ಹರಿಹರದಲ್ಲಿ ತಾಲ್ಲೂಕು ಆಡಳಿತದಿಂದ ಗಾಂಧಿ ಜಯಂತಿ ಕಾರ್ಯಕ್ರಮ
ಹರಿಹರ, ಅ.2- ಮಹಾತ್ಮ ಗಾಂಧೀಜಿ ತಮ್ಮ ಜೀವನದುದ್ದಕ್ಕೂ ಅಹಿಂಸೆ ಮತ್ತು ಸತ್ಯದ ಮಾರ್ಗವನ್ನು ಅನುಸರಿಸಿ, ಇಡೀ ಮಾನವ ಕುಲಕ್ಕೆ ಮಾನವೀಯತೆಯ ಪಾಠ ಕಲಿಸಿದ್ದಲ್ಲದೆ, ಜೀವನ ನಡೆಸಲು ಸರಿಯಾದ ಮಾರ್ಗವನ್ನು ಕಲ್ಪಿಸಿದರು ಎಂದು ಶಾಸಕ ಬಿ.ಪಿ. ಹರೀಶ್ ಅಭಿಪ್ರಾಯಪಟ್ಟರು.
ನಗರದ ಗುರುಭವನದಲ್ಲಿ ಇಂದು ನಡೆದ ಗಾಂಧಿ ಜಯಂತಿ ಆಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಹಾತ್ಮ ಗಾಂಧೀಜಿ ಸೌಹಾರ್ದತೆ ಮತ್ತು ಸಹೋದರತ್ವದ ಜಾಗೃತಿ ಹೋರಾಟ ಮಾಡುವ ಮೂಲಕ ಹಿಂದೂ-ಮುಸ್ಲಿಂ ಐಕ್ಯತೆಗೆ ಶ್ರಮಿಸಿದ್ದರು. ಗಾಂಧೀಜಿಯವರ ಚಿಂತನೆಗಳಿಂದ ಭಾರತ ಮಾತ್ರವಲ್ಲದೆ, ಹೊರ ದೇಶಗಳಲ್ಲಿ ಲಕ್ಷಾಂತರ ಜನರು ಪ್ರಭಾವಿತರಾಗಿದ್ದು ಮತ್ತು ಅವರಿಂದ ಸ್ಪೂರ್ತಿ ಪಡೆದಿದ್ದಾರೆ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡುತ್ತಾ, ಅಹಿಂಸಾತ್ಮಕ ವಿಧಾನಗಳಿಂದ ವಿಶ್ವಮಟ್ಟದಲ್ಲಿ ಪ್ರಸಿದ್ಧಿ ಹೊಂದಿದ್ದರು.
ಅತ್ಯುತ್ತಮ ನಾಯಕತ್ವದ ಸಾಮರ್ಥ್ಯ ಹೊಂದಿ, ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರೀಯವಾಗಿ ಪಾಲ್ಗೊಂಡರು. ಅವರು ಚಂಪಾರಣ್ಯ ಸತ್ಯಾಗ್ರಹ, ಅಸಹಕಾರ ಚಳವಳಿ, ದಂಡಿ ಮಾರ್ಚ್, ಕ್ವಿಟ್ ಇಂಡಿಯಾ ಚಳುವಳಿ ಹೀಗೆ ಹತ್ತು ಹಲವು ಪ್ರಮುಖ ಚಳವಳಿ ಮಾಡಿ, ಬ್ರಿಟಿಷ್ ಆಡಳಿತದ ವಿರುದ್ಧ ಹೋರಾಟ ಪ್ರಾರಂಭಿಸಿ ಸತ್ಯ, ಅಹಿಂಸಾ ಮಾರ್ಗ ಅನುಸರಿಸಿ ಗುರಿಯನ್ನು ಸಾಧಿಸಬಹುದು ಎಂಬುದನ್ನು ಸಾಬೀತುಪಡಿಸಿದರು.
