನಡ ಪರ ಹೋರಾಟಗಾರರು, ಕುವೆಂಪು ಕನ್ನಡ ಭವನದಲ್ಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಛೇರಿಗೆ ಖುದ್ದಾಗಿ ಬಂದು ಅಥವಾ ಪರಿಷತ್ತಿನ ಜಿಲ್ಲಾ ಗೌರವ ಕೋಶಾಧ್ಯಕ್ಷ ಕೆ.ರಾಘವೇಂದ್ರ ನಾಯರಿ (98443 14543) ಅವರನ್ನು ಇದೇ ದಿನಾಂಕ 4ರೊಳಗೆ ಹೆಸರು ನೋಂದಾಯಿಸಬಹುದು.