ಮಲೇಬೆನ್ನೂರು, ಮಾ.15- ಪಾನಿಪೂರಿ ಸೇವನೆ ಮಾಡಿದ್ದರು ಎನ್ನಲಾದ 19 ಮಕ್ಕಳು ವಾಂತಿ-ಬೇಧಿಯಿಂದ ಅಸ್ವಸ್ಥಗೊಂಡ ಘಟನೆ ಗುರುವಾರ ತಡರಾತ್ರಿ ಮಲೇಬೆನ್ನೂರಿನಲ್ಲಿ ನಡೆದಿದೆ.
ಪಟ್ಟಣದ ಜಾಮೀಯಾ ಮಸೀದಿ ಬಳಿ ಗುರುವಾರ, ಸಂಜೆ ರಂಜಾನ್ ಉಪವಾಸ ಅಂತ್ಯ ಮಾಡಿದ ನಂತರ ಮಸೀದಿ ಮುಂಭಾಗ ಮಾರಾಟ ಮಾಡುತ್ತಿದ್ದ ಪಾನಿಪೂರಿಯನ್ನು ಸೇವಿಸಿದ ಮಕ್ಕಳ ಪೈಕಿ 19 ಮಕ್ಕಳು ರಾತ್ರಿ ಅವರವರ ಮನೆಯಲ್ಲಿ ವಾಂತಿ-ಭೇದಿ ಮಾಡಿಕೊಂಡು ಅಸ್ವಸ್ಥರಾದ ತಕ್ಷಣ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆ ತಂದು ಚಿಕಿತ್ಸೆ ಕೋಡಿಸಿದ್ದಾರೆ.
19 ಮಕ್ಕಳಲ್ಲಿ 7 ಮಕ್ಕಳು ತೀವ್ರವಾಗಿ ಸುಸ್ತಾಗಿದ್ದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಸಿ.ಜಿ. ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಪೈಕಿ ಒಂದು ಮಗುವನ್ನು ಬಾಪೂಜಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯಾಧಿಕಾರಿ ಡಾ.ಲಕ್ಷ್ಮಿದೇವಿ ಮತ್ತು ಪುರಸಭೆ ಮುಖ್ಯಾಧಿಕಾರಿ ಎ.ಸುರೇಶ್ ತಿಳಿಸಿದ್ದಾರೆ.
ತಹಶೀಲ್ದಾರ್ ಗುರುಬಸವರಾಜ್, ಜಿಲ್ಲಾ ಅಂಕಿತ ಅಧಿಕಾರಿ ಡಾ. ನಾಗರಾಜ್, ಆಹಾರ ಸಂರಕ್ಷಣಾಧಿಕಾರಿ ನವೀನ್, ತಾ. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಉಮ್ಮಣ್ಣ ಅವರುಗಳು ಸ್ಥಳಕ್ಕೆ ಭೇಟಿ ನೀಡಿ, ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಕ್ಕಳ ಆರೋಗ್ಯ ವಿಚಾರಿಸಿದರು.
ನಂತರ ಪುರಸಭೆ ಸಿಓ ಸುರೇಶ್ ಹಾಗೂ ವೈದ್ಯಾಧಿಕಾರಿ ಡಾ. ಲಕ್ಷ್ಮಿದೇವಿ ಅವರಿಂದ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡ ಅವರು, ಜಾಮೀಯಾ ಮಸೀದಿಗೂ ತೆರಳಿ, ಅಲ್ಲಿ ಪಾನಿಪೂರಿ ಸೇರಿದಂತೆ ಇತರೆ ತಿಂಡಿಗಳ ಬಳಕೆ ಬಗ್ಗೆ ಜನರಲ್ಲಿ ಅರಿವು ಮೂಡಿಸಿದರು.
ಪಾನಿಪೂರಿ, ಗೋಬಿ ಮಂಚೂರಿ ಹಾಗೂ ಇತರೆ ರೈಸ್ ಪದಾರ್ಥಗಳಿಗೆ ಕೆಂಪು ಬಣ್ಣ ಬೆರಸದಂತೆ ಕಟ್ಟು ನಿಟ್ಟಿನ ಆದೇಶ ನೀಡಿದರು.
ಆರೋಗ್ಯ ಇಲಾಖೆಯ ಸುಧಾ ಸುರೇಖಾ, ನಾಗರಾಜ್, ದಾದಾಪೀರ್, ಕಿರಣ್, ಕಂದಾಯ ನಿರೀಕ್ಷಕ ಆನಂದ್, ಗ್ರಾಮ ಲೆಕ್ಕಾಧಿಕಾರಿ ಅಣ್ಣಪ್ಪ, ಪುರಸಭೆಯ ಉಮೇಶ್, ಪ್ರಭು, ನವೀನ್, ಶಿವರಾಜ್ ಈ ವೇಳೆ ಹಾಜರಿದ್ದರು.
ನಂತರ ಪುರಸಭೆ ವತಿಯಿಂದ ಪಟ್ಟಣದಲ್ಲಿ ಪಾನಿಪೂರಿ, ಗೋಬಿ ಮಂಚೂರಿ ಬಳಸುವ ಬಗ್ಗೆ ವಾಹನದ ಧ್ವನಿವರ್ಧಕದ ಮೂಲಕ ಜಾಗೃತಿ ಮೂಡಿಸಲಾಯಿತು.