ಧರ್ಮ ಮತ್ತು ಜಾತಿಯ ಮೇಲೆ ತಾರತಮ್ಯ ಮಾಡಬಾರದು. ಎಲ್ಲರನ್ನೂ ಸಮಾನವಾಗಿ ಕಾಣಬೇಕು ಹಾಗೂ ಅಸ್ಪೃಶ್ಯತೆ ಮತ್ತು ಅನಿಷ್ಟ ಪದ್ಧತಿಗಳ ವಿರುದ್ಧ ಧ್ವನಿ ಎತ್ತಿದರು. ರೈತರ ಬಗ್ಗೆ ಅಪಾರ ಕಾಳಜಿಯನ್ನು ಹೊಂದಿದ್ದಲ್ಲದೆ ಸ್ಥಳೀಯ ಕೈಗಾರಿಕೆಗಳಿಗೆ ಹೆಚ್ಚು ಉತ್ತೇಜನ ನೀಡಿದರು. ಇಂತಹ ವಿಶ್ವಮಟ್ಟದ ನಾಯಕನ ಆದರ್ಶದ ಗುಣಗಳನ್ನು ಇಂದಿನ ಯುವಕರು ಮೈಗೂಡಿಸಿಕೊಳ್ಳುವಂತೆ ಹೇಳಿದರು.
ತಹಶೀಲ್ದಾರ್ ಪೃಥ್ವಿ ಸಾನಿಕಂ ಮಾತನಾಡಿ, ಮಹಾತ್ಮ ಗಾಂಧೀಜಿಯವರಲ್ಲಿ ಆಳವಾದ ಬುದ್ಧಿವಂತಿಕೆ ಮತ್ತು ಸ್ಫೂರ್ತಿದಾಯಕ ಅಂಶಗಳು ಹೆಚ್ಚಾಗಿದ್ದ ಪರಿಣಾಮ ಅವರು, ವಿಶ್ವ ಮಟ್ಟದಲ್ಲಿ ಪ್ರಖ್ಯಾತಿ ಪಡೆಯುವಂತಾಯಿತು. ಅವರು ಸ್ವಾತಂತ್ರ್ಯ ಕ್ಕಾಗಿ ಕೊಟ್ಟಂತಹ ಕೊಡುಗೆ ಮತ್ತು ಅವರಲ್ಲಿ ಇರುವಂತಹ ತತ್ವ, ಸಿದ್ಧಾಂತಗಳು ಇಂದಿಗೂ ಜನ ಮಾನಸದಲ್ಲಿ ಉಳಿದು ಕೊಂಡಿವೆ.
ಅವರು ಬಾಲ್ಯ ವಿವಾಹ ಪದ್ಧತಿ, ಸತಿ ಪದ್ಧತಿ, ಅಸ್ಪೃಶ್ಯತೆ, ಸಾಮಾಜಿಕ ಅನಿಷ್ಠ ಪದ್ಧತಿ ಮತ್ತು ಉಪ್ಪಿನ ತೆರಿಗೆ ವಿರುದ್ಧ ಹೋರಾಟ ನಡೆಸಿದ ಪರಿಣಾಮ ಇಂದು ದೇಶವು ಬಹಳಷ್ಟು ಸುಧಾರಣೆಯತ್ತ ಸಾಗುವುದಕ್ಕೆ ದಾರಿಯಾಗಿದೆ. ಅವರಲ್ಲಿ ಇರುವಂತಹ ಸರಳತೆಯ ಗುಣಗಳನ್ನು ಭಾರತ ಅಷ್ಟೇ ಅಲ್ಲದೆ ವಿಶ್ವಮಟ್ಟದಲ್ಲಿರುವಂತಹ ಜನರೂ ಸಹ ಇಷ್ಟಪಟ್ಟರು. ಹಾಗಾಗಿ ಅವರು ಅನೇಕ ಸಾಧನೆ ಮಾಡುವುದಕ್ಕೆ ದಾರಿಯಾಯಿತು ಹಾಗೂ ಅವರು ಪ್ರಾಮಾಣಿಕತೆ ಮತ್ತು ಸತ್ಯದ ಅನುಯಾಯಿಗಳಾಗಿದ್ದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ನಿಂಬಕ್ಕ ಚಂದಪೂರ್, ಸದಸ್ಯರಾದ ಪಕ್ಕಿರಮ್ಮ, ನಾಗರತ್ನ, ಗ್ರೇಡ್-2 ತಹಶೀಲ್ದಾರ್ ಶಶಿಧರಯ್ಯ, ಪೌರಾಯುಕ್ತ ಐಗೂರು ಬಸವರಾಜ್, ಬಿಇಓ ಹನುಮಂತಪ್ಪ, ಲೋಕೋಪಯೋಗಿ ಶಿವಮೂರ್ತಿ, ಪಿಎಸ್ಐ ಚಿದಾನಂದ್, ಬಸವರಾಜ್ ಸ್ವಾಮಿ, ವಿ.ಎ. ವಿಜಯಕುಮಾರ್ ಇತರರು ಹಾಜರಿದ್ದರು.