ನಗರದಲ್ಲಿ ಇಂದು – ನಾಳೆ `ಕರಿನೀರ ವೀರ’ ನಾಟಕ ಪ್ರದರ್ಶನ

ದಾವಣಗೆರೆ, ಫೆ. 9- ರಂಗಭೂಮಿ ಟ್ರಸ್ಟ್ ಕೊಡಗು, ಪ್ರೇರಣಾ ಯುವ ಸಂಸ್ಥೆ ಸಹಯೋಗದಲ್ಲಿ ನಾಳೆ ದಿನಾಂಕ 10 ಮತ್ತು 11 ರಂದು ಸಂಜೆ 6 ಗಂಟೆಗೆ ಎರಡು ದಿನಗಳ ಕಾಲ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಬದುಕಿನ ಕಥಾನಕ `ಕರಿನೀರ ವೀರ’ ನಾಟಕ ಪ್ರದರ್ಶನವನ್ನು ಪದ್ಮಶ್ರೀ ಚಿಂದೋಡಿ ಲೀಲಾ ಕಲಾ ಕ್ಷೇತ್ರದಲ್ಲಿ ಆಯೋಜಿಸಲಾಗಿದೆ ಎಂದು ಪ್ರೇರಣಾ ಯುವ ಸಂಸ್ಥೆ ಅಧ್ಯಕ್ಷ ಎಸ್.ಟಿ. ವೀರೇಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಡ್ಡಂಡ ಕಾರ್ಯಪ್ಪ ರಚನೆ, ಪರಿಕಲ್ಪನೆ, ವಿನ್ಯಾಸ ಹಾಗೂ ನಿರ್ದೇಶನದಲ್ಲಿ ನಾಟಕ ಪ್ರದರ್ಶನಗೊಳ್ಳಲಿದೆ. ಸುಬ್ರಹ್ಮಣ್ಯ ಮೈಸೂರು ಹಾಗೂ ಗಜಾನನ ನಾಯ್ಕ ಸಂಗೀತ ನೀಡಿದ್ದಾರೆ. ಅನಿತಾ ಕಾರ್ಯಪ್ಪ ವಸ್ತ್ರವಿನ್ಯಾಸ ಮಾಡಿದ್ದು, ಮಂಜುನಾಥ ಶಿಲ್ಪಿ ಅವರ ರಂಗ ಸಹಕಾರವಿದೆ ಎಂದು ಹೇಳಿದರು.

ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರ ಸಾವರ್ಕರ್ ಅವರ ಸಾಹಸಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಎರಡು ಗಂಟೆಗಳ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.

ಈಗಾಗಲೇ ಮೈಸೂರು, ಶಿವಮೊಗ್ಗ, ಶಿಕಾರಿಪುರ, ಹುಬ್ಬಳ್ಳಿ, ಧಾರವಾಡದಲ್ಲಿ ನಾಟಕ ಪ್ರದರ್ಶನ ಕಾಣಲಿದೆ. ಇತ್ತೀಚಿನ ದಿನಗಳಲ್ಲಿ ರಂಗಭೂಮಿ ಚಟುವಟಿಕೆಗಳು ಕ್ಷೀಣಿಸುತ್ತಿವೆ. ಒಂದು ಕಾಲದಲ್ಲಿ ದಾವಣಗೆರೆಯ ರಂಗಭೂಮಿಯ ತವರುಮನೆಯಾಗಿತ್ತು. ವರ್ಷವಿಡೀ ನಾಟಕ ಪ್ರದರ್ಶನಗಳು ನಡೆಯುತ್ತಿದ್ದವು. ಆದರೀಗ ಅವುಗಳು ಕಡಿಮೆಯಾಗುತ್ತಿವೆ ಎಂದು ಮಾಹಿತಿ ನೀಡಿದರು.

ಫೆ. 10 ಮತ್ತು 11 ರಂದು ಎರಡು ದಿನಗಳ ನಾಟಕ ಪ್ರದರ್ಶನಕ್ಕೆ ರಂಗಕರ್ಮಿ ಚಿಂದೋಡಿ ಚಂದ್ರಧರ ಚಾಲನೆ ನೀಡಲಿದ್ದಾರೆ. 100 ಟಿಕೆಟ್ ದರ ನಿಗದಿ ಮಾಡಲಾಗಿದೆ. ಆಸಕ್ತರು 9844422677, 9945977433 ಗೆ ಸಂಪರ್ಕಿಸಿ ಟಿಕೆಟ್ ಪಡೆಯಬಹುದು.

ಪತ್ರಿಕಾಗೋಷ್ಠಿಯಲ್ಲಿ ಮಹಾನಗರ ಪಾಲಿಕೆ ವಿಪಕ್ಷ ನಾಯಕ ಕೆ. ಪ್ರಸನ್ನಕುಮಾರ್, ಸದಸ್ಯ ಶಿವಾನಂದ್, ಪ್ರೇರಣಾ ಯುವ ಸಂಸ್ಥೆಯ ನಿರ್ದೇಶಕ ಅಶೋಕ್, ಸಚ್ಚಿನ್ ವೆರ್ಣೇಕರ್ ಉಪಸ್ಥಿತರಿದ್ದರು. 

error: Content is protected !!